Wednesday, June 25, 2008

ದೇವಸ್ಥಾನಕ್ಕೆಂದು ಸುಳ್ಳು ಹೇಳಿ ಬಂದೆ.. ನೀನು...‘ನೀನೇ ನನ್ನ ದೇವತೆ ’ ಅಂದೆ..!


ಮೈ ತುಜ್‌ಸೇ ಮಿಲ್‌ನೇ ಆಯೀ,
ಮಂದಿರ್ ಜಾನೇ ಕೇ ಬಹಾನೇ
ಬಾಬುಲ್ ಸೇ ಜೂಠ್ ಬೋಲೀ,
ಸಖಿಯೋಂ ಸೇ ಜೂಠ್ ಬೋಲೀ
ಮೈ ಬನ್‌ಗಯೀ ಬಿಲ್‌ಕುಲ್ ಬೋಲೀ

ಹೇಗಾದ್ರೂ ಮಾಡಿ ನಿನ್ನ ಭೇಟಿ ಮಾಡಬೇಕು ಎಂದು ಹೊರಟವಳು ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ, ಆಪ್ತ ಸಖಿಯರಲ್ಲಿ ಸುಳ್ಳು ಹೇಳಿ ಬಂದೆ. ಯಾಕೋ ಗೊತ್ತಿಲ್ಲ ನಿನ್ನನ್ನು ಕಾಣಬೇಕೆಂದರೆ ಮನದಲ್ಲಿ ತಲ್ಲಣ, ಕಂಪನ. ಹೃದಯದಲ್ಲಿ ಕಲರವ, ಮತ್ತೆ ಕೆಲವೊಮ್ಮೆ ರೋಮಾಂಚನ. ಒಟ್ಟಿನಲ್ಲಿ ನಿನ್ನನ್ನು ನೋಡುವಾಗ ನಾನು ನಾನಾಗಿರುವುದಿಲ್ಲ ಎನ್ನುವುದು ಮಾತ್ರ ನಿಜ. ನಿನ್ನ ಕಂಡು ತೋಳು ಸೇರುವ ತನಕ ಮನದಲ್ಲಿ ಏನೇನೋ ಆಸೆಗಳ ರಂಗಿನಾಟ.

ಡಿಗ್ರಿಯಲ್ಲಿ ಜತೆಗಿದ್ದ ಆಪ್ತ ಸಖಿಯರೆಲ್ಲಾ ಇಂದು ಬೇರೆ ಬೇರೆ ಕಾಲೇಜುಗಳಿಗೆ ಸೇರಿದ್ದಾರೆ. ಈಗ ಸಖಿಯರಿಲ್ಲದ ನಾನು ಏಕಾಂಗಿ. ಹಿಂದೆಲ್ಲಾ ಆದರೆ ಅವರೆಲ್ಲರೂ ನಿನ್ನ ಹೆಸರು ಹೇಳಿ ತಮಾಷೆ ಮಾಡಿದ್ದೇನು. ಆದರೆ ಈಗ ಏಕಾಂಗಿತನವನ್ನು ಮರೆಮಾಚಲು ನೆನಪಿನಂಗಳದ ಮೊರೆ ಹೋಗುತ್ತೇನೆ.

ಇಂದಿಗೂ ನೆನಪಿದೆ. ಅಂದು ನಾನು ದೇವರ ದರ್ಶನಕ್ಕಾಗಿ ನಿನ್ನೂರಿನ ದೇವಸ್ಥಾನಕ್ಕೆ ಬಂದಿದ್ದೆ. ಆದರೆ ದೇವಸ್ಥಾನದಲ್ಲಿ ದೇವರಿಗೆ ಕೈಮುಗಿದು ಬೇಡುತ್ತಿರುವಾಗ ನನ್ನ ಮುಂಭಾಗದಲ್ಲಿ ನೀನು ನನ್ನ ಮುಖಾರವಿಂದವನ್ನೇ ನೋಡುತ್ತಿದ್ದೆ. ಆಗ ಪ್ರಾರಂಭವಾಗಿತ್ತು ಪ್ರೇಮಪೂಜೆ. ಅಂದು ನಿನ್ನ ತುಂಟತನದಿಂದಾಗಿ ನಿನ್ನ ಮೇಲೆ ಅಸಾಧ್ಯ ಸಿಟ್ಟು ಬಂದಿತ್ತು.

ಆದರೆ ಅಂದು ಅಮ್ಮನಲ್ಲಿ ನಿಜ ಹೇಳಿ ದೇವಸ್ಥಾನಕ್ಕೆ ಬಂದಿದ್ದೆ. ಆದರೆ ಇಂದು ಅದೇ ನೆಪವೊಡ್ಡಿ ನಿನ್ನ ಭೇಟಿಗಾಗಿ ಆಗಮಿಸುತ್ತಿದ್ದೇನೆ.
ಅಷ್ಟಕ್ಕೂ ನಿನ್ನಲ್ಲಿ ನನಗೆ ಇಷ್ಟವಾಗಿದ್ದೇನು ಎಂದು ಕೇಳಿದರೆ ಅದಕ್ಕೆ ಉತ್ತರ ನೀಡಲು ಅಸಾಧ್ಯ. ನೀನು ಇಷ್ಟವಾಗದೇ ಇರಲು ಅಲ್ಲಿ ನನಗೆ ಕಾರಣಗಳೇ ಇರಲಿಲ್ಲ. ಎಲ್ಲೋ ಕಳೆದು ಹೋಗಲಿದ್ದವಳನ್ನು ಎತ್ತಿ ಇಂದು ಈ ಸ್ಥಿತಿಗೆ ತಲುಪಿಸಿದ್ದೀಯ. ಮುಂದಿನ ವಾರ ದೇವಸ್ಥಾನಕ್ಕೆ ಬರ್ತೀನಿ. ನೀನು ಬರ್ತೀಯಾ ತಾನೇ?


ನಿನ್ನವಳು