Wednesday, October 14, 2009

ಅಷ್ಟಕ್ಕೂ ಕೋಪಕ್ಕೆ ಕಾರಣವೇನು?

ಹಮೇ ತುಮ್‌ಸೇ ಪ್ಯಾರ್ ಕಿತ್‌ನಾ,
ಯೆ ಹಮ್ ನಹೀ ಜಾನ್‌ತೇ
ಮಗರ್ ಜೀ ನಹೀ ಸಕ್‌ತೇ
ತುಮ್ಹಾರೇ ಬಿನಾ

ಇನ್ನು ನಿನ್ನನ್ನಗಲಿ ಇರುವುದು ಅಸಾಧ್ಯ ಮಾತು. ಇಷ್ಟು ದಿವಸ ನೆನಪುಗಳ ಮೆರವಣಿಗೆಯಲಿ ಕಾಲ ಕಳೆದಿದ್ದೇ ನನ್ನ ಪಾಲಿನ ಅದ್ಭುತ. ಇದುವರೆಗೂ ಮಾತು ಬಿಟ್ಟು ನಾನು ಇಷ್ಟು ದಿನ ಕೂತವಳಲ್ಲ. ಆದರೆ ಈ ಬಾರಿ ಮಾತ್ರ ಹಾಗಾಗಿಲ್ಲ. ಮೊದಲೇ ನಾನು ಮಾತಿನ ಮಳ್ಳಿ!

ನೀನು ಪೋನ್ ಮಾಡಿ ಇಂದಿಗೆ ತಿಂಗಳು ಐದೂವರೆ ಭರ್ತಿ. ನಿನ್ನ ಪತ್ರ ಕಾಣದೆ ಒಂದೂ ಮುಕ್ಕಾಲು ವರ್ಷ. ಹಿಂದೆಲ್ಲಾ ವಾರಕ್ಕೆ ಮೂರು ಪತ್ರ, ನಿತ್ಯ ಮೂರೂವರೆ ತಾಸು ಮೊಬೈಲ್ ಮಾತು. ಪ್ರೀತಿಸುವ ಇದಕ್ಕಿಂತ ದೊಡ್ಡ ಸಂಭ್ರಮ ಎಲ್ಲಿಯದು? ನೀನು ಮಾತು ಮರೆತಿದ್ದೀಯಾ. ಅಷ್ಟಕ್ಕೂ ಈ ಕೋಪಕ್ಕೆ ಕಾರಣವೇನು?

ನಾನಾಗಲೇ ಎಲ್ಲವನ್ನೂ ಬಿಟ್ಟು ನಿನ್ನ ಜತೆ ಬರಲು ಸಿದ್ಧಳಾಗಿದ್ದೀನಿ. ಆದರೆ ಬಂದು ನೀನು ಕರೆಯಬೇಕು ಅಷ್ಟೆ. ಇನ್ನು ದುಃಖ ದುಮ್ಮಾನಗಳಿಗೆ ಜಾಗ ಕೊಡುವುದಿಲ್ಲ.
ದುನಿಯಾ ಹೈ ಮೇರೇ ಪೀಛೇ,
ಲೇಕಿನ್ ಮೈ ತೇರೇ ಪೀಛೇ,
ಅಪ್ನಾ ಬನಾಲೇ ಮೇರಿ ಜಾನ್...

ನಿನ್ನವಳಾಗಲು ಕಾಯುತ್ತಿರುವವಳು.

Wednesday, October 7, 2009

ನಿನ್ನ ಮಾತಿಗೆ, ಅದರ ರೀತಿಗೆ..

ಭಾವಗಳೊಡೆಯಾ ಪ್ರಣಾಮ,

ನಿಮ್ಮ ಪತ್ರ ಕೈ ಸೇರಿತು. ಇಲ್ಲಿ ಮಳೆಗಾಲ ಮುಗಿದರೂ ಸುರಿಯುತ್ತಿರುವ ಮಳೆಯ ನಡುವೆ ನಿಮ್ಮ ಪತ್ರದ ಭಾವನೆಗಳಲಿ ತೇಲಿ ನಾನು ಒದ್ದೆ ಒದ್ದೆ. ನಿಮ್ಮ ಪತ್ರದ ಕೊನೆಯ ಸಾಲುಗಳನ್ನು ಓದಿಯಾದ ನಂತರ ಹಿಡಿದಿರಿಸಲಸಾಧ್ಯವಾಗಿದ್ದು ಕಣ್ಣಂಚಲ್ಲಿ ಬಂದ ನೀರು.

ಅದ್ಯಾರು ನಿಮಗೆ ಈ ಭಾವನೆಗಳನ್ನು ಇಷ್ಟು ಸುಂದರವಾಗಿ ಬರೆಯಲು ಕಲಿಸಿದರೋ ಗೊತ್ತಿಲ್ಲ. ಆದರೆ ನಾನು ಮಾತ್ರ ನಿಮ್ಮ ಪ್ರತಿ ಶಬ್ದಗಳ ಪೋಣಿಸುವಿಕೆಗೂ ಶರಣಾರ್ಥಿಯಾಗಿದ್ದೇನೆ. ನಮ್ಮೂರಲ್ಲಿ ಮಲ್ಲಿಗೆಯನ್ನು ಅದ್ಭುತವಾಗಿ ಪೋಣಿಸಿದಂತೆ ಭಾವನೆಗಳನ್ನು ನೀವು ಅಕ್ಷರ ರೂಪದಲ್ಲಿ ಜೋಡಿಸುವುದನ್ನು ನೋಡಿದರೆ ನಾನಿಲ್ಲಿ ಕರಗಿ ಹೋಗುತ್ತಿದ್ದೇನೆ.

ಹಾಗೆ ನಿಮ್ಮಿಂದ ಒಂದು ಪತ್ರ ಬಂದಾಗಲೂ ನಾನು ಹಳೆಯ ಪತ್ರ ಕಡತಗಳನ್ನು ತೆಗೆದು ನಿಮ್ಮ ಓಲೆಯನ್ನು ಒಂದೊಂದಾಗಿ ಓದಿನರಮನೆಗೆ ಹಾಕಿಕೊಳ್ಳುತ್ತೇನೆ. ಆದರೆ ಯಾವ ಪತ್ರವೂ ನನಗೆ ಮೋಸ ಮಾಡಿಲ್ಲ. ಈಗ ನಿಮ್ಮ ಮುಂದಿನ ಪತ್ರದ ದಾರಿ ಕಾಯ್ತಾ ಕೂತಿದ್ದೀನಿ.

ಮರೆತೇ ಬಿಟ್ಟಿದ್ದೆ, ಮೊನ್ನೆ ನಿಮ್ಮಮ್ಮ ಸಿಕ್ಕಿದ್ರು. ಅವರಿಗೆ ನೀವಿನ್ನೂ ಮದುವೆಗೆ ಒಪ್ಪುತ್ತಿಲ್ಲ ಎಂದು ಕೋಪ. ಅದಕ್ಕೇ ನಿಮ್ಮನ್ನು ಒಪ್ಪಿಸುವ ಜವಾಬ್ದಾರಿಯನ್ನು ನನ್ನ ಹೆಗಲಿಗೇರಿಸಿದ್ದಾರೆ. ಅವರಿಗೆ ಮಾತು ಕೊಟ್ಟಿದ್ದೇನೆ ನಿಮ್ಮನ್ನು ಒಪ್ಪಿಸಿ ಮನೆ ಮಗಳಾಗಿ ಶೀಘ್ರದಲ್ಲೇ ಬರುತ್ತೇನೆಂದು. ಅತ್ತೆಗೆ ಅದಾಗಲೇ ಸೊಸೆ ಬರುವ ಸಂಭ್ರಮ. ಇನ್ನು ಕೇವಲ ನೀವು ಹೂಂಗುಟ್ಟಿದರೆ ಸಾಕು. ನಾನೂ ಇಲ್ಲಿ ಚಾತಕಪಕ್ಷಿಯಂತೆ ಕಾಯುತ್ತಾ ಇದ್ದೀನಿ ನಿಮ್ಮ ಜತೆ ಕಳೆಯುವ ಸುಮಧುರ ಕ್ಷಣಕ್ಕಾಗಿ, ಆ ಮಧುರ ಅನುಭೂತಿಗಾಗಿ. ಒಪ್ತೀರಾ ಪ್ಲೀಸ್.

ನಿಮ್ಮವಳು

Wednesday, September 30, 2009

ನನಗೊ ನೀನು ಕೃಷ್ಣನ ತೋರುವ ಕಣ್ಣು...!

ಚೆಂದುಳ್ಳಿ ಚೆಲುವೆ,

ನಿನ್ನ ಕೈಗೆ ತಲುಪಿಸಬೇಕು ಎನ್ನುವ ಆಸೆ ಹೊತ್ತು ಬರೆಯುತ್ತಿರುವ ೨೪ನೆಯ ಪತ್ರವಿದು. ಇದುವರೆಗೆ ಬರೆದ ೨೩ ಪತ್ರಗಳು ಆಗಲೇ ಕಸದ ಬುಟ್ಟಿಗೆ ಸೇರಿಯಾಗಿದೆ. ಇದೂ ಅಲ್ಲಿಗೆ ಸೇರದೆ ನಿನ್ನ ಕೈ ಸೇರುವ ಭರವಸೆಯೊಂದಿಗೆ ಈ ಪತ್ರ ಆರಂಭಿಸಿದ್ದೇನೆ.
ಮೊದಲ ಅಕ್ಷರ ಬರೆಯುವ ಹೊತ್ತಿಗೆ ನೀನು ಕಣ್ಣ ಮುಂದೆ ಬಂದಿದ್ದೆ..

ಭಲೆ ಭಲೆ ಚೆಂದದ ಚೆಂದುಳ್ಳಿ ಚೆಲುವೆ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ಎಂಥ ಚೆಂದನೆಯ ಸಾಲುಗಳು. ನನ್ನ ಪಾಲಿಗೆ ಈ ಸಾಲುಗಳು ನಿನ್ನ ರೂಪದಲ್ಲಿ ಒದಗಿ ಬಂದು ನಿಜವಾಗಿ ಬಿಟ್ಟಿದೆ.
ಕಾಲೇಜು ಆರಂಭವಾಗಿ ತಿಂಗಳು ನಾಲ್ಕು ಕಳೆದು ಬಿಟ್ಟಿವೆ. ಕ್ಲಾಸು ಶುರುವಾಗಿ ತಿಂಗಳೊಪ್ಪತ್ತಿನಲ್ಲಿಯೇ ಎಲ್ಲರ ಪ್ರತಿಭಾ ಪ್ರದರ್ಶನದ ಕಾಲ. ಅದ್ಯಾವುದೋ ಘಳಿಗೇಲಿ ನೀನು ವೇದಿಕೆ ಏರಿ ಬಿಟ್ಟಿದ್ದೆ. ನಿನ್ನ ಮಧುರ ಕಂಠದಿಂದ ಹೊಮ್ಮಿತ್ತು ಸುಶ್ರಾವ್ಯ ಸಾಲುಗಳು. ಅದಾಗಲೇ ಹೃದಯ ಫುಲ್ ಫಿದಾ. ಆಗಿನಿಂದಲೇ ಕಣ್ಣುಗಳು ನಿನ್ನ ಹುಡುಕಾಟದಲ್ಲಿ ತೊಡಗಿದ್ದವು. ಆದರೆ ನೀನು ಮತ್ತೆ ಕಾಲಿಗೆ ಗೆಜ್ಜೆ ಜೋಡಿಸಿ ಬಂದಿದ್ದೆ.

ಕೃಷ್ಣ ರಾಧೆಯರ ಪ್ರೇಮ ಸನ್ನಿವೇಶವನ್ನು ಬಲು ಸೊಗಸಾಗಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದೆ. ನನ್ನಲ್ಲಾಗಲೇ ನಿನ್ನ ಪಾಲಿನ ಕೃಷ್ಣನಾಗುವ ಕನಸು. ಕ್ಷಣದಲ್ಲೇ ಈ ಹುಡುಗಿ ನನ್ನವಳು ಎಂಬ ಭಾವ. ಆದರೆ ಈ ವಿಷಯವನ್ನು ನಿನ್ನ ಮುಂದೆ ನೇರವಾಗಿ ಹೇಳಲು ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೆ ಆ ದಿನ ಬರುವಾಗ ಈ ಪತ್ರ ನಿನ್ನ ಕೈ ಸೇರಿರುತ್ತೆ. ಸದ್ಯಕ್ಕಿಷ್ಟು ಸಾಕು ಕಣೇ.

ಚೆಂದುಳ್ಳಿ ಚೆಲುವೆಗೆ ಮನ ಸೋತವ

Tuesday, September 22, 2009

ಆಹಾ ದಸರಾ, ನೀನಿನ್ನೂ ಹತ್ತಿರ..!

ಮುದ್ದು ಗೊಂಬೆಯೇ,
ಈ ಬಾರಿ ನಿನ್ನೂರ ದಸರಾ ವಿಶೇಷ ಏನು? ಮೊನ್ನೆ ಸುಮ್ಮನೆ ಹಳೆಯದನ್ನೆಲ್ಲಾ ಯೋಚಿಸುತ್ತಾ ಕುಳಿತಿದ್ದೆ. ಚೆನ್ನಾಗಿ ನೆನಪಿಸಿ ನೋಡು. ಸರಿಯಾಗಿ ಆರೂವರೆ ವರ್ಷದ ಕೆಳಗೆ ಇಂತಹ ಒಂದು ದಸರಾ ಸಮಯದಲ್ಲೇ ಅರಳಿತ್ತು ನಿನ್ನ ಮೇಲೆ ಪ್ರೇಮಾನುರಾಗ.


ಅಂದು ನಿನ್ನ ಕಣ್ಣಲ್ಲಿ ಕಾತರ, ಆತಂಕ ಎರಡೂ ಮನೆ ಮಾಡಿತ್ತು. ಆದರೆ ಅವುಗಳೆಲ್ಲವನ್ನೂ ಹೃದಯದಲ್ಲಿ ಟಿಸಿಲೊಡೆದ ಭಾವಗಳು ಮೆಟ್ಟಿ ನಿಂತಿದ್ದವು. ಅಂದಿನ ಮುಸ್ಸಂಜೆಯಲ್ಲಿ ನವರಾತ್ರಿಯ ವಿಶೇಷ ಪೂಜೆಗೆಂದು ನಾನು ದೇವಿಯ ಮಂದಿರದಲ್ಲಿದ್ದೆ. ಅದುವರೆಗೆ ನಾವು ಹಾಯ್, ಬೈ ಹೇಳಿದ್ದೆವೇ ಹೊರತು ಅದು ಬಿಟ್ಟು ಎರಡಕ್ಷರ ಮಾತನಾಡಿದವರಲ್ಲ.


ಆದರೆ, ಅಂದು ದೇವಸ್ಥಾನದ ಪೂಜಾರಿ ಆರತಿ ತಟ್ಟೆ ಹಿಡಿದು ನಿನ್ನ ಮುಂದೆ ನಿಂತ ನೋಡು. ನಿನ್ನ ಕಣ್ಣ ತುಂಬಾ ಆರತಿಯ ಬೆಳಕು ಕಾಂತಿಯುತವಾಗಿ ಪ್ರಜ್ವಲಿಸುತ್ತಿತ್ತು. ಆರತಿ ತೆಗೆದು ಕಣ್ಣಿಗೊತ್ತಿಕೊಳ್ಳುವಾಗಲೂ ನಾನು ನಿನ್ನ ಕಣ್ಣುಗಳನ್ನೇ ನೋಡುತ್ತಿದ್ದೆ. ನಿನ್ನಲ್ಲಿ ಅಚಲ ಶ್ರದ್ಧೆಯಿತ್ತು, ಭಕ್ತಿಯಿತ್ತು. ಆದರೆ ನಾನು ವಾಸ್ತವಕ್ಕೆ ಬರುವ ಮೊದಲೇ ನೀನು ನನ್ನ ಕಣ್ಣುಗಳನ್ನು ದಿಟ್ಟಿಸಲಾರಂಭಿಸಿದ್ದೆ. ಮುಖದಲ್ಲಿ ವಯೋಸಹಜವಾದ ಲಜ್ಜೆ ಮನೆ ಮಾಡಿತ್ತು.


ಕಣ್ಣುಗಳಾಗಲೇ ನನ್ನ ಜತೆ ಮಾತಿಗಿಳಿದಿದ್ದವು. ಮನದಲ್ಲಿ ದಸರಾ ದಿನ ಸಿಕ್ಕಿದ ಈ ಗೊಂಬೆ ನನ್ನದು ಅಂದುಕೊಂಡಿದ್ದೆ. ಬಳಿಕ ಕಣ್ಸನ್ನೆಯಲ್ಲೇ ಮಾತು ಆರಂಭಿಸಿದ್ದೆ. ಮರುಕ್ಷಣದಲ್ಲಿ ನಾನು ನೀನು ದೇವಸ್ಥಾನದ ಮುಖ್ಯದ್ವಾರದಲ್ಲಿದ್ದೆವು. ಆ ಮೇಲಿನ ನಮ್ಮ ಪ್ರೀತಿ ಇತರರ ಪಾಲಿಗೆ ಇತಿಹಾಸ.


ಹಾಂ, ಮರೆತೇ ಬಿಟ್ಟಿದ್ದೆ. ಈ ಬಾರಿ ಕೊಟ್ಟ ಮಾತಿನಂತೆಯೇ ಊರಿಗೆ ಬಂದಿದ್ದೀನಿ. ನಾಡಿದ್ದು ದಸರಾ ಮೆರವಣಿಗೆಯಲ್ಲಿ ನಾವಿಬ್ಬರೂ ಸಂಭ್ರಮಿಸಬೇಕು. ಅತ್ತ ಅಂಬಾರಿ ಹೊತ್ತ ಆನೆ ನಡೆಯಬೇಕಾದರೆ ಇತ್ತ ನೀನು ನನ್ನ ತೆಕ್ಕೆ ಸೇರಿರಬೇಕು. ಆ ಗಳಿಗೆ ಎಷ್ಟು ಸುಂದರ ಅಲ್ವೇನೆ?


ಮುದ್ದು ಗೊಂಬೆಯ ಪ್ರೀತಿಸುವವ

Thursday, September 17, 2009

ನಿನ್ನ ತೋಳಲ್ಲಿ ನಾನು ಪ್ರೀತಿಯ ಗುಬ್ಬಿ

ಮೋಹಕ ಕಂಗಳ ಚೆಲುವೆ,

ಮಳೆಗಾಲ ಮುಗಿದರೂ ಇಲ್ಲಿ ವರ್ಷಧಾರೆ ನಿಂತಿಲ್ಲ. ಮೊನ್ನೆ ಧೋ ಎಂದು ಸುರಿದ ಮಳೆಗೆ ನೆನೆದು ಬಂದು ಮನೆಯೊಳಗೆ ಕುಳಿತಿದ್ದೆ ನೋಡು, ಧುತ್ತೆಂದು ಕಾಡಲಾರಂಭಿಸಿತ್ತು ನಿನ್ನ ನೆನಪು.

ಹುಡುಗೀ, ಈ ಮಳೆಗೂ ನನ್ನ ನಿನ್ನ ಪ್ರೀತಿಗೂ ಅದೇನೋ ಅವಿನಾಭಾವ ನಂಟು. ನಮ್ಮಿಬ್ಬರ ಪ್ರೀತಿ ಚಿಗುರಿದ ದಿನ ನೆನಪಿಸಿ ನೋಡು. ಅಂದು ನಾವಿದ್ದಿದ್ದು ನಿನ್ನೂರ ಆ ಗುಡ್ಡದ ಮೇಲೆ. ನನ್ನ ಪ್ರೀತಿಯ ಕರೆಗೆ ನೀನು ಓಗೊಟ್ಟು ಅಂದು ಮಧುರ ಬಾಂಧವ್ಯವೊಂದಕ್ಕೆ ಅಂಕಿತ ಹಾಕಿದ್ದೆ. ಹಾಗೆ ನೀನು ಐ ಲವ್ ಯೂ ಟೂ ಎಂದು ಹೇಳಬೇಕಾದರೆ ಆಗಸದಿಂದ ವರುಣರಾಯ ಮಳೆ ಹನಿಯ ಸಿಂಚನ ಮಾಡಿದ್ದ. ನನ್ನ ಪ್ರೀತಿಯ ಗುಬ್ಬಚ್ಚಿ ಮರಿ ಒದ್ದೆಯಾಗದಿರಲೆಂದು ತೋಳೊಳಗೆ ನಿನ್ನ ಸೇರಿಸಿದ್ದೆ. ಮೊದಲಿನಿಂದಲೂ ಅಷ್ಟೇ. ಮಳೆ ಬಂತೆಂದರೆ ಸಾಕು ನನಗೆ ಬಾಲ್ಯದಿಂದಲೂ ಭಾವನೆಗಳು ಗರಿಗೆದರುವ ಕಾಲ. ಅದು ನಿನಗೂ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ಅಂತಹ ಎಷ್ಟು ಮಳೆ ದಿನಗಳು ನಮ್ಮಿಬ್ಬರನ್ನು ಭಾವುಕರನ್ನಾಗಿಸಿದವು ಅಲ್ಲವೇನೆ?

ಕಳೆದ ವಾರ ಕೃಷ್ಣಾಷ್ಟಮಿಗೆಂದು ಪೊಡವಿಗೊಡೆಯನ ನಾಡಿಗೆ ಹೋಗಿದ್ದೆ. ನಾವು ಪ್ರತಿ ಭೇಟಿಯಲ್ಲೂ ಕೂರುವ ಜಾಗದಲ್ಲಿ ಹೋಗಿ ಕುಳಿತೆ. ಆಗ ಕಾಡಿತ್ತು ಏಕಾಂಗಿತನ. ಮುಂದಿನ ವಾರ ದಸರಾ. ನೀನು ನನ್ನ ದಸರಾ ಗೊಂಬೆ. ಆ ಗೊಂಬೆಯ ಜತೆ ನಾನು ದಸರಾ ಮೆರವಣಿಗೆಯಲ್ಲಿ ಹೆಜ್ಜೆ ಜೋಡಿಸಬೇಕು. ಕೈ ಕೈ ಬೆಸೆದು ಕೊಂಡು ಒಂದಿಡೀ ದಿನ ನಿನ್ನ ಜತೆ ಸಾಗುತ್ತಾ ನಿನ್ನ ಆ ಮೋಹಕ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅದರಲ್ಲಿ ನನ್ನ ಪ್ರತಿಬಿಂಬ ನೋಡಬೇಕು. ಹಾಗೆ ನೋಡುತ್ತಾ ನೋಡುತ್ತಾ ನಾನು ನಿನ್ನಲ್ಲಿ ಕಳೆದು ಹೋಗಬೇಕು. ಸಿದ್ಧಳಾಗಿರು.

ಮೋಹಕ ಕಂಗಳಿಗೆ ಸೋತು ಹೋದವ

Tuesday, August 25, 2009

ಬಿಡು ಬಿಡು ಕೋಪವಾ...

ಮೂಗ ತುದಿಯಲ್ಲಿ ಕೋಪ ತೊಟ್ಟ ಸುಂದರಾಂಗೀ,
ಮೊನ್ನೆ ಊರಿಗೆ ಬರುವ ದಾರಿ ಮಧ್ಯೆ ರಸ್ತೆ ತಿರುವಿನಲ್ಲಿ ಎಂದಿನಂತೆ ಕಾತರದಿಂದ ಕಾಯುತ್ತಿದ್ದ ನಿನ್ನ ಎರಡು ಕಣ್ಣುಗಳು ಕಾಣಿಸಲೇ ಇಲ್ಲ. ಊರಿಗೆ ಬರುವುದು ಕೆಲ ಗಂಟೆ ಕಾಲ ತಡವಾಯಿತೆಂದರೆ ಇಂತಹ ಸಿಟ್ಟೇ. ಓ ಪ್ರೇಮಿಯೇ ಇದು ನ್ಯಾಯವೇ?

ನಾನು ಜತೆಯಲಿರಬೇಕು ಎಂದು ಹೊರಟ ಕ್ಷಣದಿಂದಲೇ ಯಾಕೆ ನಿನಗಷ್ಟೊಂದು ಕೋಪ ಬರುತ್ತೆ. ಸಮಯಕ್ಕೆ ಸರಿಯಾಗಿ ಬಂದರೆ ಪ್ರೀತಿಯ ಮಳೆಯನ್ನೇ ಸುರಿಸುತ್ತೀಯಾ. ಆದರೂ ಹುಡುಗೀ ಒಂದಂತೂ ಸತ್ಯ. ನಿನ್ನ ಕೋಪ ಆ ಮೂಗುತಿಯ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುವುದು ಮಾತ್ರ ಸುಳ್ಳಲ್ಲ. ಮತ್ತೂ ಕೋಪ ಬಂತಾ?

ನಿನ್ನ ಮನಸು ನನ್ನ ಹೃದಯದಲ್ಲಿ ಬಂಧಿಯಾಗಿ ಸರಿ ಸುಮಾರು ೪ ವರ್ಷ. ರಾತ್ರಿ ಕೆಲಸ ಮುಗಿಸಿ ಬಂದು ಸುಮ್ಮನೇ ಕುಳಿತಾಗ ನಿನ್ನ ಜತೆ ಕಳೆದ ನೆನಪುಗಳ ಸರಣಿ ಬಿಚ್ಚಿಕೊಳ್ಳುತ್ತದೆ.

ಅಂದು ನೀನು ಆಕಾಶ ನೀಲಿ ಬಣ್ಣದ ಸೀರೆ ಉಟ್ಟುಕೊಂಡು ಬಂದು ಆಗ ತಾನೇ ಕಾಲೇಜು ಮೆಟ್ಟಿಲೇರಿ ಬರುತ್ತಿದ್ದೆ. ಎಡದಿಂದ ನಾನು, ಬಲಭಾಗದಿಂದ ನೀನು. ಮೊದಲ ಮಹಡಿಗೆ ಇಳಿಯಬೇಕೆನ್ನುವ ಭರದ ನಡುವೆ ಕಣ್ಣು ಕಣ್ಣುಗಳು ಕಲೆತವು. ಹೃದಯಗಳಲಿ ಭಾವ ಸ್ಪರ್ಷ. ನಿನ್ನ ವದನದಲ್ಲಿ ನಾಚಿಕೆ. ತುಟಿಯಂಚಲ್ಲಿ ಕಿರುನಗೆ. ನೀನು ಸುಮ್ಮನಿದ್ದರೂ ಕೈಯಲ್ಲಿದ್ದ ಬಳೆ, ಕಾಲಲ್ಲಿದ್ದ ಗೆಜ್ಜೆ ಹಿನ್ನೆಲೆ ನಾದವನ್ನು ಜೋಡಿಸಿದ್ದವು. ನನ್ನವಳಾಗುವೆಯಾ ಎಂದು ಕೇಳಿದರೆ ನೀನೇ ನನ್ನವನು ಎಂದು ಓಡಿ ಹೋಗಿದ್ದೆ.

ಆಗಲೂ ನಿನ್ನಲ್ಲಿ ಪ್ರೀತಿ ತುಂಬಿದ ಕೋಪವಿತ್ತು. ಅಂದಿಗೂ, ಇಂದಿಗೂ ಎಂದೂ ಬದಲಾಗಿಲ್ಲ. ಯಾವುದೋ ಕಾರಣಕ್ಕೆ ಸ್ವಲ್ಪ ವಿಳಂಬವಾಗಿದ್ದಕ್ಕೆ ಈ ರೀತಿ ಕೋಪಿಸಿ ನಿನ್ನ ಸೌಂದರ್ಯ ವೃದ್ಧಿಸಬೇಕೇ.

ಅದ್ಯಾವುದೂ ಇಲ್ಲದೆಯೇ ನೀನು ನನ್ನವಳಾಗಬೇಕು. ನಾಳೆ ಮತ್ತೆ ಬರ್ತಾ ಇದ್ದೀನಿ ನಿನ್ನೂರಿಗೆ ಸಿರ್ಫ್ ನಿನ್ನ ನೋಡಲು. ಎಂದಿನಂತೆ ಕಾತರದ ಕಣ್ಣು, ಸ್ವಲ್ಪ ಕೋಪ, ಮತ್ತೊಂದಿಷ್ಟು ನಗುವಿನೊಂದಿಗೆ ನೀನು ಹತ್ತಿರಬರಬೇಕು. ಮತ್ತೇನೂ ಹೇಳುವುದಿಲ್ಲ.
ನಿನ್ನವನು

Tuesday, August 18, 2009

ಕತ್ತಂಚಿನ ಮಚ್ಚೆಗೆ ಮುತ್ತಿಟ್ಟವನು ನೀನಾ?

ನಿನ್ನೆ ರಾತ್ರಿ ಕನಸಲ್ಲಿ ಬಂದು ಕಾಡಿದವನು ನೀನೇನಾ? ಕತ್ತಿನ ಅಂಚಿನಲ್ಲಿರುವ ಮಚ್ಚೆಗೆ ಮುತ್ತು ನೀಡಿದವನು ನೀನೇನಾ? ಒಂದೂ ತಿಳಿಯುತ್ತಿಲ್ಲ ದೊರೆಯೇ. ಕನಸಾದರೂ ಮನಕೆ ಮುದ ನೀಡಿ ಮಧುರ ಭಾವಗಳನ್ನೆಬ್ಬಿಸಿದ್ದು ಮಾತ್ರ ಸುಳ್ಳಲ್ಲ.

ಎಂದಿನಂತೆ ಮೊನ್ನೆ ರಾತ್ರಿ ನಿನಗೆ ಗುಡ್ ನೈಟ್ ಹೇಳಿ ಮಲಗಿದ್ದೆ ನೋಡು. ಅದ್ಯಾವುದೋ ಅಪೂರ್ವ ಗಳಿಗೇಲಿ ನೀನು ನನ್ನ ಕನಸಿನರಮನೆಗೆ ಬಂದಿಳಿದಿದ್ದೆ. ಅದೆಲ್ಲಿಂದಲೋ ಹುಚ್ಚು ಧೈರ್ಯ ಬಂದಿತ್ತು. ನಾನು ನಿನ್ನ ತೆಕ್ಕೆ ಸೇರಿದ್ದ ಸಂಭ್ರಮದಲ್ಲಿ ನಿನ್ನ ಕೈಬೆರಳುಗಳಲ್ಲಿ ತುಂಟತನ ಲಾಸ್ಯವಾಡಲಾರಂಭಿಸಿತ್ತು.

ಕ್ಷಣ ಮಾತ್ರದಲ್ಲಿ ನಾನು ಬೆದರು ಗೊಂಬೆ. ಕಾಲ್ಬೆರಳು ಅದಾಗಲೇ ನೆಲದ ಜತೆ ಚಕ್ಕಂದವಾಡಲಾರಂಭಿಸಿತ್ತು. ಹಾಗೆ ನಿದ್ದೆಗಣ್ಣಲ್ಲೇ ನಾನು ನಿನ್ನ ಜತೆ ಮಾತಿಗೆ ತೊಡಗಿದ್ದೆ ನೋಡು. ಏನೋ ಕೇಳಬೇಕೆನ್ನುವಷ್ಟರಲ್ಲಿ ಅಮ್ಮ ಬಂದು ಎಚ್ಚರಿಸಿದಳು ನೋಡು. ಆಗಲೇ ಗೊತ್ತಾಗಿದ್ದು ಕಂಡಿದ್ದೆಲ್ಲವೂ ಕನಸು.

ಅವಳಾಗಲೇ ಏನೇ ಇನ್ನೂ ಶ್ರಾವಣ ಮುಗಿದಿಲ್ಲ. ಆಗಲೇ ಕನಸಿನರಮನೆ ಕಟ್ತಾ ಇದ್ದೀಯಾ. ನಿನ್ನ ರಾಜಕುಮಾರ ಬಂದು ನಿನ್ನ ಕೈ ಹಿಡಿಯಲು ಇನ್ನೂ ಸುಮಾರು ದಿನಗಳಿವೆ ಅಂದ್ಬಿಟ್ಳು ನೋಡು. ಯಾಕೋ ದುಃಖ ತಡೆಯಲಾಗಲಿಲ್ಲ ಕಣೋ. ಅಮ್ಮನಿಗೆ ಗೊತ್ತಾಗದಂತೆ ಕಣ್ಣಂಚಲ್ಲಿ ಬಂದು ಸೇರಿದ್ದ ಕಣ್ಣೀರ ಬಿಂದುವನ್ನು ಕೈಗೊತ್ತಿಕೊಂಡೆ. ಅದ್ಯಾಕೋ ಮತ್ತೆ ಮನದಲ್ಲಿ ನೆನಪುಗಳ ಸರಮಾಲೆ.

ನೀನು ಕದ್ದಾಲಿಸಿದ ಕೈ ಬಳೆಗಳ ಸದ್ದು, ನೀನೇ ಕೈಯಾರೆ ಕಾಲಿಗೆ ತೊಡಿಸಿದ ಗೆಜ್ಜೆ. ಕಳೆದ ವಾರವಷ್ಟೇ ಮೂಗೇರಿಸಿಕೊಂಡ ಮೂಗುತಿ. ಬರ್ತ್‌ಡೇ ಗಿಫ್ಟ್ ಡೈಮಂಡ್ ರಿಂಗ್. ಎಲ್ಲವನ್ನೂ ನೋಡುತ್ತಾ ನಾನು ಕಳೆದುಹೋಗುತ್ತೇನೆ. ದೂರದಲ್ಲೆಲ್ಲೋ ಆಗಸದಲ್ಲಿ ಹಕ್ಕಿಗಳ ಹಿಂಡು ಹಾರಾಡುತಿದ್ದರೆ ಮನದಲ್ಲಿ ನನಗೂ ಗರಿ ಬಿಚ್ಚುವಾಸೆ. ಆದರೆ ಜತೆಯಲಿ ನೀನಿರಬೇಕು ಎನ್ನುವುದು ಮಾತ್ರ ಮರೆಯದಿರು.

ನಾಡಿದ್ದು ಚೌತಿ ಸಂಭ್ರಮ. ಊರಿಗೆ ಏನಾದರೂ ಬರೋದಿದೆಯಾ ದೊರೆಯೇ? ನೀ ಬರುವೆ ಎಂಬ ನಿರೀಕ್ಷೆಯಲ್ಲಿ...
ನಿನ್ನವಳು