Tuesday, October 21, 2008

ಮನದ ತುಂಬ ನಿನ್ನ ಪ್ರೀತಿ ಬೆಳಕು ಅದು ಸದಾ ಉರಿಯಲು ಜತೆಗೆ ನೀನಿರಬೇಕು...

ಮುದ್ದು ಮರಿ
ಹಬ್ಬಗಳ ಹಿಂದೆ ಹಬ್ಬಗಳ ಸಾಲು.
ಮನೆಯಲ್ಲಿ ಎಲ್ಲರೂ ದೀಪಾವಳಿಯ ಸಿದ್ಧತೆಯಲ್ಲಿದ್ದರೆ ಮನದಲ್ಲಿ ಬಾಳ ಬೆಳಕಿನ ಚಿತ್ತಾರ. ಮನೆಯಲ್ಲಿ ಎಲ್ಲರೂ ಹಣತೆಯ ಬೆಳಗುವ ಸಂಭ್ರಮದಲ್ಲಿದ್ದರೆ ನನ್ನಲ್ಲಿ ನಿನ್ನ ಮನ ಬೆಳಗುವ ಸಂಭ್ರಮ.
ಅಷ್ಟಕ್ಕೂ ಈ ಭಾಗ್ಯ ಯಾರಿಗುಂಟು ಹೇಳು. ದೀಪಾವಳಿಗೆ ಮುನ್ನಾ ದಿನದ ಭಾನುವಾರ ನಮ್ಮ ಮದುವೆಗೆ ಮುನ್ನುಡಿ. ಆ ದಿನ ನೀನು ರೇಷ್ಮೆ ಸೀರೆಯನುಟ್ಟು ಕೊರಳಲಿ ಒಂದೆಳೆ ಸರ ಧರಿಸಿ ಉಂಗುರ ಧಾರಣೆಗೆ ಬೆರಳೊಡ್ಡುವಾಗ ನಿನ್ನ ಕೆನ್ನೆಯಲ್ಲಿ ಸದಾಕಾಲ ಕಾಡುವ ಆ ಮೋಹಕ ಗುಳಿ ಮೂಡಬೇಕು. ಅಲ್ಲಿಗೆ ಇಷ್ಟು ವರ್ಷಗಳ ಕಾಲ ಕದ್ದು ಮುಚ್ಚಿ ಮಾಡಿದ ಪ್ರೀತಿಗೆ, ಕಟ್ಟಿಕೊಂಡಿದ್ದ ಸಾವಿರ ಸಾವಿರ ಕನಸುಗಳಿಗೆ ಸಾರ್ಥಕತೆಯ ಧನ್ಯತೆಯ ಕ್ಷಣ. ಪ್ರೀತಿ ಕೊನೆ ತನಕ ಉಳಿಯೋದಿಲ್ಲ ಎಂಬ ಆತಂಕ ಇಟ್ಟುಕೊಂಡೇ ಪ್ರೀತಿಸಿ ಒಂದಾಗುತ್ತಿರುವವರು ನಾವು. ಅಷ್ಟಕ್ಕೂ ನಾವು ಮಾಡಿಕೊಂಡ ಜಗಳವೆಷ್ಟೋ, ಹುಸಿ ಮುನಿಸುಗಳೆಷ್ಟೋ ಅಲ್ವಾ?
ಕೆಲವರು ನಿನ್ನನ್ನು ಎಷ್ಟು ಪ್ರೀತಿಸ್ತೀಯಾ ಎಂದು ಹಂಗಿಸಿದರು. ಅವರೆಲ್ಲರಿಗೂ ಕೊಡುವ ಉತ್ತರವೊಂದೇ.
ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೆ
ಉಳಿಯಲಾರೆನೂ

ಇನ್ನು ವಿನಾಕಾರಣ ಜಗಳ ತೆಗೆಯುವ ಮಾತಿಲ್ಲ. ಇನ್ನೇನಿದ್ದರೂ ಸಂಭ್ರಮ. ಮದುವೆ ಬಗ್ಗೆ ಚಿಂತೆ ಬಿಡು. ಅದೇ ನಿದ್ದರೂ ಹಿರಿಯರ ನಿರ್ಧಾರ. ಇಷ್ಟು ದಿನ ಕಾದವರಿಗೆ ಇನ್ನೂ ಕೆಲವು ದಿನಗಳ ಕಾಲ ವಿರಹ ತಾಳುವ ಶಕ್ತಿ ಬೇಡವೇ! ದೀಪಾವಳಿ ದಿನ ರಾತ್ರಿ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಪೂಜೆ ಸಲ್ಲಿಸಿ ಆ ದೀಪದಿಂದ ಹಣತೆಗೆ ಬೆಳಗಿ ಮನೆಯ ಮುಂದೆ ಸಾಲಾಗಿ ಜೋಡಿಸಿಟ್ಟಿರುವ ಹಣತೆಗಳಿಗೆ ದೀಪ ಹಚ್ಚುವಾಗ ನಿನ್ನ ಬೆರಳಲ್ಲಿ ನಾ ಹಾಕಿದ ವಜ್ರದ ಉಂಗುರ ಮಿಂಚುತ್ತಾ ಇರುತ್ತೆ. ಅಷ್ಟರ ಮಟ್ಟಿಗೆ ನಾನು ಧನ್ಯ.

ದೀಪದ ಬೆಳಕಲ್ಲಿ ನಿನ್ನ ಕಂಡವ