Wednesday, October 14, 2009

ಅಷ್ಟಕ್ಕೂ ಕೋಪಕ್ಕೆ ಕಾರಣವೇನು?

ಹಮೇ ತುಮ್‌ಸೇ ಪ್ಯಾರ್ ಕಿತ್‌ನಾ,
ಯೆ ಹಮ್ ನಹೀ ಜಾನ್‌ತೇ
ಮಗರ್ ಜೀ ನಹೀ ಸಕ್‌ತೇ
ತುಮ್ಹಾರೇ ಬಿನಾ

ಇನ್ನು ನಿನ್ನನ್ನಗಲಿ ಇರುವುದು ಅಸಾಧ್ಯ ಮಾತು. ಇಷ್ಟು ದಿವಸ ನೆನಪುಗಳ ಮೆರವಣಿಗೆಯಲಿ ಕಾಲ ಕಳೆದಿದ್ದೇ ನನ್ನ ಪಾಲಿನ ಅದ್ಭುತ. ಇದುವರೆಗೂ ಮಾತು ಬಿಟ್ಟು ನಾನು ಇಷ್ಟು ದಿನ ಕೂತವಳಲ್ಲ. ಆದರೆ ಈ ಬಾರಿ ಮಾತ್ರ ಹಾಗಾಗಿಲ್ಲ. ಮೊದಲೇ ನಾನು ಮಾತಿನ ಮಳ್ಳಿ!

ನೀನು ಪೋನ್ ಮಾಡಿ ಇಂದಿಗೆ ತಿಂಗಳು ಐದೂವರೆ ಭರ್ತಿ. ನಿನ್ನ ಪತ್ರ ಕಾಣದೆ ಒಂದೂ ಮುಕ್ಕಾಲು ವರ್ಷ. ಹಿಂದೆಲ್ಲಾ ವಾರಕ್ಕೆ ಮೂರು ಪತ್ರ, ನಿತ್ಯ ಮೂರೂವರೆ ತಾಸು ಮೊಬೈಲ್ ಮಾತು. ಪ್ರೀತಿಸುವ ಇದಕ್ಕಿಂತ ದೊಡ್ಡ ಸಂಭ್ರಮ ಎಲ್ಲಿಯದು? ನೀನು ಮಾತು ಮರೆತಿದ್ದೀಯಾ. ಅಷ್ಟಕ್ಕೂ ಈ ಕೋಪಕ್ಕೆ ಕಾರಣವೇನು?

ನಾನಾಗಲೇ ಎಲ್ಲವನ್ನೂ ಬಿಟ್ಟು ನಿನ್ನ ಜತೆ ಬರಲು ಸಿದ್ಧಳಾಗಿದ್ದೀನಿ. ಆದರೆ ಬಂದು ನೀನು ಕರೆಯಬೇಕು ಅಷ್ಟೆ. ಇನ್ನು ದುಃಖ ದುಮ್ಮಾನಗಳಿಗೆ ಜಾಗ ಕೊಡುವುದಿಲ್ಲ.
ದುನಿಯಾ ಹೈ ಮೇರೇ ಪೀಛೇ,
ಲೇಕಿನ್ ಮೈ ತೇರೇ ಪೀಛೇ,
ಅಪ್ನಾ ಬನಾಲೇ ಮೇರಿ ಜಾನ್...

ನಿನ್ನವಳಾಗಲು ಕಾಯುತ್ತಿರುವವಳು.

Wednesday, October 7, 2009

ನಿನ್ನ ಮಾತಿಗೆ, ಅದರ ರೀತಿಗೆ..

ಭಾವಗಳೊಡೆಯಾ ಪ್ರಣಾಮ,

ನಿಮ್ಮ ಪತ್ರ ಕೈ ಸೇರಿತು. ಇಲ್ಲಿ ಮಳೆಗಾಲ ಮುಗಿದರೂ ಸುರಿಯುತ್ತಿರುವ ಮಳೆಯ ನಡುವೆ ನಿಮ್ಮ ಪತ್ರದ ಭಾವನೆಗಳಲಿ ತೇಲಿ ನಾನು ಒದ್ದೆ ಒದ್ದೆ. ನಿಮ್ಮ ಪತ್ರದ ಕೊನೆಯ ಸಾಲುಗಳನ್ನು ಓದಿಯಾದ ನಂತರ ಹಿಡಿದಿರಿಸಲಸಾಧ್ಯವಾಗಿದ್ದು ಕಣ್ಣಂಚಲ್ಲಿ ಬಂದ ನೀರು.

ಅದ್ಯಾರು ನಿಮಗೆ ಈ ಭಾವನೆಗಳನ್ನು ಇಷ್ಟು ಸುಂದರವಾಗಿ ಬರೆಯಲು ಕಲಿಸಿದರೋ ಗೊತ್ತಿಲ್ಲ. ಆದರೆ ನಾನು ಮಾತ್ರ ನಿಮ್ಮ ಪ್ರತಿ ಶಬ್ದಗಳ ಪೋಣಿಸುವಿಕೆಗೂ ಶರಣಾರ್ಥಿಯಾಗಿದ್ದೇನೆ. ನಮ್ಮೂರಲ್ಲಿ ಮಲ್ಲಿಗೆಯನ್ನು ಅದ್ಭುತವಾಗಿ ಪೋಣಿಸಿದಂತೆ ಭಾವನೆಗಳನ್ನು ನೀವು ಅಕ್ಷರ ರೂಪದಲ್ಲಿ ಜೋಡಿಸುವುದನ್ನು ನೋಡಿದರೆ ನಾನಿಲ್ಲಿ ಕರಗಿ ಹೋಗುತ್ತಿದ್ದೇನೆ.

ಹಾಗೆ ನಿಮ್ಮಿಂದ ಒಂದು ಪತ್ರ ಬಂದಾಗಲೂ ನಾನು ಹಳೆಯ ಪತ್ರ ಕಡತಗಳನ್ನು ತೆಗೆದು ನಿಮ್ಮ ಓಲೆಯನ್ನು ಒಂದೊಂದಾಗಿ ಓದಿನರಮನೆಗೆ ಹಾಕಿಕೊಳ್ಳುತ್ತೇನೆ. ಆದರೆ ಯಾವ ಪತ್ರವೂ ನನಗೆ ಮೋಸ ಮಾಡಿಲ್ಲ. ಈಗ ನಿಮ್ಮ ಮುಂದಿನ ಪತ್ರದ ದಾರಿ ಕಾಯ್ತಾ ಕೂತಿದ್ದೀನಿ.

ಮರೆತೇ ಬಿಟ್ಟಿದ್ದೆ, ಮೊನ್ನೆ ನಿಮ್ಮಮ್ಮ ಸಿಕ್ಕಿದ್ರು. ಅವರಿಗೆ ನೀವಿನ್ನೂ ಮದುವೆಗೆ ಒಪ್ಪುತ್ತಿಲ್ಲ ಎಂದು ಕೋಪ. ಅದಕ್ಕೇ ನಿಮ್ಮನ್ನು ಒಪ್ಪಿಸುವ ಜವಾಬ್ದಾರಿಯನ್ನು ನನ್ನ ಹೆಗಲಿಗೇರಿಸಿದ್ದಾರೆ. ಅವರಿಗೆ ಮಾತು ಕೊಟ್ಟಿದ್ದೇನೆ ನಿಮ್ಮನ್ನು ಒಪ್ಪಿಸಿ ಮನೆ ಮಗಳಾಗಿ ಶೀಘ್ರದಲ್ಲೇ ಬರುತ್ತೇನೆಂದು. ಅತ್ತೆಗೆ ಅದಾಗಲೇ ಸೊಸೆ ಬರುವ ಸಂಭ್ರಮ. ಇನ್ನು ಕೇವಲ ನೀವು ಹೂಂಗುಟ್ಟಿದರೆ ಸಾಕು. ನಾನೂ ಇಲ್ಲಿ ಚಾತಕಪಕ್ಷಿಯಂತೆ ಕಾಯುತ್ತಾ ಇದ್ದೀನಿ ನಿಮ್ಮ ಜತೆ ಕಳೆಯುವ ಸುಮಧುರ ಕ್ಷಣಕ್ಕಾಗಿ, ಆ ಮಧುರ ಅನುಭೂತಿಗಾಗಿ. ಒಪ್ತೀರಾ ಪ್ಲೀಸ್.

ನಿಮ್ಮವಳು

Wednesday, September 30, 2009

ನನಗೊ ನೀನು ಕೃಷ್ಣನ ತೋರುವ ಕಣ್ಣು...!

ಚೆಂದುಳ್ಳಿ ಚೆಲುವೆ,

ನಿನ್ನ ಕೈಗೆ ತಲುಪಿಸಬೇಕು ಎನ್ನುವ ಆಸೆ ಹೊತ್ತು ಬರೆಯುತ್ತಿರುವ ೨೪ನೆಯ ಪತ್ರವಿದು. ಇದುವರೆಗೆ ಬರೆದ ೨೩ ಪತ್ರಗಳು ಆಗಲೇ ಕಸದ ಬುಟ್ಟಿಗೆ ಸೇರಿಯಾಗಿದೆ. ಇದೂ ಅಲ್ಲಿಗೆ ಸೇರದೆ ನಿನ್ನ ಕೈ ಸೇರುವ ಭರವಸೆಯೊಂದಿಗೆ ಈ ಪತ್ರ ಆರಂಭಿಸಿದ್ದೇನೆ.
ಮೊದಲ ಅಕ್ಷರ ಬರೆಯುವ ಹೊತ್ತಿಗೆ ನೀನು ಕಣ್ಣ ಮುಂದೆ ಬಂದಿದ್ದೆ..

ಭಲೆ ಭಲೆ ಚೆಂದದ ಚೆಂದುಳ್ಳಿ ಚೆಲುವೆ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ಎಂಥ ಚೆಂದನೆಯ ಸಾಲುಗಳು. ನನ್ನ ಪಾಲಿಗೆ ಈ ಸಾಲುಗಳು ನಿನ್ನ ರೂಪದಲ್ಲಿ ಒದಗಿ ಬಂದು ನಿಜವಾಗಿ ಬಿಟ್ಟಿದೆ.
ಕಾಲೇಜು ಆರಂಭವಾಗಿ ತಿಂಗಳು ನಾಲ್ಕು ಕಳೆದು ಬಿಟ್ಟಿವೆ. ಕ್ಲಾಸು ಶುರುವಾಗಿ ತಿಂಗಳೊಪ್ಪತ್ತಿನಲ್ಲಿಯೇ ಎಲ್ಲರ ಪ್ರತಿಭಾ ಪ್ರದರ್ಶನದ ಕಾಲ. ಅದ್ಯಾವುದೋ ಘಳಿಗೇಲಿ ನೀನು ವೇದಿಕೆ ಏರಿ ಬಿಟ್ಟಿದ್ದೆ. ನಿನ್ನ ಮಧುರ ಕಂಠದಿಂದ ಹೊಮ್ಮಿತ್ತು ಸುಶ್ರಾವ್ಯ ಸಾಲುಗಳು. ಅದಾಗಲೇ ಹೃದಯ ಫುಲ್ ಫಿದಾ. ಆಗಿನಿಂದಲೇ ಕಣ್ಣುಗಳು ನಿನ್ನ ಹುಡುಕಾಟದಲ್ಲಿ ತೊಡಗಿದ್ದವು. ಆದರೆ ನೀನು ಮತ್ತೆ ಕಾಲಿಗೆ ಗೆಜ್ಜೆ ಜೋಡಿಸಿ ಬಂದಿದ್ದೆ.

ಕೃಷ್ಣ ರಾಧೆಯರ ಪ್ರೇಮ ಸನ್ನಿವೇಶವನ್ನು ಬಲು ಸೊಗಸಾಗಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದೆ. ನನ್ನಲ್ಲಾಗಲೇ ನಿನ್ನ ಪಾಲಿನ ಕೃಷ್ಣನಾಗುವ ಕನಸು. ಕ್ಷಣದಲ್ಲೇ ಈ ಹುಡುಗಿ ನನ್ನವಳು ಎಂಬ ಭಾವ. ಆದರೆ ಈ ವಿಷಯವನ್ನು ನಿನ್ನ ಮುಂದೆ ನೇರವಾಗಿ ಹೇಳಲು ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೆ ಆ ದಿನ ಬರುವಾಗ ಈ ಪತ್ರ ನಿನ್ನ ಕೈ ಸೇರಿರುತ್ತೆ. ಸದ್ಯಕ್ಕಿಷ್ಟು ಸಾಕು ಕಣೇ.

ಚೆಂದುಳ್ಳಿ ಚೆಲುವೆಗೆ ಮನ ಸೋತವ

Tuesday, September 22, 2009

ಆಹಾ ದಸರಾ, ನೀನಿನ್ನೂ ಹತ್ತಿರ..!

ಮುದ್ದು ಗೊಂಬೆಯೇ,
ಈ ಬಾರಿ ನಿನ್ನೂರ ದಸರಾ ವಿಶೇಷ ಏನು? ಮೊನ್ನೆ ಸುಮ್ಮನೆ ಹಳೆಯದನ್ನೆಲ್ಲಾ ಯೋಚಿಸುತ್ತಾ ಕುಳಿತಿದ್ದೆ. ಚೆನ್ನಾಗಿ ನೆನಪಿಸಿ ನೋಡು. ಸರಿಯಾಗಿ ಆರೂವರೆ ವರ್ಷದ ಕೆಳಗೆ ಇಂತಹ ಒಂದು ದಸರಾ ಸಮಯದಲ್ಲೇ ಅರಳಿತ್ತು ನಿನ್ನ ಮೇಲೆ ಪ್ರೇಮಾನುರಾಗ.


ಅಂದು ನಿನ್ನ ಕಣ್ಣಲ್ಲಿ ಕಾತರ, ಆತಂಕ ಎರಡೂ ಮನೆ ಮಾಡಿತ್ತು. ಆದರೆ ಅವುಗಳೆಲ್ಲವನ್ನೂ ಹೃದಯದಲ್ಲಿ ಟಿಸಿಲೊಡೆದ ಭಾವಗಳು ಮೆಟ್ಟಿ ನಿಂತಿದ್ದವು. ಅಂದಿನ ಮುಸ್ಸಂಜೆಯಲ್ಲಿ ನವರಾತ್ರಿಯ ವಿಶೇಷ ಪೂಜೆಗೆಂದು ನಾನು ದೇವಿಯ ಮಂದಿರದಲ್ಲಿದ್ದೆ. ಅದುವರೆಗೆ ನಾವು ಹಾಯ್, ಬೈ ಹೇಳಿದ್ದೆವೇ ಹೊರತು ಅದು ಬಿಟ್ಟು ಎರಡಕ್ಷರ ಮಾತನಾಡಿದವರಲ್ಲ.


ಆದರೆ, ಅಂದು ದೇವಸ್ಥಾನದ ಪೂಜಾರಿ ಆರತಿ ತಟ್ಟೆ ಹಿಡಿದು ನಿನ್ನ ಮುಂದೆ ನಿಂತ ನೋಡು. ನಿನ್ನ ಕಣ್ಣ ತುಂಬಾ ಆರತಿಯ ಬೆಳಕು ಕಾಂತಿಯುತವಾಗಿ ಪ್ರಜ್ವಲಿಸುತ್ತಿತ್ತು. ಆರತಿ ತೆಗೆದು ಕಣ್ಣಿಗೊತ್ತಿಕೊಳ್ಳುವಾಗಲೂ ನಾನು ನಿನ್ನ ಕಣ್ಣುಗಳನ್ನೇ ನೋಡುತ್ತಿದ್ದೆ. ನಿನ್ನಲ್ಲಿ ಅಚಲ ಶ್ರದ್ಧೆಯಿತ್ತು, ಭಕ್ತಿಯಿತ್ತು. ಆದರೆ ನಾನು ವಾಸ್ತವಕ್ಕೆ ಬರುವ ಮೊದಲೇ ನೀನು ನನ್ನ ಕಣ್ಣುಗಳನ್ನು ದಿಟ್ಟಿಸಲಾರಂಭಿಸಿದ್ದೆ. ಮುಖದಲ್ಲಿ ವಯೋಸಹಜವಾದ ಲಜ್ಜೆ ಮನೆ ಮಾಡಿತ್ತು.


ಕಣ್ಣುಗಳಾಗಲೇ ನನ್ನ ಜತೆ ಮಾತಿಗಿಳಿದಿದ್ದವು. ಮನದಲ್ಲಿ ದಸರಾ ದಿನ ಸಿಕ್ಕಿದ ಈ ಗೊಂಬೆ ನನ್ನದು ಅಂದುಕೊಂಡಿದ್ದೆ. ಬಳಿಕ ಕಣ್ಸನ್ನೆಯಲ್ಲೇ ಮಾತು ಆರಂಭಿಸಿದ್ದೆ. ಮರುಕ್ಷಣದಲ್ಲಿ ನಾನು ನೀನು ದೇವಸ್ಥಾನದ ಮುಖ್ಯದ್ವಾರದಲ್ಲಿದ್ದೆವು. ಆ ಮೇಲಿನ ನಮ್ಮ ಪ್ರೀತಿ ಇತರರ ಪಾಲಿಗೆ ಇತಿಹಾಸ.


ಹಾಂ, ಮರೆತೇ ಬಿಟ್ಟಿದ್ದೆ. ಈ ಬಾರಿ ಕೊಟ್ಟ ಮಾತಿನಂತೆಯೇ ಊರಿಗೆ ಬಂದಿದ್ದೀನಿ. ನಾಡಿದ್ದು ದಸರಾ ಮೆರವಣಿಗೆಯಲ್ಲಿ ನಾವಿಬ್ಬರೂ ಸಂಭ್ರಮಿಸಬೇಕು. ಅತ್ತ ಅಂಬಾರಿ ಹೊತ್ತ ಆನೆ ನಡೆಯಬೇಕಾದರೆ ಇತ್ತ ನೀನು ನನ್ನ ತೆಕ್ಕೆ ಸೇರಿರಬೇಕು. ಆ ಗಳಿಗೆ ಎಷ್ಟು ಸುಂದರ ಅಲ್ವೇನೆ?


ಮುದ್ದು ಗೊಂಬೆಯ ಪ್ರೀತಿಸುವವ

Thursday, September 17, 2009

ನಿನ್ನ ತೋಳಲ್ಲಿ ನಾನು ಪ್ರೀತಿಯ ಗುಬ್ಬಿ

ಮೋಹಕ ಕಂಗಳ ಚೆಲುವೆ,

ಮಳೆಗಾಲ ಮುಗಿದರೂ ಇಲ್ಲಿ ವರ್ಷಧಾರೆ ನಿಂತಿಲ್ಲ. ಮೊನ್ನೆ ಧೋ ಎಂದು ಸುರಿದ ಮಳೆಗೆ ನೆನೆದು ಬಂದು ಮನೆಯೊಳಗೆ ಕುಳಿತಿದ್ದೆ ನೋಡು, ಧುತ್ತೆಂದು ಕಾಡಲಾರಂಭಿಸಿತ್ತು ನಿನ್ನ ನೆನಪು.

ಹುಡುಗೀ, ಈ ಮಳೆಗೂ ನನ್ನ ನಿನ್ನ ಪ್ರೀತಿಗೂ ಅದೇನೋ ಅವಿನಾಭಾವ ನಂಟು. ನಮ್ಮಿಬ್ಬರ ಪ್ರೀತಿ ಚಿಗುರಿದ ದಿನ ನೆನಪಿಸಿ ನೋಡು. ಅಂದು ನಾವಿದ್ದಿದ್ದು ನಿನ್ನೂರ ಆ ಗುಡ್ಡದ ಮೇಲೆ. ನನ್ನ ಪ್ರೀತಿಯ ಕರೆಗೆ ನೀನು ಓಗೊಟ್ಟು ಅಂದು ಮಧುರ ಬಾಂಧವ್ಯವೊಂದಕ್ಕೆ ಅಂಕಿತ ಹಾಕಿದ್ದೆ. ಹಾಗೆ ನೀನು ಐ ಲವ್ ಯೂ ಟೂ ಎಂದು ಹೇಳಬೇಕಾದರೆ ಆಗಸದಿಂದ ವರುಣರಾಯ ಮಳೆ ಹನಿಯ ಸಿಂಚನ ಮಾಡಿದ್ದ. ನನ್ನ ಪ್ರೀತಿಯ ಗುಬ್ಬಚ್ಚಿ ಮರಿ ಒದ್ದೆಯಾಗದಿರಲೆಂದು ತೋಳೊಳಗೆ ನಿನ್ನ ಸೇರಿಸಿದ್ದೆ. ಮೊದಲಿನಿಂದಲೂ ಅಷ್ಟೇ. ಮಳೆ ಬಂತೆಂದರೆ ಸಾಕು ನನಗೆ ಬಾಲ್ಯದಿಂದಲೂ ಭಾವನೆಗಳು ಗರಿಗೆದರುವ ಕಾಲ. ಅದು ನಿನಗೂ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ಅಂತಹ ಎಷ್ಟು ಮಳೆ ದಿನಗಳು ನಮ್ಮಿಬ್ಬರನ್ನು ಭಾವುಕರನ್ನಾಗಿಸಿದವು ಅಲ್ಲವೇನೆ?

ಕಳೆದ ವಾರ ಕೃಷ್ಣಾಷ್ಟಮಿಗೆಂದು ಪೊಡವಿಗೊಡೆಯನ ನಾಡಿಗೆ ಹೋಗಿದ್ದೆ. ನಾವು ಪ್ರತಿ ಭೇಟಿಯಲ್ಲೂ ಕೂರುವ ಜಾಗದಲ್ಲಿ ಹೋಗಿ ಕುಳಿತೆ. ಆಗ ಕಾಡಿತ್ತು ಏಕಾಂಗಿತನ. ಮುಂದಿನ ವಾರ ದಸರಾ. ನೀನು ನನ್ನ ದಸರಾ ಗೊಂಬೆ. ಆ ಗೊಂಬೆಯ ಜತೆ ನಾನು ದಸರಾ ಮೆರವಣಿಗೆಯಲ್ಲಿ ಹೆಜ್ಜೆ ಜೋಡಿಸಬೇಕು. ಕೈ ಕೈ ಬೆಸೆದು ಕೊಂಡು ಒಂದಿಡೀ ದಿನ ನಿನ್ನ ಜತೆ ಸಾಗುತ್ತಾ ನಿನ್ನ ಆ ಮೋಹಕ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅದರಲ್ಲಿ ನನ್ನ ಪ್ರತಿಬಿಂಬ ನೋಡಬೇಕು. ಹಾಗೆ ನೋಡುತ್ತಾ ನೋಡುತ್ತಾ ನಾನು ನಿನ್ನಲ್ಲಿ ಕಳೆದು ಹೋಗಬೇಕು. ಸಿದ್ಧಳಾಗಿರು.

ಮೋಹಕ ಕಂಗಳಿಗೆ ಸೋತು ಹೋದವ

Tuesday, August 25, 2009

ಬಿಡು ಬಿಡು ಕೋಪವಾ...

ಮೂಗ ತುದಿಯಲ್ಲಿ ಕೋಪ ತೊಟ್ಟ ಸುಂದರಾಂಗೀ,
ಮೊನ್ನೆ ಊರಿಗೆ ಬರುವ ದಾರಿ ಮಧ್ಯೆ ರಸ್ತೆ ತಿರುವಿನಲ್ಲಿ ಎಂದಿನಂತೆ ಕಾತರದಿಂದ ಕಾಯುತ್ತಿದ್ದ ನಿನ್ನ ಎರಡು ಕಣ್ಣುಗಳು ಕಾಣಿಸಲೇ ಇಲ್ಲ. ಊರಿಗೆ ಬರುವುದು ಕೆಲ ಗಂಟೆ ಕಾಲ ತಡವಾಯಿತೆಂದರೆ ಇಂತಹ ಸಿಟ್ಟೇ. ಓ ಪ್ರೇಮಿಯೇ ಇದು ನ್ಯಾಯವೇ?

ನಾನು ಜತೆಯಲಿರಬೇಕು ಎಂದು ಹೊರಟ ಕ್ಷಣದಿಂದಲೇ ಯಾಕೆ ನಿನಗಷ್ಟೊಂದು ಕೋಪ ಬರುತ್ತೆ. ಸಮಯಕ್ಕೆ ಸರಿಯಾಗಿ ಬಂದರೆ ಪ್ರೀತಿಯ ಮಳೆಯನ್ನೇ ಸುರಿಸುತ್ತೀಯಾ. ಆದರೂ ಹುಡುಗೀ ಒಂದಂತೂ ಸತ್ಯ. ನಿನ್ನ ಕೋಪ ಆ ಮೂಗುತಿಯ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುವುದು ಮಾತ್ರ ಸುಳ್ಳಲ್ಲ. ಮತ್ತೂ ಕೋಪ ಬಂತಾ?

ನಿನ್ನ ಮನಸು ನನ್ನ ಹೃದಯದಲ್ಲಿ ಬಂಧಿಯಾಗಿ ಸರಿ ಸುಮಾರು ೪ ವರ್ಷ. ರಾತ್ರಿ ಕೆಲಸ ಮುಗಿಸಿ ಬಂದು ಸುಮ್ಮನೇ ಕುಳಿತಾಗ ನಿನ್ನ ಜತೆ ಕಳೆದ ನೆನಪುಗಳ ಸರಣಿ ಬಿಚ್ಚಿಕೊಳ್ಳುತ್ತದೆ.

ಅಂದು ನೀನು ಆಕಾಶ ನೀಲಿ ಬಣ್ಣದ ಸೀರೆ ಉಟ್ಟುಕೊಂಡು ಬಂದು ಆಗ ತಾನೇ ಕಾಲೇಜು ಮೆಟ್ಟಿಲೇರಿ ಬರುತ್ತಿದ್ದೆ. ಎಡದಿಂದ ನಾನು, ಬಲಭಾಗದಿಂದ ನೀನು. ಮೊದಲ ಮಹಡಿಗೆ ಇಳಿಯಬೇಕೆನ್ನುವ ಭರದ ನಡುವೆ ಕಣ್ಣು ಕಣ್ಣುಗಳು ಕಲೆತವು. ಹೃದಯಗಳಲಿ ಭಾವ ಸ್ಪರ್ಷ. ನಿನ್ನ ವದನದಲ್ಲಿ ನಾಚಿಕೆ. ತುಟಿಯಂಚಲ್ಲಿ ಕಿರುನಗೆ. ನೀನು ಸುಮ್ಮನಿದ್ದರೂ ಕೈಯಲ್ಲಿದ್ದ ಬಳೆ, ಕಾಲಲ್ಲಿದ್ದ ಗೆಜ್ಜೆ ಹಿನ್ನೆಲೆ ನಾದವನ್ನು ಜೋಡಿಸಿದ್ದವು. ನನ್ನವಳಾಗುವೆಯಾ ಎಂದು ಕೇಳಿದರೆ ನೀನೇ ನನ್ನವನು ಎಂದು ಓಡಿ ಹೋಗಿದ್ದೆ.

ಆಗಲೂ ನಿನ್ನಲ್ಲಿ ಪ್ರೀತಿ ತುಂಬಿದ ಕೋಪವಿತ್ತು. ಅಂದಿಗೂ, ಇಂದಿಗೂ ಎಂದೂ ಬದಲಾಗಿಲ್ಲ. ಯಾವುದೋ ಕಾರಣಕ್ಕೆ ಸ್ವಲ್ಪ ವಿಳಂಬವಾಗಿದ್ದಕ್ಕೆ ಈ ರೀತಿ ಕೋಪಿಸಿ ನಿನ್ನ ಸೌಂದರ್ಯ ವೃದ್ಧಿಸಬೇಕೇ.

ಅದ್ಯಾವುದೂ ಇಲ್ಲದೆಯೇ ನೀನು ನನ್ನವಳಾಗಬೇಕು. ನಾಳೆ ಮತ್ತೆ ಬರ್ತಾ ಇದ್ದೀನಿ ನಿನ್ನೂರಿಗೆ ಸಿರ್ಫ್ ನಿನ್ನ ನೋಡಲು. ಎಂದಿನಂತೆ ಕಾತರದ ಕಣ್ಣು, ಸ್ವಲ್ಪ ಕೋಪ, ಮತ್ತೊಂದಿಷ್ಟು ನಗುವಿನೊಂದಿಗೆ ನೀನು ಹತ್ತಿರಬರಬೇಕು. ಮತ್ತೇನೂ ಹೇಳುವುದಿಲ್ಲ.
ನಿನ್ನವನು

Tuesday, August 18, 2009

ಕತ್ತಂಚಿನ ಮಚ್ಚೆಗೆ ಮುತ್ತಿಟ್ಟವನು ನೀನಾ?

ನಿನ್ನೆ ರಾತ್ರಿ ಕನಸಲ್ಲಿ ಬಂದು ಕಾಡಿದವನು ನೀನೇನಾ? ಕತ್ತಿನ ಅಂಚಿನಲ್ಲಿರುವ ಮಚ್ಚೆಗೆ ಮುತ್ತು ನೀಡಿದವನು ನೀನೇನಾ? ಒಂದೂ ತಿಳಿಯುತ್ತಿಲ್ಲ ದೊರೆಯೇ. ಕನಸಾದರೂ ಮನಕೆ ಮುದ ನೀಡಿ ಮಧುರ ಭಾವಗಳನ್ನೆಬ್ಬಿಸಿದ್ದು ಮಾತ್ರ ಸುಳ್ಳಲ್ಲ.

ಎಂದಿನಂತೆ ಮೊನ್ನೆ ರಾತ್ರಿ ನಿನಗೆ ಗುಡ್ ನೈಟ್ ಹೇಳಿ ಮಲಗಿದ್ದೆ ನೋಡು. ಅದ್ಯಾವುದೋ ಅಪೂರ್ವ ಗಳಿಗೇಲಿ ನೀನು ನನ್ನ ಕನಸಿನರಮನೆಗೆ ಬಂದಿಳಿದಿದ್ದೆ. ಅದೆಲ್ಲಿಂದಲೋ ಹುಚ್ಚು ಧೈರ್ಯ ಬಂದಿತ್ತು. ನಾನು ನಿನ್ನ ತೆಕ್ಕೆ ಸೇರಿದ್ದ ಸಂಭ್ರಮದಲ್ಲಿ ನಿನ್ನ ಕೈಬೆರಳುಗಳಲ್ಲಿ ತುಂಟತನ ಲಾಸ್ಯವಾಡಲಾರಂಭಿಸಿತ್ತು.

ಕ್ಷಣ ಮಾತ್ರದಲ್ಲಿ ನಾನು ಬೆದರು ಗೊಂಬೆ. ಕಾಲ್ಬೆರಳು ಅದಾಗಲೇ ನೆಲದ ಜತೆ ಚಕ್ಕಂದವಾಡಲಾರಂಭಿಸಿತ್ತು. ಹಾಗೆ ನಿದ್ದೆಗಣ್ಣಲ್ಲೇ ನಾನು ನಿನ್ನ ಜತೆ ಮಾತಿಗೆ ತೊಡಗಿದ್ದೆ ನೋಡು. ಏನೋ ಕೇಳಬೇಕೆನ್ನುವಷ್ಟರಲ್ಲಿ ಅಮ್ಮ ಬಂದು ಎಚ್ಚರಿಸಿದಳು ನೋಡು. ಆಗಲೇ ಗೊತ್ತಾಗಿದ್ದು ಕಂಡಿದ್ದೆಲ್ಲವೂ ಕನಸು.

ಅವಳಾಗಲೇ ಏನೇ ಇನ್ನೂ ಶ್ರಾವಣ ಮುಗಿದಿಲ್ಲ. ಆಗಲೇ ಕನಸಿನರಮನೆ ಕಟ್ತಾ ಇದ್ದೀಯಾ. ನಿನ್ನ ರಾಜಕುಮಾರ ಬಂದು ನಿನ್ನ ಕೈ ಹಿಡಿಯಲು ಇನ್ನೂ ಸುಮಾರು ದಿನಗಳಿವೆ ಅಂದ್ಬಿಟ್ಳು ನೋಡು. ಯಾಕೋ ದುಃಖ ತಡೆಯಲಾಗಲಿಲ್ಲ ಕಣೋ. ಅಮ್ಮನಿಗೆ ಗೊತ್ತಾಗದಂತೆ ಕಣ್ಣಂಚಲ್ಲಿ ಬಂದು ಸೇರಿದ್ದ ಕಣ್ಣೀರ ಬಿಂದುವನ್ನು ಕೈಗೊತ್ತಿಕೊಂಡೆ. ಅದ್ಯಾಕೋ ಮತ್ತೆ ಮನದಲ್ಲಿ ನೆನಪುಗಳ ಸರಮಾಲೆ.

ನೀನು ಕದ್ದಾಲಿಸಿದ ಕೈ ಬಳೆಗಳ ಸದ್ದು, ನೀನೇ ಕೈಯಾರೆ ಕಾಲಿಗೆ ತೊಡಿಸಿದ ಗೆಜ್ಜೆ. ಕಳೆದ ವಾರವಷ್ಟೇ ಮೂಗೇರಿಸಿಕೊಂಡ ಮೂಗುತಿ. ಬರ್ತ್‌ಡೇ ಗಿಫ್ಟ್ ಡೈಮಂಡ್ ರಿಂಗ್. ಎಲ್ಲವನ್ನೂ ನೋಡುತ್ತಾ ನಾನು ಕಳೆದುಹೋಗುತ್ತೇನೆ. ದೂರದಲ್ಲೆಲ್ಲೋ ಆಗಸದಲ್ಲಿ ಹಕ್ಕಿಗಳ ಹಿಂಡು ಹಾರಾಡುತಿದ್ದರೆ ಮನದಲ್ಲಿ ನನಗೂ ಗರಿ ಬಿಚ್ಚುವಾಸೆ. ಆದರೆ ಜತೆಯಲಿ ನೀನಿರಬೇಕು ಎನ್ನುವುದು ಮಾತ್ರ ಮರೆಯದಿರು.

ನಾಡಿದ್ದು ಚೌತಿ ಸಂಭ್ರಮ. ಊರಿಗೆ ಏನಾದರೂ ಬರೋದಿದೆಯಾ ದೊರೆಯೇ? ನೀ ಬರುವೆ ಎಂಬ ನಿರೀಕ್ಷೆಯಲ್ಲಿ...
ನಿನ್ನವಳು

Thursday, August 13, 2009

ಕೃಷ್ಣನ ಕೊಳಲಿನ ಪ್ರೇಮದಾ ಕರೆ...

ಕಾದಿರುವಳೋ ಕೃಷ್ಣ ರಾಧೆ,
ಕಾದಿರುವಳೋ ಕೃಷ್ಣ ರಾಧೆ
ಬೃಂದಾವನದ ನಂದನವನದಲ್ಲಿ,
ಬೃಂದಾವನದ ನಂದನವನದಲ್ಲಿ
ಕಾದಿರುವಳೋ ಕೃಷ್ಣ ರಾಧೆ

ನಾಳೆ ಕೃಷ್ಣಾಷ್ಟಮಿ ಸಂಭ್ರಮ. ನಿನಗಿದೆಲ್ಲಾ ಗೊತ್ತಾ ಎಂಬ ಅಸಂಬದ್ಧ ಪ್ರಲಾಪ ಬೇಡ. ಜೀನ್ಸ್ ಪ್ಯಾಂಟ್, ಅದರ ಮೇಲೊಂದು ಟೀಶರ್ಟ್, ಕಣ್ಣಿಗೊಂದು ಸನ್‌ಗ್ಲಾಸ್ ಹಾಕಿದ್ದಾಳೆ ಎಂದಾಕ್ಷಣ ಹುಡುಗಿ ಮಾಡರ್ನ್, ಅವಳಿಗೇನೂ ಗೊತ್ತಿರೋಲ್ಲ ಅಂತಲ್ಲ ಗುಡ್ಡೂ. ಹಾಗಂತ ಒಂದು ಅಲಿಖಿತ ಶಾಸನ ಇದ್ದಿದ್ದರೆ ನನ್ನ ನಿನ್ನ ಮೊದಲ ಭೇಟಿ ಕೃಷ್ಣ ಮಂದಿರದಲ್ಲಿ ಆದ ದಿನವೇ ನಾ ನಿನ್ನವಳಾಗುತ್ತಿರಲಿಲ್ಲ.

ಕಳೆದ ವರ್ಷ ಮನೆಯವರನ್ನು ಬಿಟ್ಟು ಆಚರಿಸಿದ ಮೊದಲ ಅಷ್ಟಮಿ. ಪ್ರತಿ ವರ್ಷವೂ ಕೃಷ್ಣಾಷ್ಟಮಿಗೆ ದೇವರ ದರ್ಶನ ಕಡ್ಡಾಯ. ಆದರೆ ಅಪ್ಪ ಅಮ್ಮನನ್ನ ದೂರ ಬಿಟ್ಟು ಈ ಕಾಲೇಜಿಗೆ ಸೇರಿಯಾಗಿತ್ತು. ದೇವರ ದರ್ಶನ ಮಾಡಲೇಬೇಕೆಂದು ನಿನ್ನೂರ ಮಂದಿರಕ್ಕೆ ಬಂದಿದ್ದೆ ನೋಡು.

ದೇವರಿಗೆ ಪ್ರಾರ್ಥಿಸಿ ಕೈ ಜೋಡಿಸಿ ಇನ್ನೇನು ಆರತಿಯನ್ನು ಕಣ್ಣಿಗೊತ್ತಿಕೊಳ್ಳಬೇಕು ಎಂಬಷ್ಟರಲ್ಲಿ ಎಲ್ಲರ ನಡುವಿನಿಂದ ಎರಡು ಕಣ್ಣುಗಳು ನನ್ನನ್ನು ಹಿಂಬಾಲಿಸುತ್ತಿವೆ ಅಂತ ಗೊತ್ತಾಗಿತ್ತು. ಆಗಲೇ ಹೃದಯದಲ್ಲಿ ಡವ ಡವ. ಆದರೆ ಮನ ಕೃಷ್ಣನಿದ್ದಾನೆ ನಿನ್ನ ಜತೆ ಅಂದಿತ್ತು.

ನನ್ನ ರಾಧೆ ನೀನಾಗುವೆಯಾ ಎಂದು ದೂರದಿಂದ ಕೇಳಿದಂತಾಯ್ತು. ನಾನು ಸುಮ್ಮನೆ ತಲೆಯಾಡಿಸಿದೆ. ನಿನ್ನೆಗೆ ರಾಧೆಯ ಗೆದ್ದ ಸಂಭ್ರಮ. ನಾನು ಹೊರಡಬೇಕೆಂದರೂ ಹೊರಡಲಾಗದಷ್ಟು ಆಪ್ತವಾಗಿದ್ದೆ ನೀನು. ನಿನ್ನ ಸಾಮೀಪ್ಯ, ಸಾಂಗತ್ಯವೇ ನವಿರು ಅನುಭವ ನೀಡಲಾರಂಭಿಸಿತ್ತು. ಮನದಲ್ಲಿ ಏನೋ ಕಂಪನ.

ಕೃಷ್ಣಾಷ್ಟಮಿಗೆ ಈ ಬಾರಿ ಮನೆಯಲ್ಲಿದ್ದೇನೆ. ಮನೆಯಲ್ಲಿದ್ದರೆ ಅಷ್ಟಮಿಗೆ ಮದರಂಗಿ ಹಾಕುವುದೇ ಸಂಭ್ರಮ. ಹಾಗೆ ಕೈಯಲ್ಲಿ ಚಿತ್ತಾರ ಮೂಡುತ್ತಿರಬೇಕಾದರೆ ಮನದಲ್ಲಿ ಮತ್ತೆ ನಿನ್ನದೇ ಸವಿ ನೆನಪು. ಈ ಬಾರಿ ಮದರಂಗಿ ರಂಗೇರಬೇಕಾದರೆ ನೀನು ಕಣ್ಣ ಮುಂದಿರಬೇಕು, ಪ್ಲೀಸ್!
ನಿನ್ನ ಕೃಷ್ಣಪ್ರಿಯೆ

Friday, August 7, 2009

ಹೇಳದೆ ಉಳಿದ ಅಚ್ಚರಿ

ಶ್ರಾವಣದ ಕನಸು ಕಂಡವಳಿಗೆ...
ಈ ಬಾರಿ ನಿನ್ನ ಕನಸು ಕೈಗೂಡದೇ ಇರಲು ಬಿಡುವುದೇ ಇಲ್ಲ! ಇಷ್ಟು ವರ್ಷದ ಪ್ರೀತಿ ಪಕ್ವವಾಗುವ ಅಪೂರ್ವ ಕಾಲವಿದು. ಹಾಗೆಂದೇ ನಾನು ಈ ಶ್ರಾವಣವನ್ನು ಸ್ವಾಗತಿಸಿದ್ದೆ. ಒಂದು ಅಚ್ಚರಿ ಇರಲಿ ಎಂದು ನಿನ್ನ ಮುಂದೆ ಹೇಳಿಲ್ಲ ಎನ್ನುವುದು ಬಿಟ್ಟರೆ ಕೆಲ ತಿಂಗಳ ಹಿಂದಿನಿಂದಲೇ ನನ್ನ ನಿನ್ನ ಮನೆಯವರು ತಯಾರಿ ಆರಂಭಿಸಿದ್ದರು. ಎಲ್ಲಿ ನಿನ್ಮುಂದೆ ಬಾಯಿ ಬಿಡ್ತಾರೋ ಅಂತ ನಿನ್ನ ಅಮ್ಮನಲ್ಲಿ ಕಾಡಿ, ತಂಗಿಯನ್ನು ಗೋಗರೆದಿದ್ದೆ!

ಈ ಪತ್ರ ಓದಿ ಅವರಲ್ಲೇನಾದರೂ ಕೇಳಿದೆಯೋ ಅವರು ಬಿದ್ದು ಬಿದ್ದು ನಗುತ್ತಾರೆ. ಆ ಹೊತ್ತಿಗೆ ನನ್ನ ಈ ಸ್ವೀಟ್ ಹಾರ್ಟ್ ಮುಖದಲ್ಲಿ ಕೋಪ ಕಾಣಿಸುತ್ತೆ. ಆದರೆ ಮನದ ಮೂಲೆಯಲ್ಲೆಲ್ಲೋ ಮಧುರ ಸುಂದರ ಗಾನ ಟಿಸಿಲೊಡೆದಿರುತ್ತೆ. ಮತ್ತೆ ನಿನ್ನ ಮನೇಲಿ ಸಂಭ್ರಮ ಹೇಗಿದೆ. ನನ್ನೂರಲ್ಲಿ ಲಗ್ನ ಪತ್ರಿಕೆ ಹರಿದಾಡದ ಜಾಗಗಳಿಲ್ಲ. ಬಾಲ್ಯದಿಂದಲೂ ನನ್ನೆಡೆಗಿನ ಕುತೂಹಲದಿಂದ ಯಾರವಳು ನಿನ್ನ ಹೃದಯದರಸಿ, ಅವಳ ವದನಾರವಿಂದವನ್ನು ನಾವು ನೋಡಿ ಸಂಭ್ರಮಿಸುವ ಕಾಲವಿದು ಎನ್ನುತ್ತಾ ಸಂಭ್ರಮಿಸುತ್ತಿದ್ದಾರೆ.

ಮೊನ್ನೆ ಕಾಲೇಜಿಗೆ ಹೋಗಿದ್ದೆ. ನಮ್ಮ ಪ್ರೀತಿಯ ಮೇಡಂ ಏನಪ್ಪಾ ಇನ್ನೂ ಲವ್ ಮಾಡ್ತಾನೇ ಇರಬೇಕು ಅಂತಿದೀರಾ, ಅಲ್ಲಾ ಈ ವರ್ಷಾನಾದ್ರೂ ಸಿಹಿಯೂಟ ಹಾಕಿಸಿ ಜೀವನದಲ್ಲಿ ಸೆಟ್ಲ್ ಆಗ್ತೀರಾ ಎಂದು ಕೇಳಿದ್ರು. ಹಾಗೇ ಗಂಭೀರವಾಗಿ ಎರಡು ನಿಮಿಷ ಕುಳಿತೆ. ಅವರ ಕಣ್ಣಲ್ಲಿ ಆತಂಕ. ಸುಮ್ಮನೆ ಇನ್ವಿ ಟೇಷನ್ ತೆಗೆದು ಅವರ ಮುಂದಿಟ್ಟೆ. ಆ ಪುಟ್ಟ ಕವರ್ ಮೇಲಿದ್ದ ‘ಶ್ರವಣ್ ವೆಡ್ಸ್ ಶ್ರಾವಣಿ’ ನೋಡಿದ್ದೇ ಅವರ ಮೊಗದಲ್ಲಿ ಮಂದಹಾಸ. ಇಂತಹ ಪುಟ್ಟ ಪುಟ್ಟ ಸಂಭ್ರಮ ಜೀವನದಲ್ಲಿ ಅದೆಷ್ಟೋ ಅಲ್ವೇನೆ?
ನಿನ್ನ ಶ್ರಾವಣದ ಹುಡುಗ

Wednesday, July 22, 2009

ಅಮ್ಮನಿಗೆ ಅನುಮಾನ ಶುರುವಾಗಿದೆ...

ನೀವು ಬರೆದ ಪತ್ರ ಕೈ ಸೇರಿದೆ. ಓದಿದಾಗಿನಿಂದ ನಿಮ್ಮದೇ ಮಧುರ ಮಧುರ ಯೋಚನೆ. ನಿಮ್ಮ ಯಾವ ಪತ್ರವೂ ನನ್ನನ್ನು ಇಷ್ಟು ಆರ್ದ್ರಗೊಳಿಸಿರಲಿಲ್ಲ. ಆದರೆ ಈ ಪತ್ರ ಎಲ್ಲವನ್ನೂ ಮೀರಿ ಒಡಲಾಳದ ಭಾವಗಳನ್ನು ಹಸಿರಾಗಿಸಿದೆ.
ಮೊನ್ನೆ ನಿಮ್ಮ ಪತ್ರ ಬಂದು ಕೈ ಸೇರಿತಲ್ಲಾ. ಅಮ್ಮನಿಗೆ ಏನೋ ಅನುಮಾನ. ನಾನು ನಿಮಗೆ ಬಿಟ್ಟೂ ಬಿಡದೆ ಎಸ್‌ಎಂಎಸ್ ಮಾಡುವುದನ್ನು ನೋಡಿ ಅಕ್ಕನ ಮುದ್ದು ಮಗಳಿಗೆ ಏನೋ ಕುತೂಹಲ. ಯಾರಿಗೆ ಈ ಥರಾ ಮೆಸೇಜ್ ಮಾಡ್ತಾ ಇದ್ದೀಯಾ ಎಂಬಂತೆ ಕಣ್ಣಲ್ಲೇ ಕಣ್ಣಿಟ್ಟು ನೋಡುತ್ತಿರುತ್ತಾಳೆ. ರಾತ್ರಿ ನಿದ್ರಿಸುವಾಗ ಅವಳಿಗೆ ನಾನೇ ಬೇಕು. ಅವಳು ಅಮ್ಮನಿಗಿಂತಲೂ ಹೆಚ್ಚು ನನ್ನ ಜತೆ ಕಳೆದವಳು. ಅವಳು ಯಾರಿಗೆ ಫೋನ್ ಮಾಡುತ್ತೀ ಎಂದು ಕೇಳುತ್ತಾಳೆ.

ಅವಳದಿನ್ನೂ ಮಗುವಿನ ಮನಸು. ಅದಕ್ಕೆ ಪ್ರೀತಿ ಪ್ರೇಮ ಎಲ್ಲಿ ಗೊತ್ತಾಗುತ್ತೆ ಹೇಳು. ಅದಕ್ಕೇ ಅವಳಿಗೆ ಪ್ರೇಮಿಗಳ ಆರಾಧ್ಯ ದೈವ ಶ್ರೀಕೃಷ್ಣನ ಪ್ರೀತಿಯನ್ನು ಕತೆಯಾಗಿಸಿ ಹೇಳುತ್ತೇನೆ. ಅವಳು ಕಿವಿಯಾಗುತ್ತಾಳೆ. ಆ ಕತೆಯನ್ನು ಹೇಳುವಾಗ ಮನಸು ಹಗುರಾಗುತ್ತೆ. ಆದರೆ ಕೃಷ್ಣ ರಾಧೆಯರ ಪ್ರೀತಿ ಪರ್ಯಾವಸಾನ ಹೇಗೆ ಹೇಳಲಿ ನಾನು. ಕತೆ ಕೇಳುತ್ತಾ ಅವಳು ನಿದ್ದೆ ಹೋಗಿರುತ್ತಾಳೆ. ಆದರೆ ಮನಸ್ಸಲ್ಲಿ ಅದೇ ರಾಧಾಕೃಷ್ಣರ ವಿಫಲ ಪ್ರೇಮದ ಕತೆ ಕಣ್ಣಮುಂದೆ ಹಾದು ಹೋಗುತ್ತೆ. ನೀವು ಕೊಟ್ಟ ಪ್ರೀತಿಯನ್ನು ನೆನೆಯುತ್ತಾ ಆ ಜೋಡಿಯ ಅಗಲಿಕೆಯನ್ನು ಯೋಚಿಸಬೇಕಾದರೆ ದುಃಖ ಉಮ್ಮಳಿಸಿ ಬರುತ್ತದೆ. ಕಣ್ಣಂಚಲ್ಲಿ ನೀರು.
ಮರುದಿನ ರಾತ್ರಿಯಾಗುವ ವೇಳೆಗೆ ಮತ್ತೆ ನನ್ನ ಕೇಳುತ್ತಾಳೆ. ನಾನು ಅದೇ ಸುಂದರ ದಿನಗಳನ್ನು ಹೇಳುತ್ತಾ ಸಾಗುತ್ತೇನೆ. ಆದರೂ ಮನಸ್ಸಲ್ಲಿ ನೋವು ಕಾಡುತ್ತಾ ಇರುತ್ತೆ.

ಹಾಗೆ ಕಣ್ಣೀರು ತಲೆದಿಂಬನ್ನು ಒದ್ದೆ ಮಾಡಿದಾಗಲೂ ನಾನು ನೀವು ಕಟ್ಟುವ ಆ ಮಾಂಗಲ್ಯಸೂತ್ರದಲ್ಲಿ ಬಂಧಿಯಾಗುವ ಕನಸು ಕಾಣುತ್ತೇನೆ. ಹೇಳಿ ಕೇಳಿ ನನ್ನದು ಹುಚ್ಚು ಮನಸು. ಎಲ್ಲಾ ನನ್ನದೇ ಆಯಿತು. ನಿಮ್ಮ ವಿಶೇಷ ಏನಾದ್ರೂ ಇದ್ದರೆ ಹೇಳಿ.

ನಿಮ್ಮವಳು

Wednesday, July 15, 2009

ಮಳೆ ಹನಿ ಮೈ ಸೋಕಿದರೆ ಏನೋ ಪುಳಕ!

ಸ್ವೀಟ್ ಹಾರ್ಟ್,
ಮಳೆ ಬಂದರೆ ಮಾತ್ರ ನಿನಗೆ ನಾನು ನೆನಪಾಗ್ತೀನಿ ಅಲ್ವಾ? ಅದ್ಕೇ ನಿನ್ ಜತೆ ಠೂ. ಮಾತೂ ಬೇಡ, ನಿನ್ನ ಮುತ್ತೂ ಬೇಡ.
ಚಿತ್ತ ಚೋರಾ ಕೋಪ ಬಂತಾ? ಇಲ್ಲಿ ಮಳೆ ನಿಂತಿದೆ. ಆದರೆ ನೆನಪುಗಳ ಮೆರವಣಿಗೆ ನಿಂತಿಲ್ಲ. ಸೂರ್ಯ ನೆತ್ತಿಗೇರುತ್ತಿದ್ದಂತೆ ದಟ್ಟ ಮೋಡ ಆವರಿಸುತ್ತದೆ. ಬೀಸುವ ಜೋರಾದ ಗಾಳಿ ಮೋಡವನ್ನು ತನ್ನ ಸಂಗಾತಿಯನ್ನಾಗಿಸಿ ಕೊಂಡೊಯ್ಯುತ್ತವೆ.

ಆದರೆ ನಿನ್ನ ಸುಳಿವೇ ಇರುವುದಿಲ್ಲ. ಗಾಳಿ ಮೋಡದ ಬೆಸುಗೆಯನ್ನು ಕಂಡು ನಾನು ಇಲ್ಲಿ ಒಬ್ಬಂಟಿಯಾಗಿ ಕುಳಿತು ನಾವಿಬ್ಬರೂ ಒಂದುಗೂಡುವ ಕ್ಷಣವನ್ನು ಕನಸು ಕಾಣಲಾರಂಭಿಸುತ್ತೇನೆ.

ಹಾಗೆ ಮೋಡ ಗಾಳಿ ಜತೆ ಸೇರಿ ಹೋಗುವಾಗ ಸುರಿಯುವ ಮಳೆ ಹನಿಯ ಮೈ ಸೋಕಿದಾಕ್ಷಣ ಏನೋ ಪುಳಕ! ಆದರೆ, ಮಳೆ ಹನಿಯನ್ನಾದರೂ ನಂಬಬಹುದು, ನಿನ್ನನ್ನಲ್ಲ. ನೀನು ಬಂದೇ ಬರುತೀಯಾ ಎಂದು ನಾ ಕಾದು ಕುಳಿತ ದಿನವೆಲ್ಲಾ ನನಗೆ ಇದುವರೆಗೆ ಸಿಕ್ಕಿದ್ದು ಬರೀ ವಿರಹ ವೇದನೆ.

ಅದಕ್ಕೇ ಈ ಬಾರಿ ಒಂದು ಭಿನ್ನಹ. ಇಲ್ಲ ಎನ್ನಬೇಡ. ಮುಂದಿನ ಮಳೆ ಆವರಿಸಿಕೊಳ್ಳುವ ಮುನ್ನ ಒಂದು ಬಾರಿ ಬಂದು ಹೋಗು ಪ್ಲೀಸ್.

ನಾವಿಬ್ಬರೂ ಜತೆಯಲ್ಲಿ ಸಾಗುವುದನ್ನು ಕಂಡು ಎಲ್ಲರೂ ಅಸೂಯೆಪಟ್ಟುಕೊಳ್ಳಬೇಕು. ಹಾಗೆ ನಾವು ಹೋಗಿ ಸೇರುವ ಜಾಗೆಯಲ್ಲಿ ನೀನು ನನ್ನ ಕೆಣಕಬೇಕು, ಪ್ರೀತಿಸಬೇಕು, ಮುದ್ದಿಸಬೇಕು, ನನ್ನ ಕೆನ್ನೆ ರಂಗೇರಿಸಬೇಕು. ನೀನಿಷ್ಟೆಲ್ಲಾ ಮಾಡುತ್ತಿರಬೇಕಾದರೆ ಇನ್ಯಾವತ್ತೂ ಇಂತಹ ಕ್ಷಣಗಳು ಮರುಕಳಿಸಿ ಬರಲಾರವೇನೋ ಎಂಬಂತೆ ನಾನು ನಿನ್ನ ಎದೆಗೂಡಿನೊಳಗೆ ಹುದುಗಿಕೊಳ್ಳಬೇಕು.ಭೋರ್ಗರೆವ ಮಳೆಯಲ್ಲಿ ನಿನ್ನ ಜತೆ ಕಾಲ ಕಳೆಯುವ ಕನಸು ಎನ್ನದು, ದಯಪಾಲಿಸುವ ಸರದಿ ನಿನ್ನದು.

ನಿನ್ನ ಮುದ್ದಿನ ಮಳೆ ಹುಡುಗಿ

Wednesday, June 10, 2009

ಸಂಜೆ ಹಾಸ್ಟೆಲ್ ಗೂಡು ಸೇರುವ ಮುನ್ನ ಸಂಪಿಗೆ ಮರದ ನೆರಳಲ್ಲಿ ಸಿಕ್ತೀಯಾ?

ಮೂಗುತಿ ಸುಂದರಿಯೇ,
ನಿನಗೆ ಲವ್ ಎಟ್ ಫಸ್ಟ್ ಸೈಟ್‌ನಲ್ಲಿ ನಂಬಿಕೆಯಿದೆಯಾ ಗೊತ್ತಿಲ್ಲ. ಆದರೆ ನಂಗೆ ಮಾತ್ರ ಮೊನ್ನೆ ಸೋಮವಾರ ಕ್ಲಾಸು ಆರಂಭವಾದ ದಿನ ನಿನ್ನ ನೋಡಿದ ಬಳಿಕ ಬಲವಾದ ನಂಬಿಕೆ ಮೂಡಿದೆ.

ಅಂದು ಕಾಲೇಜಿನ ಪ್ರಥಮ ದಿನ. ಕ್ಲಾಸ್ ಎಲ್ಲಿ ಎಂದು ಹುಡುಕುತ್ತಾ ಬಂದವನು ತರಗತಿಯೊಳಗೆ ಕಾಲಿಟ್ಟಾಗ ಮೊದಲ ಸಾಲಲ್ಲೇ ಕಂಡವಳು ನೀನು. ಯಾವ ಜನ್ಮದ ಪುಣ್ಯವೋ, ನೋಡುತ್ತಿದ್ದಂತೆ ನಿನ್ನ ವದನ ನಸುನಾಚಿ ತುಟಿಯಂಚಲ್ಲಿ ಮುಗುಳ್ನಗೆಯ ರೂಪ ಪಡೆದಿತ್ತು. ರೇಷಿಮೆ ಬಣ್ಣದ ಸಲ್ವಾರ್, ನೀಳ ಕೇಶ, ಅದರ ನಡುವೆ ಸಿಕ್ಕಿಸಿಟ್ಟ ಚೆಂಗುಲಾಬಿ. ಮುಖಕ್ಕೆ ಮೇಕ್ ಅಪ್ ಹಚ್ಚಿರಲೇ ಇಲ್ಲ. ಇದೆಲ್ಲಕ್ಕಿಂತ ನಂಗಿಷ್ಟವಾಗಿದ್ದು ನಿನ್ನ ಆ ಮೂಗುತಿ. ಆ ಮೂಗುತಿ, ಕತ್ತಿನಲ್ಲಿ ಸರ ಬಿಟ್ಟರೆ ನೀನು ನಿರಾಭರಣ ಸುಂದರಿ.

ಆ ಮೂಗುತಿ ನೋಡುವಾಗಲೇ ಅಂದು ಕೊಂಡೆ, ಈ ಮೂಗುತಿ ಹುಡುಗಿ ನನ್ನವಳು. ನನ್ನ ಗಿಣಿ ಮರಿ, ಜತನದಿಂದ ಕಾಪಾಡಿ ಕಾಡಬೇಕು. ಇದಕ್ಕೆ ನಿನ್ನ ಸಮ್ಮತಿ ಸಿಗುವುದೋ? ನಿನ್ನಲ್ಲಿ ಮಾತನಾಡುವ ಮುನ್ನವೇ ಹೀಗೆ ಕನಸು ಕಟ್ಟುವುದು ಎಷ್ಟು ಸರಿ ಗೊತ್ತಿಲ್ಲ.ಅದಿರಲಿ ಯಾವೂರು ನಿಂದು. ಕರಾವಳಿ ತೀರದವಳಾ. ಅಲ್ಲಾ ಕಾಫಿ ನಾಡಿನವಳಾ?

ಮೊದಲನೆ ದಿನವೇ ಒಲಿದೆ
ನಿನ್ನ ನಡೆಗೆ, ಸವಿನುಡಿಗೆ

ಅದಿರಲಿ ನಿಂಗೆ ಆ ಮೂಗುತಿ ತೊಡಿಸಿದವರು ಯಾರು? ಅದೊಂದೇ ಕಾರಣಕ್ಕೆ ನೀನು ಇಷ್ಟವಾಗಿಲ್ಲ, ಇನ್ನೂ ಏನೇನೋ ಹೇಳೋದಿದೆ. ನಾನು ಪ್ರೀತಿಸಲು ಕಾರಣ ಬೇಕಿಲ್ಲ. ಸುಮ್ಮನೆ ಒಪ್ಪಿಬಿಡು. ಈ ಪತ್ರ ಓದಿ ಇನ್ನೇನಾದರೂ ಹೇಳೋದಿದ್ದರೆ ಸಂಜೆ ಹಾಸ್ಟೆಲ್ ಗೂಡು ಸೇರುವ ಮುನ್ನ ದಾರಿಯಲ್ಲಿರುವ ಸಂಪಿಗೆ ಮರದ ನೆರಳಲ್ಲಿ ಕಾಯ್ತಿರ್ತೀನಿ.

ನಿನ್ನ ಮೂಗುತಿಗೆ ಮಾರು ಹೋದವ

Tuesday, June 2, 2009

ಯಾರಿಗೆ ಗೊತ್ತು... ನೀ ಬರುವ ದಿನ ಕಾಮನಬಿಲ್ಲು ಮೂಡಬಹುದು..!

ಮಳೆ ಹುಡುಗೀ,

ಚಿನ್ನೂ ಇಲ್ಲಿ ಮಳೆ ಸಂಭ್ರಮ. ಮುಂಗಾರಿನ ರೌದ್ರನರ್ತನ ಇನ್ನೇನು ಶುರುವಾಗುತ್ತೆ. ಅದಕ್ಕೆ ಮುನ್ನುಡಿ ಎಂಬಂತೆ ಇಲ್ಲಿ ಮೊನ್ನೆ ರಾತ್ರಿಯಿಂದ ಆರಂಭವಾಗಿದೆ ಮುಸಲಧಾರೆ. ನೆನಪು ಕಾಡುತ್ತಿದೆ. ಮುಂಗಾರು ಮಳೆಯಲ್ಲಿ ಮಿಂದು ಸಂಭ್ರಮಿಸಲು ಬರಬೇಕೆಂದು ಮನ ತುಡಿಯುತ್ತಿದೆ. ನಾ ಕರೆಯದೆ ಬರಲ್ಲ ಎನ್ನುವ ಬಿನ್ನಾಣವ ಬಿಟ್ಟು ಬಾ. ಯಾರಿಗೊತ್ತು ನೀನು ಬರುವ ದಿನ ಆಕಾಶದಲ್ಲಿ ಕಾಮನಬಿಲ್ಲು ಮೂಡಬಹುದು. ಆ ವೇಳೆ ನಾನು ನೀನು ಜತೆ ಸೇರಿದರೆ ಸಂಭ್ರಮದ ಕಳೆ.

ಮತ್ತೆ ಊರಲ್ಲಿ ಮಳೆ ಹೇಗಿದೆ. ನಮ್ಮ ಪ್ರೀತಿಗೆ ನೆರಳನಿತ್ತ ಮರ ಮತ್ತೆ ಚಿಗುರಿದೆಯಾ? ಆ ಮರದ ಬುಡದಲ್ಲಿ ಕುಳಿತು ನೀನು ಎಷ್ಟು ಬಾರಿ ಕಣ್ಣೀರಾಗಿದ್ದೆ ನೆನಪಿದೆಯಾ. ಮಳೆ ನಿನಗೆ ಪ್ರೀತಿ, ಆದರೆ ಮಿಂಚು, ಸಿಡಿಲು ಅಂದ್ರೆ ಅಂಜು ಬುರುಕಿ. ದೂರದಲ್ಲಿ ಮಿಂಚು ಬೆಳಕು ಕಂಡರೆ ನೀ ಬೆದರು ಗೊಂಬೆ. ಗುಡುಗಿನ ಸಣ್ಣನೆಯ ಶಬ್ದ ಕೇಳಿದರೂ ನಿನ್ನ ಮೈಯಲ್ಲಿ ಕಂಪನ. ಮುಸಲಧಾರೆ ಕೆನ್ನೆ ತಾಕಿ, ಹನಿ ನೀರು ಕೆನ್ನೆ ಇಳಿಯಬೇಕಾದರೆ ನಿನ್ನ ವದನಾರವಿಂದದಲ್ಲಿ ರಂಗು ತುಂಬುತ್ತೆ, ಅದು ನನಗೆ ತುಂಬಾ ಇಷ್ಟವಾಗುತ್ತೆ ಗೊತ್ತಾ.
ಹಾಗೊಂದು ಭೇಟಿಯಾಗಿ ನಿನ್ನ ಮೊಗವ ನೋಡಿ ಎಷ್ಟು ಕಾಲವಾಯಿತು. ಹಿಂದೆ ನಾವು ಕಳೆದ ದಿನಗಳನ್ನು ಮತ್ತೆ ಕಳೆಯಬೇಕು. ಅದಕ್ಕೆ ಈ ಬಾರಿ ಯಾವ ನೆಪವನ್ನೂ ಹೇಳದೆ ಸುಮ್ಮನೆ ಬಾ. ಹಾಗೆ ನೀನು ಬರುವ ದಿನಕ್ಕೆಂದೇ ನಿನ್ನ ಪಾಲಿಗೆ ಅದ್ಭುತ ಎನಿಸುವ ಗಿಫ್ಟ್ ಕೊಡುತ್ತೇನೆ.

ಮತ್ತೆ ಊರಲ್ಲಿ ಭಾರಿ ಮಳೆ ಸುರಿಯುತ್ತಿದೆ, ಹೊರಗೆ ಕಾಲಿಡಲೂ ಭಯವಾಗುತ್ತಿದೆ ಎಂದು ಹೇಳಬೇಡ. ಯಾಕೆಂದರೆ ನಿನ್ನ ಎದುರುಗೊಳ್ಳಲು ಎಲ್ಲ ಸಿದ್ಧತೆಯನ್ನೂ ಮಾಡಿ ಮುಗಿಸಿದ್ದೀನಿ.

ನಿನ್ನ ಮಳೆರಾಯ

Tuesday, May 19, 2009

ಮಳೆ ಬರ್ತಿದೆ.. ನೆನಪಾಗ್ತಿದೆ..

ಮಳೆ ಹುಡುಗೀ,

ನಿನ್ನೂರಲ್ಲಿ ಬಿಸಿಲ ಸಂಭ್ರಮವಾದರೆ ನನಗಿಲ್ಲಿ ಮಳೆಯಲ್ಲಿ ನೆನೆದ ಸಂಭ್ರಮ. ಕಳೆದ ಮೂರು ದಿನಗಳಿಂದ ಇಲ್ಲಿ ಮಳೆಯದೇ ದರ್ಬಾರು. ನೀನಲ್ಲಿ ಬಿಸಿಲ ಬೇಗೆ ತಾಳಲಾರೆ ಎಂದರೆ ನಾನಿಲ್ಲಿ ಕಳೆದ ಮಳೆಯಲ್ಲಿ ನಿನ್ನ ಜತೆ ಕಳೆದ ನೆನಪುಗಳ ಸುಮಧುರ ಭಾವಗಳಲಿ ಬಂಧಿ.

ಮಧ್ಯಾಹ್ನ ಸೂರ್ಯ ನೆತ್ತಿಯಿಂದ ಜಾರಿ ಆ ಕಡೆ ಹೊರಳುತ್ತಿದ್ದಂತೆಯೇ ಅಪರೂಪಕ್ಕೆ ಎಂಬಂತೆ ಕಾಣಿಸುತ್ತದೆ ಕಾಮನಬಿಲ್ಲು. ಆ ಕಾಮನಬಿಲ್ಲಿನಲ್ಲಿ ನಿನ್ನ ಕನಸು ಕಾಣುತ್ತಾ ಕುಳಿತವನಿಗೆ ಎಚ್ಚರವಾಗಿದ್ದು ಮೊದಲ ಮಳೆ ಹನಿ ಮೈ ತಾಕಿದಾಗಲೆ. ಹಾಗೆ ಬೀಳುವ ಮಳೆಗೆ ಅಂಗೈ ಚಾಚಿ ಹನಿಯ ಹಿಡಿಯಲು ಪ್ರಯತ್ನಿಸುತ್ತಿರುವಾಗ ನಾನು ನೀನು ಜತೆಯಲ್ಲಿ ಕುಳಿತು ಬೊಗಸೆಯೊಡ್ಡಿ ಹಿಡಿದ ಮಳೆಯ ಚಿತ್ತಾರ ನೆನಪಾಗಿ ಕಾಡುತ್ತಿದೆ. ಅದೇ ವೇಳೆ ಕಣ್ಣ ಮುಂದೆ ಪರಸ್ಪರ ತಬ್ಬಿಕೊಂಡು ಮಳೆಯಲ್ಲಿ ನೆನೆಯುತ್ತಾ ಹೋಗುವ ಪ್ರಣಯ ಜೋಡಿಯನ್ನು ಕಂಡು ಅಸೂಯೆ.

ಈ ಕಾಲೇಜಿಗೆ ಅದ್ಯಾವ ಲೆಕ್ಕ ಅಂತ ಇಷ್ಟು ಸುದೀರ್ಘ ರಜೆ ಕೊಡುತ್ತಾರೋ. ನೀನಿಲ್ಲದ ಒಂದು ಕ್ಷಣವನ್ನೂ ಬಿಟ್ಟಿರಲಾರದವನು ನಾನು. ಅದರ ನಡುವೆ ಈ ಮಳೆ ಬಂದರೆ ಮನದಲಿ ನೆನಪುಗಳ ಮೆರವಣಿಗೆ. ಈ ಸಂಭ್ರಮದಲ್ಲಿ ನೀನಿಲ್ಲದೆ ನಾನು ಏಕಾಂಗಿ ಎಂದು ನಾನು ಕಣ್ಣೀರಾಗುತ್ತೇನೆ. ಅದ್ಸರಿ ರಜೆ ಎಂದಾಕ್ಷಣ ಪ್ರೀತಿಸಿದ ಹುಡುಗನ ಮರೆತು ಬಿಡೋದಾ? ಎಸ್‌ಎಂಎಸ್, ಫೋನ್ ಕಾಲ್ ಇಲ್ಲ, ನೀ ಪತ್ರ ಬರೆದ ನೆನಪೇ ನನಗಿಲ್ಲ. ಈಗ ಕೇವಲ ನಿನ್ನ ಬಗೆಗಿನ ಕನಸುಗಳು ಮಾತ್ರ. ಇನ್ನೇನು ಎರಡು ವಾರ ಅಷ್ಟರಲ್ಲಿ ಕಾಲೇಜು ಆರಂಭವಾಗುತ್ತೆ. ಕಾಲೇಜು ಆರಂಭದ ಮೊದಲ ದಿನದ ಇಳಿಸಂಜೆ ಬೀಳುವ ಮಳೆ ಹನಿಯ ಹಿಡಿಯಲು ನೀ ಬೊಗಸೆ ಜೋಡಿಸಬೇಕು.

ಆ ಸಂಭ್ರಮದಲ್ಲಿ ನಿನ್ನ ಕೈಜೋಡಿಸಿ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ ನಿನ್ನ ನಗುವ ನಯನಗಳಲ್ಲಿ ಮಳೆ ಹನಿಯ ಕಾಣಬೇಕು. ಹಾಗೇ ಕಣ್ಣಿಟ್ಟು ನೋಡುವ ವೇಳೆಯಲ್ಲಿ ಫಳ್ಳನೆ ಒಂದು ಮಿಂಚು ಹೊಳೆದಿರುತ್ತೆ. ಅದಕ್ಕೆ ಬೆದರಿ ನೀ ಚಿಗರೆಯಂತೆ ನನ್ನ ತೋಳು ಸೇರಿರ್ತೀಯಾ ಅಲ್ವೇನೇ?

ಮಳೆ ಪ್ರೀತಿಯ ಹುಡುಗ

Tuesday, May 12, 2009

ಮನೆಗೆ ಬರಲು ಹೇಳು ನಿನ್ನಿನಿಯನ..!!

ನನ್ನ ಹುಡುಗಾ,
ರಿಸಲ್ಟ್ ಬಂತು, ಫರ್ಸ್ಟ್ ಕ್ಲಾಸ್ ಪಾಸು. ಆದರೆ ಆ ಸಂಭ್ರಮದಲ್ಲಿ ನೀನು ಮಾತ್ರ ಪಾಲ್ಗೊಂಡಿಲ್ಲ ಎನ್ನುವ ದುಗುಡ ಇನ್ನೂ ದೂರ ಹೋಗಿಲ್ಲ. ಪಾಸಾಗಿದ್ದಕ್ಕೆ ಕಂಗ್ರಾಟ್ಸ್ ಎಂದು ಎಸ್‌ಎಂಎಸ್ ಕಳುಹಿಸಿದರೆ ನಿನ್ನ ಜವಾಬ್ದಾರಿ ಮುಗಿಯುವುದಿಲ್ಲ ಗೆಳೆಯಾ. ಪ್ರೀತಿಸುವ ಹುಡುಗಿ ಎಲ್ಲಾ ಸಂಭ್ರಮದಲ್ಲೂ ಇನಿಯನ ಸಾಂಗತ್ಯ ಬಯಸುತ್ತಾಳೆ ಎನ್ನುವುದು ನೆನಪಿರಲಿ!

ಅಪ್ಪ ಅಮ್ಮನ ಜತೆ ಈ ಸಂಭ್ರಮವನ್ನು ಹಂಚಿಕೊಂಡರೂ ನಿನ್ನ ಜತೆ ಇದ್ದ ಭಾವಗಳು ಗರಿಗೆದರುವುದಿಲ್ಲ. ನೀನು ಜತೆಗಿದ್ದಿದ್ದರೆ ಅಪ್ಪ ಅಮ್ಮನಿಗೂ ಸಂತಸ ಇರುತ್ತಿತ್ತು. ನಾನು ನೀನು ಪ್ರೇಮ ಜೋಡಿ ಎಂದು ನಿನ್ನ ಪ್ರೀತಿಸಲಾರಂಭಿಸಿದ ಮೊದಲ ದಿನವೇ ಅಪ್ಪ ಅಮ್ಮನಲ್ಲಿ ಹೇಳಿದ್ದೆ. ಅವರು ನನ್ನ ಕನಸುಗಳನ್ನು ನಿರೀಕ್ಷೆಗಳನ್ನು ನಿರಾಕರಿಸುವುದಿಲ್ಲ ಎಂಬುದು ನನಗೆ ಮೊದಲೇ ತಿಳಿದಿತ್ತು.

ಅವರಿಗೆ ಗೊತ್ತು ಮಗಳ ಇಂದಿನ ಸಂಭ್ರಮಕ್ಕೆ ಇವಳ ಬೆನ್ನ ಹಿಂದೆ ಬಿದ್ದ ಹುಡುಗನೇ ಕಾರಣ. ಓದಿನಲ್ಲಿ ಸದಾ ಹಿಂದಿರುತ್ತಿದ್ದ ಈಕೆ ಈತನ ಸಾಥ್ ಸಿಕ್ಕಿದ ನಂತರ ಬದಲಾಗಿದ್ದಾಳೆ. ಅನುಸರಣೆ ಇಲ್ಲದ ಹುಡುಗಿ ಎಂದು ಪ್ರಖ್ಯಾತಳಾದವಳಿಗೆ ಅನುಸರಣೆ ಎಂಬ ಶಬ್ದದ ಅರ್ಥವನ್ನು ಪ್ರೀತಿಯ ರೂಪದಲ್ಲಿ ಕೊಟ್ಟವನು ನೀನು ಎಂದು ಎಂದೋ ತಿಳಿದು ಹೋಗಿತ್ತು.

ಹುಡುಗಾ ನಿನ್ನ ಕಂಗ್ರಾಟ್ಸ್ ಎಂಬ ಮೆಸೇಜ್ ಬಂದ ತಕ್ಷಣ ಅಮ್ಮನಲ್ಲಿ ಹೇಳಿದ್ದೆ, ಅಮ್ಮ ನನ್ನ ಹುಡುಗ ಮೆಸೇಜ್ ಮಾಡಿದ್ದಾನೆ. ಮನೆಗೆ ಬರಲು ಹೇಳು ನಿನ್ನಿನಿಯನ ಎಂದು ಅವಳು ಹೇಳಿದ್ದೇ ತಡ, ನಿನ್ನ ಆಮಂತ್ರಿಸಲು ಫೋನ್ ಎತ್ತಿ ಡಯಲ್ ಮಾಡಿದರೆ ಕೇಳಿದ್ದು ಟೆಲಿಫೋನ್ ಹುಡುಗಿಯ ಔಟ್ ಆಫ್ ಕವರೇಜ್ ಏರಿಯಾ ಎಂಬ ಮಾತು. ಎಂದಿನ ಅವಳ ಕಿವಿಗಿಂಪು ಮಾತು ಅಂದು ಎಷ್ಟು ಕರ್ಕಶವಾಗಿ ಕೇಳಿತ್ತು ಗೊತ್ತಾ.
ಇನ್ನೂ ತಡಮಾಡಬೇಡ. ಶೀಘ್ರವಾಗಿ ಬಾ. ಅಪ್ಪ ಅಮ್ಮ ನಮ್ಮ ಸುಂದರ ಭವಿಷ್ಯಕ್ಕೆ ಮುದ್ರೆ ಹಾಕಿದ್ದಾರೆ. ಬರಬೇಕಾದರೆ ಕೈಯಲ್ಲಿ ಒಂದು ಪುಟ್ಟ ಮಲ್ಲಿಗೆ ದಂಡೆ, ಒಂದು ಚೆಂಗುಲಾಬಿ ಇರಲಿ. ಅದಕ್ಕಿಂತ ಹೆಚ್ಚಿನ ಸಂಭ್ರಮ ನನಗೆಲ್ಲಿಯದು?

ನಿನ್ನ ಹುಡುಗಿ

Wednesday, May 6, 2009

ನೀನೇ ನನ್ನ ಬದುಕು, ನೆನಪಿರಲಿ...

ಪ್ರೀತಿಯ ಹುಡುಗಾ,
ಒಂದು ಪ್ರೇಮ ಪತ್ರ ಈ ಪರಿ ಮನವ ಕಾಡುತ್ತಾ? ಈ ರೀತಿ ಭಾವನೆಗಳ ಭಾಷೆ ನಿನಗೆ ಕಲಿಸಿಕೊಟ್ಟವರು ಯಾರು? ನೀ ಬರೆದ ಪತ್ರಗಳಿಗೆ ಉತ್ತರ ಬರೆಯೋಣ ಎಂದು ಹೊರಟರೆ ನಿನ್ನ ಭಾವಗಳ ಮುಂದೆ ಲೇಖನಿ ಸಾಗುವುದೇ ಇಲ್ಲ!

ಪ್ರತಿನಿತ್ಯ ಎಸ್‌ಎಂಎಸ್, ಮೊಬೈಲ್ ಎಂದು ಒಡನಾಟ ಇದ್ದರೂ ನೀ ಬರೆದ ಪತ್ರಗಳು ಅಷ್ಟರ ಮಟ್ಟಿಗೆ ಆಪ್ತವಾಗುತ್ತವೆ. ಅಲ್ಲಿರುವ ನವಿರು ಭಾವಗಳು ಆಹ್ಲಾದ ನೀಡುತ್ತವೆ.

ಮೊನ್ನೆ ಪರೀಕ್ಷೆ ಮುಗಿಯಿತು ನೋಡು. ಅದು ಕಳೆದ ಎರಡೇ ದಿನದ ನಂತರ ಒಂದು ಮುಂಜಾವದಲಿ ಅಪ್ಪ ಅಮ್ಮನ ಕಿವಿಯಲ್ಲಿ ಏನೋ ಉಸುರುತ್ತಿದ್ದ. ಹೇಳುವ ರೀತಿಯನ್ನು ನೋಡಿಯೇ ಅರ್ಥೈಸಿಕೊಂಡೆ ಇದು ಹೆಣ್ಣು ಹುಟ್ಟಿದವರ ಪಾಡು ಅಂತ.

ಸಂಜೆ ಕಾಫಿ ಕುಡಿದ ತಕ್ಷಣ, ಬಾರೇ ವಾಯುವಿಹಾರಕ್ಕೆ ಹೋಗಿ ಬರೋಣ ಎಂದು ಅಮ್ಮ ಕರೆದಳು ನೋಡು, ಆಗಲೇ ಮನಸ್ಸಿಗೆ ಗಟ್ಟಿಯಾಗಿಬಿಟ್ಟಿತ್ತು ಇದು ಮದುವೆಗೆ ಸಿದ್ಧಳಾಗು ಎನ್ನುವುದರ ಮುನ್ನುಡಿ ಎಂದು.

ಹಾಗೇ ನಡೆಯಬೇಕಾದರೆ ಅಪ್ಪನ ಮಾತನ್ನು ಯಥಾವತ್ತಾಗಿ ಕಿವಿಯಲ್ಲಿ ಉಸುರಿದ್ದಳು. ಹುಡುಗ ದೂರದ ಸಂಬಂಧಿಯ ನೆಂಟನ ಮಗನಂತೆ. ಓಡಾಡಲು ಕಾರು, ಜೀವನಕ್ಕೆ ಐಷಾರಮಿ ಮನೆ, ಕಾಲಿಗೊಬ್ಬ ಕೈಗೊಬ್ಬ ಆಳು... ನಾ ಒಪ್ಪಿದರೆ ಆ ಮನೆಗೆ ಯಜಮಾನತಿಯಂತೆ. ಹೀಗೆ ಅವಳು ಹೇಳುತ್ತಾ ಹೋದಳು, ನಾನು ಸುಮ್ಮನೆ ಎಲ್ಲವನ್ನೂ ಕೇಳುತ್ತಾ ಹೋದೆ.

ಅಮ್ಮನಿಗೆ ನನ್ನ ಮನಸ್ಸು ಅರಿವಾಗಿತ್ತು. ಮಗಳು ಮನಸ್ಸಲ್ಲಿರುವುದನ್ನು ಬಾಯ್ಬಿಡುತ್ತಿಲ್ಲ. ಎಷ್ಟೆಂದರೂ ಹೆತ್ತವ್ವ ಅವಳಿಗೆ ನನ್ನ ಮನದ ದುಗುಡ ಅರ್ಥವಾಗದೇ ಇರುತ್ತಾ. ಅದಕ್ಕೇ ಅವಳು ಕೊನೆಯದಾಗಿ ಮಗಳೇ ಒತ್ತಾಯವಿಲ್ಲ ಎಂದು ಸಾಗಹಾಕಿದಳು.

ಆದರೆ ಗೆಳೆಯಾ, ಅಂದು ರಾತ್ರಿ ನಿದ್ರೆಯೇ ಹತ್ತಲಿಲ್ಲ. ಎಂದೋ ಕಳೆದು ಹೋಗಲಿದ್ದ ಹುಡುಗಿಯ ಆಂತರ್ಯವನ್ನು ಅರಿತು ಭರವಸೆಯ ಬೆಳಕು ನೀಡಿದವ ನೀನು. ಹೃದಯದಲ್ಲಿ ಅಡಗಿದ್ದ ದುಃಖವನ್ನು ಹೇಳಿದಾಗ ಮುದ್ದು ಮಗುವಿನಂತೆ ಸಲಹಿದವನು ನೀನು. ಜೀವನದ ಪ್ರತಿ ಕ್ಷಣದ ಸಂಭ್ರಮಕ್ಕೆ ದಾರಿ ತೋರಿದವನು ನೀನು. ಆದಕ್ಕೇ ಮದುವೆಯಾಗುವುದಾದರೆ ನಿನ್ನನ್ನೇ ಎಂದು ತೀರ್ಮಾನಿಸಿ ಅಮ್ಮನಿಗೆ ಹೇಳಲು ಹೊರಟಿದ್ದೇನೆ. ಅವಳಿಗೆ ಮಗಳ ಮಾತು ಅರ್ಥವಾಗುತ್ತೆ. ಅಪ್ಪ ಒಪ್ಪಿಬಿಟ್ಟರೆ ನಮ್ಮ ಸಂಸಾರ ಆನಂದ ಸಾಗರ!

ನಿನ್ನ ಹುಡುಗಿ

Tuesday, April 28, 2009

ಬಂಗಾರದೊಡವೆ ಬೇಕು.. ಅದ.. ನೀ ತಂದುಕೊಡಬೇಕು..

ಬಂಗಾರೂ,
ಐ ಲವ್ ಯೂ ಸೋ ಮಚ್. ಈ ಸಂಭ್ರಮದಲ್ಲಿ ನೀನು ಏನು ಕೇಳುವಿಯೋ ಅದನ್ನು ಕೊಡಲು ನಾನು ಸೈ. ಯಾಕೆಂದು ಕೇಳ ಬೇಡ. ಕೊನೆಗೂ ಅಕ್ಷಯ ತೃತೀಯದ ದಿನವೇ ಬೆರಳಿಗೆ ಉಂಗುರ, ಕೊರಳಿಗೆ ಸರ ತೆಗಸಿಕೊಟ್ಟೆಯಲ್ಲಾ ಸಾಕು ಕಣೋ.

ನಾನು ಚಿನ್ನದ ಬೇಡಿಕೆಯಿಟ್ಟಾಗ ಎಷ್ಟು ಹೆದರಿದ್ದೆ ಗೊತ್ತಾ. ನೀನು ಕೋಪಿಸಿದರೆ ರಮಿಸೋದು ಹೇಗೆಂದು ಯೋಚಿಸುತ್ತಾ ನಿನ್ನ ಮುಂದೆ ಬೇಡಿಕೆಯಿಟ್ಟಿದ್ದೆ. ನಿಂಗೊತ್ತಾ ಹುಡುಗಾ ಹೀಗೆ ಅಕ್ಷಯ ತೃತೀಯಾ ದಿನ ಬಂಗಾರ ಖರೀದಿಸಿ ನಾನೀಗ ಅಕ್ಷರಶಃ ‘ಚಿನ್ನದ ಹುಡುಗಿ’ಯೇ ಆಗಿಬಿಟ್ಟಿದ್ದೇನೆ.

ಕಳೆದ ಬಾರಿಯ ಸಂಭ್ರಮಕ್ಕೆ ಕಿವಿಯಲ್ಲಿ ಎರಡು ಆಭರಣ ಸಾಲದು ಎಂಬಂತೆ ಮತ್ತೆ ಎರಡು ತೂತು ತೆಗೆಸಿ ಆಭರಣ ಹಾಕಿಸಿದ್ದೆ ಗೊತ್ತಾ. ಅಮ್ಮ ಬೈದಳು, ಆದರೆ ಅವಳಿಗೆ ಎಲ್ಲಿ ಗೊತ್ತಾಗುತ್ತೆ ನನ್ನ ಚಿನ್ನದ ಪ್ರೇಮ.

ಅದಕ್ಕಿಂತ ಹಿಂದಿನ ವರ್ಷ ಅಮ್ಮನಿಗೆ ಗೊತ್ತಾಗದೆ ಎರಡು ಕಾಲುಂಗುರ ಖರೀದಿಸಿ ಅದನ್ನು ಧರಿಸಿ ಅಮ್ಮನ ಮುಂದೆ ಹೋಗಿ ವಯ್ಯಾರದಿಂದ ಹೇಗಿದೆಯಮ್ಮಾ ಎಂದು ಕೇಳಿದಾಗ, ಮದುವೆಗೆ ಮುಂಚೆ ಕಾಲುಂಗುರ ತೊಟ್ಟಿದ್ದಕ್ಕೆ ಅಮ್ಮ ಲಕ್ಷ ನಾಮಾರ್ಚನೆ ಮಾಡಿ ಬಾಯಿ ಮುಚ್ಚಿಸಿದ್ದಳು.

ಬಾಲ್ಯದಿಂದಲೂ ನನಗೆ ಚಿನ್ನದ ಮೇಲೆ ವಿಪರೀತ ಪ್ರೀತಿ. ಹುಟ್ಟಿ ವರ್ಷ ಕಳೆಯುವುದರೊಳಗಾಗಿ ಅಜ್ಜ ಸೊಂಟಕ್ಕೆ ಚಿನ್ನದ ಉಡಿದಾರ ತೊಡಿಸಿದ್ದ. ಎರಡನೇ ವರ್ಷಕ್ಕೆ ಅಪ್ಪ ಕೊರಳಿಗೆ ಹಾರ ಕರುಣಿಸಿದ್ದ. ಪ್ರತಿ ವರ್ಷದ ಸಂಭ್ರಮದಲ್ಲಿ ಅಪ್ಪ ಅಮ್ಮ ಇಬ್ಬರೂ ಸೇರಿ ನೀಡುತ್ತಿದ್ದ ಆಭರಣಗಳು ಇಂದಿಗೂ ಅಲಮಾರಿಯಲ್ಲಿ ಭದ್ರ.

ನನಗೊತ್ತು ಎಲ್ಲರೂ ನನ್ನ ಮೇಲೆ ತೋರುವ ಪ್ರೀತಿ ಕಂಡು ನಿನ್ನಲ್ಲಿ ಅಸೂಯೆ ಮೂಡುತ್ತೆ. ಅದಕ್ಕೇ ಕಳೆದ ವಾರದಿಂದಲೇ ನಿನ್ನ ಬೆನ್ನಿಗೆ ದುಂಬಾಲು ಬಿದ್ದಿದ್ದು ನೀನೇನಾದರೂ ಕರುಣಿಸು ದೊರೆಯೇ ಎಂದು.

ಹೃದಯದ ದೊರೆಯೇ ಇನ್ನೇನೂ ನಿನ್ನಲ್ಲಿ ಕೇಳಲ್ಲ, ಯಾವ ಆಭರಣವೂ ಬೇಡ. ನಿನಗೆ ನಿರಾಭರಣವೇ ಸುಂದರ ಎನಿಸುವುದಾದರೆ ಅದೇ ಸಾಕು. ಇನ್ನು ಕಾಡುವುದಿಲ್ಲ, ಬೇಡುವುದೂ ಇಲ್ಲ. ಆದರೆ ಕೊನೆಗೊಂದು ಆಸೆ ಇನ್ನೂ ಉಳಿದಿದೆ. ಸಿಕ್ಕಾಗ ಹೇಳುತ್ತೇನೆ.. ಬರುತ್ತೀಯಾ?

ನಿನ್ನ ಬಂಗಾರಿ

Tuesday, April 21, 2009

ಅಗಣಿತ ತಾರೆಗಳ ನಡುವೆ ನಿನ್ನ ಹೆಸರಿನ ನಕ್ಷತ್ರ ಹುಡುಕಾಡಿದೆ..

ಬೆಳದಿಂಗಳ ಬಾಲೆ,
ಮೊನ್ನೆ ಸುರಿದ ಮಳೆಯ ಹನಿ ನೆನಪುಗಳ ಕಲರವ ಹೊಮ್ಮಿಸಿತು ನೋಡು. ಮೊದಲ ಮಳೆಯ ಹನಿ ಧರೆತಾಕಿದಾಗ ಹೊರಹೊಮ್ಮುವ ಕಂಪಿನಂತೆ. ಆ ಸುಗಂಧ ಎಲ್ಲಾ ಮಳೆಯಲ್ಲೂ ನಮ್ಮನ್ನು ಕಾಡುವುದಿಲ್ಲ . ಹಾಗಂತ ನಿನ್ನ ನೆನಪು ಎಲ್ಲಾ ದಿನಗಳಲ್ಲೂ ಕಾಡುವುದಿಲ್ಲ ಎಂದಲ್ಲ.

ಆದರೆ ಕೆಲವೊಮ್ಮೆ ಭಾವನೆಗಳ ಸಮ್ಮಿಳಿತದಲ್ಲಿ ವಿನಾಕಾರಣ ಹೆಚ್ಚು ಹೆಚ್ಚು ಕಾಡುತ್ತೀಯ. ಮೊನ್ನೆ ರಾತ್ರಿ ಬೇಸಗೆಯ ಧಗೆ ತಾಳಲಾರದೆ ಮನೆಯ ಟೆರೇಸ್ ಮೇಲೆ ಮಲಗಿದ್ದೆ. ಅಲ್ಲಿ ಇರುವ ಅಗಣಿತ ತಾರಾಗಣಗಳ ನಡುವೆ ನಿನ್ನ ಹೆಸರಿನ ನಕ್ಷತ್ರವನ್ನು ನಕ್ಷತ್ರಿಕನಂತೆ ಹುಡುಕಾಡತೊಡಗಿದೆ. ಅದು ಎಲ್ಲರಿಗೂ ಕಾಣಸಿಗುವುದಿಲ್ಲ. ಅದಕ್ಕೊಂದು ಸಣ್ಣ ಸೂಕ್ಷ್ಮತೆ ಬೇಕು ನೋಡು. ಹಾಗೆ ಇರಬೇಕಾದರೆ ದೂರದಲ್ಲೆಲ್ಲೋ ಕಾಣಿಸಿತು ಮಿಂಚ ಬೆಳಕು. ಅದು ಮಾಯವಾಗಿ ಈ ಕಡೆ ಹೊರಳಿ ನೋಡುತ್ತೀನಿ ನನ್ನ ಚುಕ್ಕಿ ನಕ್ಷತ್ರ ನಭದಲ್ಲಿ ನಗುತ್ತಿದ್ದಾಳೆ.

ಆ ನಗುವಿನಲೆಯ ಮಂದಸ್ಮಿತವ ನೆನಪಿಸಿಕೊಂಡು ನಿದ್ದೆಯಲ್ಲಿ ಮುಳುಗಿ ಹೋದವನಿಗೆ ಎಚ್ಚರವಾದದ್ದು ತಡರಾತ್ರಿಯಲ್ಲಿ ಮೊದಲ ಮಳೆ ಹನಿ ತಾಕಿದಾಗ. ಅದೆಲ್ಲಿಂದ ಬಂತೋ, ಮಳೆಯ ಸುಳಿವೇ ಇರಲಿಲ್ಲ. ಹಾಗೆ ಮೊದಲ ಹನಿ ಬಿದ್ದ ಐದು ನಿಮಿಷದಲ್ಲಿ ವಾತಾವರಣದಲ್ಲಿ ತಂಪೇರಿತ್ತು ನೋಡು. ಮನದಲ್ಯಾಕೋ ನೀ ನೀನೀಗ ಜತೆಗಿದ್ದರೆ ಎಂಬ ಕಲ್ಪನೆ ದಟ್ಟವಾಗಿ ಕಾಡಲು ಆರಂಭಿಸಿತ್ತು. ಅಂದು ನಿನ್ನೂರಲ್ಲೂ ಮಳೆಯಾಗಿತ್ತು. ಅದನ್ನು ತಿಳಿಸೋಣವೆಂದು ನೀನು ಸಂಭ್ರಮದಿಂದ ಫೋನಾಯಿಸಿದ್ದೆ. ಆ ಮಳೆಯ ನಡುವೆ ಹೊಳೆಯುವ ಮಿಂಚು ಬೆಳಕಂತೆ ಮನದಲ್ಲಿ ಭಾವನೆಗಳ ಸುರಿಮಳೆ.

ಮತ್ತೆ ನಾವು ಏನೆಲ್ಲಾ ಮಾತನಾಡಿದೆವು, ಒಂದೇ ಎರಡೇ. ಆ ಮಾತಿನ ಓಘಕ್ಕೆ ಸಮಯ ಕಳೆದ ಪರಿವೆಯೇ ಇರಲಿಲ್ಲ. ಹಾಗೆ ಮಾತನಾಡಿ ಫೋನ್ ಇರಿಸಬೇಕಾದರೆ ಹೊರಗೆ ಬೆಳಕು ಚೆಲ್ಲಿತ್ತು. ಮುಂಜಾನೆ ಸೂರ್‍ಯ ಇನ್ನೇನು ಮೂಡು ದಿಕ್ಕಿನಲ್ಲಿ ನಭ ಕೆಂಪಾಗಿಸಲು ಕ್ಷಣಗಳು ಮಾತ್ರ ಬಾಕಿ. ಹುಡುಗೀ ಪ್ರೀತಿ ಎಂದರೆ ಹೀಗೂ ಕಾಡುತ್ತಾ?
ಮಿಂಚು ಬೆಳಕಲ್ಲಿ ನಿನ್ನ ಕಂಡವ

Tuesday, April 14, 2009

ಅಂದಿದ್ದೆ, ‘ನಾನು ನಿನ್ನ ಸಂಗಾತಿ’ ಮರೆತಿಲ್ಲ ತಾನೆ ಆ ಸಂಗತಿ..?

ಮುದ್ದು ಹುಡುಗೀ,
ನಿನ್ನ ಅಹಂಕಾರ ಜಾಸ್ತಿ ಆಯಿತು. ಆದ್ರೂ ನೀನು ಒಳ್ಳೆಯವಳು. ಮೊನ್ನೆ ಮೊನ್ನೆ ಪರೀಕ್ಷೆ ಎಂದು ಫೋನ್ ಎತ್ತಿ ಮಾತನಾಡಲಿಲ್ಲ ಅಲ್ವಾ, ಅದ್ಕೇ ನಿಂಗೆ ಅಹಂಕಾರ ಎಂಬ ಪಟ್ಟ ಕಟ್ಟಿದ್ದು.

ಮೈ ತೇರೇ ಪ್ಯಾರ್ ಮೇ ದೀವಾನಾ ಹೋ ಗಯಾ
ದಿಲ್‌ರುಬಾ ಯೆ ಬತಾ ಕ್ಯಾ ಕರೂಂ ತೆರೇ ಸಿವಾ

ನಿನ್ನ ಪ್ರೀತಿಯಲ್ಲಿ ಹುಚ್ಚು ಹಿಡಿದಿರುವಾಗ ನೀನಿಲ್ಲದೇ ಹೋದರೆ ಹೇಗಿರಲಿ ಹೇಳು. ಪ್ರೀತಿಯೆಂದರೆ ಏನೆಂದೇ ತಿಳಿಯದವನಿಗೆ ಪ್ರೀತಿಯ ಅನುಭೂತಿ ಕೊಟ್ಟವಳು ನೀನು. ಅದುವರೆಗೆ ಯಾರೂ ನಿನ್ನಷ್ಟು ಕಕ್ಕುಲತೆಯಿಂದ ಮಾತನಾಡಿದವರಿಲ್ಲ. ಅನಾರೋಗ್ಯದಿಂದ ಮುದುಡಿಹೋದ ಬಾಲ್ಯದಲ್ಲಿ ನನ್ನ ಪಾಲಿಗೆ ಗೆಳೆಯರಿರಲಿಲ್ಲ, ಗೆಳತಿಯರಂತೂ ದೂರದ ಮಾತು. ಅಮ್ಮನೇ ನನ್ನ ಬಾಳ ಬೆಳಕಾಗಿದ್ದವಳು. ಹಾಗೆ ಸುಮಾರು 16 ಕ್ಕೂ ಹೆಚ್ಚು ವರ್ಷ ಕಳೆದೆ ನೋಡು. ಅಲ್ಲಿಗೆ ಏಕಾಂಗಿತನ ಅಭ್ಯಾಸವಾಗಿತ್ತು.

ಹಾಗೆ ಯಾವುದೇ ಓಘವಿಲ್ಲದ ಬಾಳಲ್ಲಿ ಬೆಳಕು ತಂದವಳು ನೀನು. ಜೀವನದಲ್ಲಿ ಏಕಾಂಗಿಯಲ್ಲ ನಾನಿದ್ದೀನಿ ‘ಸಂಗಾತಿ’ ಎಂದವಳು ನೀನು. ನನ್ನ ಕೈ ಹಿಡಿದು ಅದರಲ್ಲಿರುವ ರೇಖೆಗಳನ್ನು ನೋಡಿ ಇದರಲ್ಲೊಂದು ಅದೃಷ್ಟರೇಖೆ ನಾನು ಎಂದೆಯಲ್ಲಾ ಆಗ ಹೊಮ್ಮಿತ್ತು ನೋಡು ಪ್ರೀತಿ. ಏಕಾಂಗಿತನ ಮಾಯವಾಗಿ ಸಂಗಾತಿಯ ಒಲವೂ ಸಿಕ್ಕಿದಾಗ ಮನಸು ರೆಕ್ಕೆ ಬಿಚ್ಚಿ ಹಾರಿತ್ತು.

ಆಗ ತಾನೇ ಎಲೆ ಉದುರಿ ಬೋಳಾದ ಮರದಲ್ಲಿ ಚಿಗುರೊಂದು ಕಾಣಿಸಿದಂತೆ, ದಟ್ಟ ಕಾನನದ ನಡುವೆ ಕತ್ತಲಾವರಿಸುತ್ತಿದ್ದಂತೆಯೇ ಕಪ್ಪಡರಿದ ಆಕಾಶದಲ್ಲಿ ಕಂಡ ಅಸಂಖ್ಯ ತಾರೆಗಳ ನಡುವೆ ಮಿಂಚುವ ನಕ್ಷತ್ರದಂತೆ ನಿನ್ನಲ್ಲೇನೋ ಕಂಡೆ. ಅದು ಪ್ರೀತಿಯ ಇಲ್ಲ ಮೋಹವಾ?

ಮಾತಿನ ಮಲ್ಲಿ(ಳ್ಳಿ) ಅಂದು ನೀನು ನಿನ್ನ ಮುಂಗೈಯನ್ನು ತೆಗೆದು ನನ್ನ ಅಂಗೈಯಲ್ಲಿ ಒತ್ತಿ ಬಿಟ್ಟು ಕಣ್ಣಿಟ್ಟು ನೋಡಿದೆಯಲ್ಲಾ ಆಗ ಕಂಡಿತ್ತು ಕಣ್ಣಲ್ಲಿ ಮಿಂಚ ಸೆಳಕು. ಅಂದಿನಿಂದಲೇ ನೀ ಎನ್ನ ಇನಿಯೆಯಾಗಿದ್ದೆ. ನಿಜ ಹೇಳಲಾ, ಜೀವನದ ಈ ಚಿಕ್ಕ ಚಿಕ್ಕ ಸಂತೋಷಗಳನ್ನು ನೀ ನೀಡದೇ ಹೋಗಿದ್ದರೆ ನಾನಿಂದು ಹೀಗಿರುತ್ತಿದ್ದೆನಾ? ನೆವರ್, ಅದ್ಕೆ ಐ ಲವ್ ಯೂ ಮರೀ.
ನಿನ್ನ ಪ್ರೀತಿಯ ಹುಡುಗ

Wednesday, April 8, 2009

ಪತ್ರದ ಕಡೆಯ ಸಾಲುಗಳನ್ನು ಓದದೇ ಬಿಟ್ಟಿದ್ದಿದ್ದರೆ..

ಠೋರ ಹೃದಯಿಯೇ ಕೊನೆಗೂ ನನ್ನ ಮನ ನೋಯಿಸಬೇಕು ಎಂಬ ನಿನ್ನಾಸೆ ಈಡೇರಿತಲ್ಲಾ ಈಗ ಖುಷಿಯಾಯಿತಾ?
ಮೊನ್ನೆ ನೀ ಬರೆದ ಪತ್ರ ಓದುತ್ತಿದ್ದಂತೆ ಕಣ್ಣಲ್ಲಿ ನೀರು, ಹೃದಯದಲ್ಲಿ ನೋವಿನ ಕನಲಿಕೆ ಆರಂಭವಾಗಿತ್ತು.

ಅಷ್ಟಕ್ಕೂ ಮನ ನೋಯಿಸಬೇಕೆಂದು ಇದ್ದರೆ ಅದನ್ನು ಮುಖತಃ ಕುಳಿತು ಮಾಡು, ಆಗ ಹೃದಯ ಇಷ್ಟು ತೀವ್ರವಾಗಿ ಘಾಸಿಗೊಳ್ಳುವುದಿಲ್ಲ ಕಣೋ. ಅದು ಬಿಟ್ಟು ಇಂಥಾ ಚೇಷ್ಟೆಗಳನ್ನೆಲ್ಲಾ ಮಾಡಿದರೆ ಸಹಿಸಲು ಆಗುವುದಿಲ್ಲ.

ಏಪ್ರಿಲ್ ಫೂಲ್ ಹೆಸರಲ್ಲಿ ಇಂಥ ಪತ್ರ ಬರೆದು ನೀನು ಸಖತ್ ಮಜಾ ತೆಗೆದುಕೊಂಡೆ ಅಲ್ವಾ. ಆದರೆ ನೀನೇ ಪ್ರಾಣ ಎನ್ನುವ ಈ ಪುಟ್ಟ ಹೃದಯಕ್ಕೆ ಎಷ್ಟು ದಿಗಿಲಾಗಿತ್ತು ಗೊತ್ತಾ? ಪತ್ರದ ಕೊನೆಯ ಸಾಲು ಓದದೇ ಇದ್ದಿದ್ದರೆ ನಿನ್ನಾಣೆ ನಾ....

ಬೇಡ ಬಿಡು, ಈಗ ಅದರ ನೆನಪುಗಳ್ಯಾಕೆ. ಮತ್ತೆ ಹ್ಯಾಗಿದೀಯಾ? ಇನ್ನೊಂದು ಪರೀಕ್ಷೆ ಮುಗಿದರೆ ಆಯ್ತು. ಮತ್ತೆರಡು ತಿಂಗಳು ಓದಿನ ಜಂಜಾಟಗಳಿರಲ್ಲ. ಮತ್ತೆ ಏನಿದ್ದರೂ ನಿನ್ನ ನೆನಪುಗಳ ಜತೆ ಪಯಣ. ಅಲ್ಲಿ ನೀ ಮುಡಿಸಿದ ಮೊಳ ಉದ್ದದ ಜಾಜಿ ಮಲ್ಲಿಗೆ. ಅದರ ನಡುವೆ ಒಂದು ಚೆಂಗುಲಾಬಿ, ಮೂಗಲ್ಲಿ ಹೊಳೆಯುವ ಮೂಗುತಿ. ಇದನ್ನೆಲ್ಲಾ ನೋಡಿ ನೀ ಕೇಳಬೇಕು ಏನೇ ವಯ್ಯಾರದ ಗೊಂಬೆ ಮರೀ ಅಂತ.

ಆ ಕ್ಷಣದ ನಿರೀಕ್ಷೆಯಲ್ಲಿ ನಾನಿರ್ತೀನಿ. ನಾಡಿದ್ದು ಶುಕ್ರವಾರ ಪರೀಕ್ಷೆ ಮುಗಿಯುತ್ತೆ. ಈಗ ಪರೀಕ್ಷೆನೆಪದಲ್ಲಿ ಫೋನ್ ಮಾಡದೇ ಕುಳಿತಿದ್ದೀಯಲ್ಲಾ. ಅದನ್ನು ಬಡ್ಡಿ ಸಮೇತ ಪರೀಕ್ಷೆ ಮುಗಿದ ನಂತರ ತೀರಿಸಬೇಕು. ಅಲ್ಲಿ ಹಗಲು ರಾತ್ರಿಯ ಪರಿವೆಯೇ ನಮ್ಮ ಪಾಲಿಗೆ ಇರುವುದಿಲ್ಲ.

ಅಂದ ಹಾಗೆ ಮುಂದಿನ ತಿಂಗಳು ನಿನ್ನ ಊರಿಗೆ ಬರುತ್ತಾ ಇದ್ದೀನಿ. ಸದ್ಯಕ್ಕೆ ನೀನು ಸಂಭ್ರಮಪಟ್ಟುಕೊಳ್ಳಲು ಇಷ್ಟು ಸಾಕು. ಮೂರ್ಖಳನ್ನು ಮಾಡಿದ ಮೂರ್ಖ ಹುಡುಗನ ಪ್ರೀತಿಯಲ್ಲಿರುವ..

ನಿನ್ನ ಕನಸು ಕಾಣುವ ಹುಡುಗಿ

Tuesday, March 31, 2009

ನೀನ್ಯಾರೋ ನಂಗೆ ಗೊತ್ತಿಲ್ಲ.. ಇನ್ನು ನನಗೆ ನೀನು ಬೇಕಿಲ್ಲ...

ನಫ್ ಈಸ್ ಇನಫ್. ಇನ್ನೂ ಕಾಯಬೇಕೆಂದರೆ ನನ್ನಿಂದ ಸಾಧ್ಯವಿಲ್ಲ.ಅದರಿಂದ ಪ್ರಯೋಜನವೂ ಇಲ್ಲ. ನಿನ್ನ ಪ್ರೀತಿ ಎಂಬ ಮಾಯೆಯೊಳಗೆ ಬಿದ್ದು ನನ್ನ ಮನಸ್ಸಿಗೆ ನೋವು ಪಡೆದಿದ್ದು ಸಾಕು. ಎಲ್ಲ ಜೀವಕ್ಕೂ ಆದಿ ಇದ್ದಂತೆಯೇ ಅಂತ್ಯ ಎಂಬುದಿದೆಯಂತೆ. ಅದೇ ರೀತಿ ನನ್ನ ಪ್ರೀತಿಗೂ ಅಂತ್ಯ ಸಿಗಲಿ.

ನಿನ್ನಿಂದ ದೂರವಾಗುತ್ತಿದ್ದೇನೆ ಎಂಬುದರಲ್ಲಿ ದುಃಖಕ್ಕಿಂತ ಹೆಚ್ಚು ಸಂತೋಷವಿದೆ. ನನಗ್ಗೊತ್ತು ನಿನಗೆ ಪ್ರೀತಿ ಕೇವಲ ಹೆಸರಿಗೆ ಮಾತ್ರ. ಇದುವರೆಗೆ ನೀನೇ ನನ್ನ ಪಾಲಿನ ದೇವರು ಎಂದು ಗೌರವಿಸಿದೆ. ನನ್ನ ಇಷ್ಟ ದೇವರ ಮುಂದೆ ಎಂದಿಗೂ ಈ ಹುಡುಗಿ ನನ್ನ ಜತೆಗೇ ಇರಲಿ ಎಂದೂ ಪ್ರಾರ್ಥಿಸಿದೆ.

ಆದರೆ ನಂಗೊತ್ತಿತ್ತು ಕಣೇ. ಎದುರಾಬದುರು ಪ್ರೀತಿ ಎಂದು ಕುಳಿತು ಇದೇ ನೀನು ಕೊನೆಗೊಂದು ದಿನ ಕೈಕೊಟ್ಟು ದೂರಹೋಗುವೆ ಎಂದು. ಅಂದು ಕಾಲೇಜಿನಲ್ಲಿ ಜತೆಯಲ್ಲಿ ಕುಳಿತು ನೀನು ನನ್ನ ಪ್ರೀತಿಸಲೇ ಬೇಕು ಎಂದು ಹಟ ಹಿಡಿದೆ. ರಜೆ ಎಂದು ಮನೆಗೆ ಹೋಗುವಾಗಲೂ ನನ್ನ ಪ್ರೀತಿ ಬೇಕಿತ್ತು. ಬಸ್ ಹತ್ತಿಸಿ ನಿನ್ನ ಕೈ ಹಿಡಿದು ಗಲ್ಲಕ್ಕೊಂದು ಮುತ್ತುಕೊಟ್ಟು ಪ್ರೀತಿಸುವವ ಬೇಕಿತ್ತು. ಮನೆಯಲ್ಲಿ ಅಪ್ಪ ಅಮ್ಮನ ಜತೆ ಕುಳಿತು ಊಟ ಮಾಡುವಾಗಲೂ ತುತ್ತು ಬಾಯಿ ಸೇರಲು ನನ್ನ ದನಿ ಬೇಕಿತ್ತು. ಹಾಗೆ ರಾತ್ರಿ ನೀನು ಮನೆಯಲ್ಲಿ ದಿಂಬಿಗೊರಗಿ ಮಲಗುವಾಗ ನಿನ್ನ ನಿದ್ರೆಯಲ್ಲಿ ಬೆಳದಿಂಗಳಾಗಿ ಕನಸಲ್ಲಿ ಕಾಡಿ ನಿದ್ದೆ ಬರುವಾಗ ಜೋಗುಳವ ಹಾಡಲು ಒಬ್ಬ ಹುಡುಗ ಬೇಕಿತ್ತು.

ಆದರೂ ನಿನ್ನನ್ನು ಪ್ರೀತಿಸಿದೆ. ಯಾಕೆ ಗೊತ್ತಾ? ನಿನ್ನಂತ ಹುಡುಗಿ ಬೇರೆಲ್ಲೂ ಸಿಗಲಾರಳು ಎನ್ನುವ ಭರವಸೆಯಿತ್ತು. ನನಗೂ ಸಿಗುವುದಿಲ್ಲ ಎಂಬುದು ಈಗ ಗೊತ್ತಾಗಿದೆ. ಅದಕ್ಕೇ ಸಾಕಾಗಿದೆ ನಿನ್ನ ಪ್ರೀತಿ. ಇನ್ನು ಕಾಡಿ ಬೇಡಿ ನಿನ್ನ ಪ್ರೀತಿಸುವುದರಲ್ಲಿ ಅರ್ಥವಿಲ್ಲ. ಇನ್ನು ಮುಂದೆ ಫೋನ್, ಎಸ್‌ಎಂಎಸ್, ಇ ಮೇಲ್, ಪತ್ರಗಳ ಕಾಟವೂ ಇರುವುದಿಲ್ಲ. ಇದ್ದಷ್ಟು ದಿನ ನೆಮ್ಮದಿಯಾಗಿ ಬಾಳು. ಇನ್ನು ಮುಂದಿರದು ಪ್ರೀತಿಯ ಗೋಳು. ಕಡೆಯದಾಗಿ ಭೇಟಿ ಮಾಡಿ ಬಿಡೋಣವೆನಿಸಿದೆ. ನಾಳೆ ನಮ್ಮ ಕಾಲೇಜ್ ಹಿಂಭಾಗದ ಪಾರ್ಕಿನಲ್ಲಿ ಕಾದಿರುತ್ತೇನೆ. ಬರುವ ಮೊದಲು ಕ್ಯಾಲೆಂಡರ್ ನೋಡಿಕೊಂಡು ಬಾ. ಈಗ ಹೇಳಲು ಏನೂ ಉಳಿದಿಲ್ಲ. ಇದ್ದರೆ ಕಡೆ ಭೇಟಿಯಲ್ಲಿ ಹೇಳುತ್ತೇನೆ.
ನಿನ್ನವ

Tuesday, February 3, 2009

ಅವಳು ಮಾತಾಡಿದರೆ ಏಕಧ್ವನಿ, ನೀನು ಶುರುವಿಟ್ಟರೆ ಸಪ್ತಸ್ವರ...

ಮುದ್ದುಮುಖೀ,
ಎಂದೆಂದೂ ನಿನ್ನನು ಮರೆತು ನಾನಿರಲಾರೆ ಎಂಬ ಹಾಡು ಎಫ್‌ಎಂನಲ್ಲಿ ಕೇಳಿಬರುತ್ತಿದ್ದರೆ ಮನದಲ್ಲಿ ಸಾವಿರ ಭಾವನೆಗಳ ತೊಳಲಾಟ ಆರಂಭವಾಗುತ್ತದೆ. ಅಷ್ಟರ ಮಟ್ಟಿಗೆ ನಿನ್ನ ನೆನಪು ಕಾಡಿ ಬಿಡುತ್ತದೆ. ನಿನ್ನ ನೋಡಿದರೆ ಅದೇನು ಸೆಳೆತವೋ ಗೊತ್ತಿಲ್ಲ.
ಇಂದಿಗೂ ನಿನ್ನ ಫೋನ್ ಕಾಲ್ ಇಲ್ಲದೆ ನನಗೆ ಸುಪ್ರಭಾತವಾಗುವುದಿಲ್ಲ. ಬೆಳ್ಳಂಬೆಳಗ್ಗೇ ಬರುವ ಮಿಸ್ಡ್ ಕಾಲ್‌ಗೆ ಉತ್ತರಿಸದಿದ್ದರೆ ನಿನ್ನದು ರೌದ್ರಾವತಾರ. ನಿನ್ನ ಜತೆ ಫೋನಲ್ಲಿ ಮಾತನಾಡುತ್ತಾ ನನ್ನಲ್ಲಿ ನಾನೇ ಕಳೆದು ಹೋಗುತ್ತೇನೆ. ಕೆಲವು ನಿಮಿಷಗಳ ಕಾಲ ಮಾತಾಡೋಣ ಎಂದು ಫೋನ್ ಮಾಡಿದರೆ, ಫೋನ್ ಇಡುವಾಗ ಭರ್ತಿ ಒಂದೂವರೆ ಗಂಟೆ ಕಳೆದಿರುತ್ತದೆ. ಮತ್ಯಾರಿಗೋ ಫೋನ್ ಮಾಡೋಣ ಎಂದರೆ ಮೊಬೈಲ್‌ನಲ್ಲಿ ಲೋ ಬ್ಯಾಲೆನ್ಸ್ ಎಂದು ಕೋಗಿಲೆ ದನಿ ಉಲಿಯುತ್ತದೆ.
ನಂಗೊತ್ತು ಫೋನ್ ಹುಡುಗೀನ ಕೋಗಿಲೆ ದನಿ ಎಂದು ಹೇಳಿದ್ದಕ್ಕೆ ಸಿಟ್ಟು ಬರುತ್ತೆ ಅಂತ. ಹಾಗಂತ ಅವಳಿಗಿಂತ ಹೆಚ್ಚು ಚೆನ್ನಾಗಿರೋದು ನಿನ್ನ ದನಿ ಮಾತ್ರ. ಅವಳಾದ್ರೆ ಒಂದೇ ರಾಗದಲ್ಲಿ ಮಾತನಾಡುತ್ತಾಳೆ. ಆದರೆ ನೀನು ಮಾತನಾಡಿದರೆ ಸಪ್ತಸ್ವರಗಳೂ ಜತೆ ಸೇರುತ್ತವೆ. ಅವುಗಳ ಜತೆ ಎಲ್ಲಾ ಭಾವಗಳೂ ಒಂದುಗೂಡುತ್ತವೆ. ಇದನ್ನು ಕೇಳುತ್ತಾ ನಾನು ಮೈಮರೆಯುತ್ತೇನೆ.
ನಂಗೊತ್ತು ಈಗ ನಿನ್ನ ತುಟಿಯಂಚಿನಲ್ಲಿ ನಗು ಅರಳಿರುತ್ತೆ. ಆ ಮಂದಸ್ಮಿತದ ವದನದಲ್ಲಿ ನಾಚಿಕೆ ಮೂಡಿರುತ್ತೆ. ಈ ಪತ್ರ ಓದುತ್ತಾ ನೀನು ಮತ್ತೆ ಕೋಪ ಬಿಟ್ಟು ಫೋನ್ ಮಾಡಿ ಕಾಡುತ್ತೀಯಾ. ಹಾಗೆ ನಾವು ಮಾತಾಡುತ್ತಾ ನಿಮಿಷಗಳು ಗಂಟೆಗಳಾಗಿರುತ್ತವೆ. ಮತ್ತೆ ಫೋನ್ ಮಾಡಿ ಮಾತಾಡುವಾಗ ಆ ಹುಡುಗಿ ಕೋಗಿಲೆ ಕಂಠದಿಂದ ಉಲಿಯಬೇಕು. ಲೋ ಬ್ಯಾಲೆನ್ಸ್!
ಕೋಪಿಸಬೇಡ ಮಧುರ ಕಠದ ಸುಂದರೀ.!!!

ಚಿತ್ತ ಚೋರ

Tuesday, January 27, 2009

ಗ್ರಹಣವೆಂದು ಅಮ್ಮನ ಅಲಿಖಿತ ಶಾಸನ ಅವಳಿಗೇನು ಗೊತ್ತು ನನ್ನ ಮನ ವೇದನೆ...

ಮುಂ‘ಗೋಪಿ’
ಐ ಹೇಟ್ ಯೂ, ಹೇಟ್ ಯೂ. ನಿಜವಾಗ್ಲೂ ನಿನ್ನ ಜತೆ ಠೂ. ಎಷ್ಟು ಕೋಪ ಬರುತ್ತೆ ಗೊತ್ತಾ? ಬೆಳಗ್ಗೆ ಫೋನ್ ಮಾಡಿದರೆ ಕೆಲಸದ ಬ್ಯುಸಿ. ರಾತ್ರಿ ಬಂದು ಮಲಗಿದರೆ ನೀನು ಕುಂಭಕರ್ಣ ವಂಶಜ. ಫೋನ್ ಮಾಡಿದ್ರೂ ಎಚ್ಚರವಾಗಲ್ಲ ನಿನಗೆ. ನಿನಗೇನು ಗೊತ್ತು ನನ್ನ ಪಾಡು. ಅದಕ್ಕೆ ಒಂದೇ ಒಂದು ಸಾರಿ ಬಂದು ಹೋಗು ಈ ಹೃದಯದರಸಿಯ ಮನೆಗೆ, ಪ್ಲೀಸ್.
ಮೊನ್ನೆ ಸೂರ್‍ಯಗ್ರಹಣದ ದಿನ ಮಧ್ಯಾಹ್ನ ನಿನ್ನ ನೋಡಬೇಕೆಂದು ಹೊರಡ್ತಾ ಇದ್ದೆ. ತಲೆ ಬಾಚಿ ಮುಡಿಗೆ ಮಲ್ಲಿಗೆ ಏರಿಸುತ್ತಾ ಇದ್ದೆ. ಅಮ್ಮ ಬಂದು ಗ್ರಹಣ ದೋಷದ ಬಗ್ಗೆ ಹೇಳಲು ಆರಂಭಿಸಿದಳು. ಈ ಹೊತ್ತಲ್ಲಿ ಮನೆ ಹೊರಗೆ ಕಾಲಿಡಬೇಡ ಎಂಬ ಅಲಿಖಿತ ಶಾಸನವನ್ನೂ ಹೊರಡಿಸಿದಳು. ಅವಳಿಗೆ ಎಲ್ಲಿ ಅರ್ಥವಾಗುತ್ತೆ ನಮ್ಮಂತಹ ಪ್ರೇಮಿಗಳ ಪಾಡು. ಅವಳು ಬಂದಿಲ್ಲಾ ಅಂದರೆ ನಾನು ನಿನ್ನ ನಿಜವಾಗಲೂ ಕಾಯಿಸುತ್ತಿರಲಿಲ್ಲ. ಹೇಳದೇ ಬಂದು ಬಿಡುತ್ತಿದ್ದೆ. ಅಂದು ಬಂದಿಲ್ಲ ಎಂದು ಕೋಪ ಯಾಕೆ? ಇನ್ನೇನು ಸಾಹಿತ್ಯ ಸಮ್ಮೇಳನ ಆರಂಭವಾಗುತ್ತದೆ. ನನಗೆ ನೀನು, ನಿನಗೆ ನಾನು ಇಷ್ಟವಾದಂತೆ ಇಬ್ಬರಿಗೂ ಸಾಹಿತ್ಯ ಇಷ್ಟ . ಕಳೆದ ಬಾರಿ ಪ್ರೇಮಿಗಳ ಆದರ್ಶ ಶ್ರೀಕೃಷ್ಣನ ನಾಡಿನಲ್ಲಿ ಸಮ್ಮೇಳನದ ನಡುವೆ ನಮ್ಮಿಬ್ಬರ ಸಂಭ್ರಮವಿತ್ತು. ಈ ಬಾರಿ ಚಿತ್ರದುರ್ಗದ ಕಲ್ಲಿನ ಕೋಟೆಗಳ ನಡುವೆ ಸಮ್ಮೇಳನ. ಅಸಂಖ್ಯ ಗೋಷ್ಠಿಗಳ ನಡುವೆ ಅಲ್ಲಿರುವ ನಾವೂ ಸಂಭ್ರಮಿಸಬೇಕು. ಕವಿಗೋಷ್ಠಿಗಳಲ್ಲಿ ಕೂತು ಮಜಾ ಮಾಡಬೇಕು.
ಅಲ್ಲಿನ ಸಾಹಿತ್ಯದ ಸಂತೆಯಲ್ಲಿ ಎಲ್ಲವನ್ನೂ ನೋಡಿ ಕಣ್ಣು ತುಂಬಿಕೊಳ್ಳೋಣ. ಹಾಗಂತಾ ನೀನು ಅಲ್ಲಿ ಬರುವ ಹುಡುಗಿಯರ ಮೇಲೆ ಕಣ್ಣು ಹಾಕಿದೆಯೋ ಹುಷಾರ್!
ಹಾಂ ಈ ಸಾರಿ ನನಗೆ ಇಷ್ಟವಾದ ಪುಸ್ತಕ ಕೊಡಿಸಬೇಕು. ಆ ಆಸೆಯಿಂದಲೇ ನೀನು ಬರುವ ಬಸ್ಸಿಗಾಗಿ ಕಾಯುತ್ತಾ ಇರ್ತೀನಿ. ನೀನು ಬಂದಿಳಿಯುವುದು ಅಮೃತ ಘಳಿಗೆ!
ನಿನ್ನ ತನು

Wednesday, January 14, 2009

ಮೊದ ಮೊದಲು ಮುನಿಸು.. ಆಮೇಲೆ ಕಂಡಿದ್ದು ಬರೀ ಕನಸು..

ತ್ರದ ಜತೆ ನೀನು ಕಳಿಸಿದ್ದ ಸಾವಿರ ಹಗ್ ಹೃದಯ ಸೇರಿ ಅನುರಾಗದ ನವಿರು ಅಲೆ ಮೂಡಿಸಿದೆ. ಆ ಪತ್ರವನ್ನು ಒಂದಲ್ಲ, ಎರಡಲ್ಲ ಹಲವಾರು ಸಾರಿ ಓದಿದೆ. ಪ್ರತಿ ಬಾರಿ ಅದನ್ನು ಓದಿದಾಗಲೂ ನೀ ನನ್ನ ಅಪ್ಪಿಕೊಂಡ ಭಾವ.
ಅಷ್ಟಕ್ಕೂ ಆ ಪತ್ರದಲ್ಲಿ ನಮ್ಮ ಪ್ರೀತಿಯ ಬಗ್ಗೆ ವಿಶೇಷವಾಗಿ ಏನೂ ಇರಲೇ ಇಲ್ಲ ಅಲ್ವೇನೆ?
ಹೊಸ ವರ್ಷ ಸಂಭ್ರಮದಲ್ಲಿ ಅಚ್ಚರಿಕೊಟ್ಟು ಇಲ್ಲಿ ಬರುವಾಗ ನಿನ್ನ ನೆನಪಿನೊಡನೆ ಚಳಿಯೂ ಇತ್ತು. ನಿತ್ಯ ಮುಂಜಾವದಲಿ ಮನೆ ಹಿಂಭಾಗದಲ್ಲಿ ಓಡುವ ರೈಲಿನ ಸದ್ದಿಗೆ ಎಚ್ಚರವಾದರೆ ಆಮೇಲೆ ನಿನದೇ ನೆನಪು. ಮೊದಲು ನಿದ್ದೆ ಹಟ ಮಾಡುತ್ತಿರಲಿಲ್ಲ.
ಅದು ಅದರಷ್ಟಕ್ಕೇ ಇರುತ್ತಿತ್ತು. ಆದರೆ ಈಗ ಹಾಗಿಲ್ಲ, ನಿನ್ನ ನೆನಪಾದರೆ ಸಾಕು ನಿದ್ದೆ ಸೇರಿದಂತೆ ಎಲ್ಲವೂ ಮಾಯ. ನೀನು ನೆನಪಿನ ಬಂಧಿ.
ಯಾರದೋ ಮದುವೆಯಲ್ಲಿ ಭೇಟಿಯಾದ ನಾವು ಪರಸ್ಪರ ಪರಿಚಿತರಾದೆವು. ಇನ್ನೇನು ಮದುವೆ ಮನೆ ಬಿಡಬೇಕೆನ್ನುವಷ್ಟರಲ್ಲಿ ಫೋನ್ ನಂಬರ್‌ಗಳ ವಿನಿಮಯ. ಆ ಪರಿಚಯದ ಸಂಭ್ರಮದ ಎಸಳು ಮನ ತಾಕಿತ್ತು. ಪರಿಚಯ ಪ್ರೇಮವಾಗಿ ಸುತ್ತಾಟ ಆರಂಭವಾಗಿತ್ತು. ಊರಿಂದೂರಿಗೆ ಕಾಲಿಗೆ ಗಾಲಿ ಕಟ್ಟಿ ಅಸಂಖ್ಯ ಪ್ರವಾಸ ಹೋದೆವು.
ಮೊದ ಮೊದಲು ನಿನ್ನ ಬಗ್ಗೆ ಕೆಲವು ವಿಷಯಗಳಲ್ಲಿ ಅಸಮಾಧಾನವಿತ್ತು. ಇಬ್ಬರೂ ಒಬ್ಬರನ್ನು ಅರಿತಂತೆ ಅದೂ ದೂರವಾಯಿತು. ನಿತ್ಯ ಬೆಳಗ್ಗೆ ಎದ್ದ ತಕ್ಷಣ ಒಂದು ಎಸ್‌ಎಂಎಸ್, ರಾತ್ರಿ ನಿನ್ನ ನಿದ್ದೆಗೆ ನಾಲ್ಕು ಸಾಲಿನ ಜೋಗುಳ... ಇವು ನಿತ್ಯ ಸಂಪ್ರದಾಯವಾಯಿತು. ಫೋನ್ ಮಾಡದೇ ಇದ್ದರೆ ನಿನ್ನ ಅಸಹನೆ ನಿನ್ನದೇ ಆದ ರೀತಿಯಲ್ಲಿ ವ್ಯಕ್ತವಾಗುತ್ತಿತ್ತು.
ಎಲ್ಲದರ ನಡುವೆ ಎಲ್ಲಾ ನೋವಿನಲ್ಲೂ, ನಲಿವಿನಲ್ಲೂ ಒಬ್ಬರನೊಬ್ಬರು ಸಂತೈಸುತ್ತಾ ಸಂಭ್ರಮಿಸಿದೆವು. ಅಂದು ನನ್ನ ಕೈ ಬೆರಳುಗಳಿಗೆ ಕೆನ್ನೆ ಮೇಲೆ ಇಳಿದಿದ್ದ ನಿನ್ನ ಮುಂಗುರುಳು ದೂರ ಮಾಡಿ ಬೆರಳು ತಾಕಿಸುವ ತವಕವಿತ್ತು. ಏನೇ ಇರಲಿ ನಿನಗಾದ ಹಾಗೆ ಮೊನ್ನೆ ನಿನ್ನ ಅಪ್ಪಿ ಮುದ್ದಾಡಿದ ಕ್ಷಣದ ಮಾಧುರ್ಯ ಇನ್ನೂ ದೂರಹೋಗಿಲ್ಲ!

ನಿನ್ನ ಮುಂಗುರುಳು ಸವರಿದವ

Tuesday, January 6, 2009

ನಾದ ಗಂಗೆಯಂತೆ ಹರಿದು ಒಲವ ತಂತಿ ಮೀಟುತ್ತಿತ್ತು ಪ್ರೀತಿ..

ಕನಸು ತುಂಬಿ ಕೊಟ್ಟವನೇ,
ಹೊಸ ವರುಷ ಆರಂಭವಾಗಿ ಇಂದಿಗೆ ಸರಿಯಾಗಿ ಏಳು ದಿನ. ಅರ್ಥಾತ್ 168 ಗಂಟೆಗಳ ಹಿಂದೆ ಹೊಸ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ ನಾನು ನಿನ್ನ ತೆಕ್ಕೆಯಲ್ಲಿದ್ದೆ.
ಇಂದಿಗೂ ನಿನ್ನ ಬಿಸಿ ಉಸಿರು ತಾಕಿದ ಕೆನ್ನೆಯಿಂದ ಬಿಸಿ ಇನ್ನೂ ಇಳಿದಿಲ್ಲ. ಕಳೆದ ವರ್ಷದ ಎಲ್ಲಾ ಕೆಡುಕುಗಳನ್ನು ಮರೆತು ನಾವಿಬ್ಬರೂ ಆ ದ್ವೀಪ ರಾಷ್ಟ್ರದ ಕೊನೆಯ ನಿಲ್ದಾಣದಲ್ಲಿದ್ದೆವು. ನಮ್ಮ ಮೇಲೆ ನಿಯಂತ್ರಣ ಹೇರುವವರು ಯಾರೂ ಅಲ್ಲಿರಲಿಲ್ಲ. ನಮ್ಮಂತೆಯೇ ಅಲ್ಲಿಗೆ ಸಂಭ್ರಮಿಸಲು ಬಂದ ಪ್ರಣಯ ಜೋಡಿಗಳಲ್ಲಿದ್ದ ಧಾವಂತ ನಮ್ಮ ಪಾಲಿಗಿರಲಿಲ್ಲ.
ನಮ್ಮ ಸಂಬಂಧವನ್ನು ಇದುವರೆಗೆ ಪಾವಿತ್ರ್ಯದಿಂದ ಕಾಪಾಡಿದ್ದು ಧಾವಂತವಿಲ್ಲದ ಪ್ರೀತಿ. ಅದು ನಿಂತ ನೀರಾಗಿರಲಿಲ್ಲ ಹರಿಯುತ್ತಲೇ ಇತ್ತು ನಾದಗಂಗೆಯಂತೆ. ರಾತ್ರಿ 11.50ರ ವೇಳೆಗಾಗಲೇ ನಾವು ಹಳೆಯ ಜಗಳದ ನೆನಪಿನ ನೇವರಿಕೆಯಲ್ಲಿದ್ದವು.
12 ಗಂಟೆ ಹೊತ್ತಿಗೆ ಹ್ಯಾಪಿ ನ್ಯೂ ಇಯರ್ ಶುಭಾಶಯ ವಿನಿಮಯ ಮಾಡುವ ವೇಳೆಗೆ ನಾನು ಹೊಸ ವರ್ಷದ ಮೊದಲ ನಿಮಿಷಕ್ಕೆ ಕಾಲಿರಿಸುವ ಮುನ್ನವೇ ನಿನ್ನ ತೋಳಲ್ಲಿ ಬಂಧಿಯಾಗಿದ್ದೆ. ನಮ್ಮಲ್ಲಿ ಹಳೆಯ ನೆನಪುಗಳ ಆರ್ದ್ರತೆಯಿತ್ತು.
ಇಷ್ಟು ದಿನದ ಪ್ರೀತಿಯ ಸಾರ್ಥಕತೆಯ ಕುರುಹಾಗಿ ಕಣ್ಣಂಚಿನಿಂದ ಎರಡು ಹನಿ ಉದುರಿದ್ದವು. ಮುಡಿಯೇರಿದ್ದ ಮಲ್ಲಿಗೆ, ನೀನೇ ಮುಡಿಸಿದ ಕೆಂಗುಲಾಬಿ ಪ್ರೀತಿಯಿಂದ ಪಿಸುಗುಡುತ್ತಿದ್ದವು.
ಅಷ್ಟಕ್ಕೂ ಇದಕ್ಕಿಂತ ಅರ್ಥಪೂರ್ಣವಾಗಿ ಹೊಸ ವರ್ಷದ ಸಂಭ್ರಮ ಆಚರಿಸುವ ಮಾತಿಲ್ಲ. ನ್ಯೂ ಇಯರ್ ಸಂಭ್ರಮದ ನಡುವೆಯೇ ಅಮ್ಮನಲ್ಲಿ ನಿನ್ನ ಬಗ್ಗೆ ಹೇಳಿದಾಗ ಅವಳು ಹೇಳಿದ ಮಾತಿನಿಂದ ಕನಸುಗಳು ಮತ್ತೆ ಟಿಸಿಲೊಡೆದಿದ್ದವು.
ಅದು ಈ ವರ್ಷವೇ ನನಸಾಗಲಿ ಎಂದು ಬಯಸಿದ್ದೂ ಆಯಿತು. ಸದ್ಯಕ್ಕೆ ಇಷ್ಟು ಸಾಕು. ಮುಂದಿನ ಸಾರಿ ನಿನ್ನ ಪ್ರೀತಿಯಲ್ಲಿ ಮುಳುಗುವವರೆಗೆ ನಿನ್ನ ಕಾಡಲು ಸ್ವೀಟ್ ಹಗ್ ಈ ಪತ್ರದ ಜತೆ ಇದೆ. ಸಾಕಲ್ವಾ!!!

ನಿನ್ನಲ್ಲಿ ನ್ಯೂ ಇಯರ್ ಕನಸು ಕಂಡವಳು