Wednesday, July 22, 2009

ಅಮ್ಮನಿಗೆ ಅನುಮಾನ ಶುರುವಾಗಿದೆ...

ನೀವು ಬರೆದ ಪತ್ರ ಕೈ ಸೇರಿದೆ. ಓದಿದಾಗಿನಿಂದ ನಿಮ್ಮದೇ ಮಧುರ ಮಧುರ ಯೋಚನೆ. ನಿಮ್ಮ ಯಾವ ಪತ್ರವೂ ನನ್ನನ್ನು ಇಷ್ಟು ಆರ್ದ್ರಗೊಳಿಸಿರಲಿಲ್ಲ. ಆದರೆ ಈ ಪತ್ರ ಎಲ್ಲವನ್ನೂ ಮೀರಿ ಒಡಲಾಳದ ಭಾವಗಳನ್ನು ಹಸಿರಾಗಿಸಿದೆ.
ಮೊನ್ನೆ ನಿಮ್ಮ ಪತ್ರ ಬಂದು ಕೈ ಸೇರಿತಲ್ಲಾ. ಅಮ್ಮನಿಗೆ ಏನೋ ಅನುಮಾನ. ನಾನು ನಿಮಗೆ ಬಿಟ್ಟೂ ಬಿಡದೆ ಎಸ್‌ಎಂಎಸ್ ಮಾಡುವುದನ್ನು ನೋಡಿ ಅಕ್ಕನ ಮುದ್ದು ಮಗಳಿಗೆ ಏನೋ ಕುತೂಹಲ. ಯಾರಿಗೆ ಈ ಥರಾ ಮೆಸೇಜ್ ಮಾಡ್ತಾ ಇದ್ದೀಯಾ ಎಂಬಂತೆ ಕಣ್ಣಲ್ಲೇ ಕಣ್ಣಿಟ್ಟು ನೋಡುತ್ತಿರುತ್ತಾಳೆ. ರಾತ್ರಿ ನಿದ್ರಿಸುವಾಗ ಅವಳಿಗೆ ನಾನೇ ಬೇಕು. ಅವಳು ಅಮ್ಮನಿಗಿಂತಲೂ ಹೆಚ್ಚು ನನ್ನ ಜತೆ ಕಳೆದವಳು. ಅವಳು ಯಾರಿಗೆ ಫೋನ್ ಮಾಡುತ್ತೀ ಎಂದು ಕೇಳುತ್ತಾಳೆ.

ಅವಳದಿನ್ನೂ ಮಗುವಿನ ಮನಸು. ಅದಕ್ಕೆ ಪ್ರೀತಿ ಪ್ರೇಮ ಎಲ್ಲಿ ಗೊತ್ತಾಗುತ್ತೆ ಹೇಳು. ಅದಕ್ಕೇ ಅವಳಿಗೆ ಪ್ರೇಮಿಗಳ ಆರಾಧ್ಯ ದೈವ ಶ್ರೀಕೃಷ್ಣನ ಪ್ರೀತಿಯನ್ನು ಕತೆಯಾಗಿಸಿ ಹೇಳುತ್ತೇನೆ. ಅವಳು ಕಿವಿಯಾಗುತ್ತಾಳೆ. ಆ ಕತೆಯನ್ನು ಹೇಳುವಾಗ ಮನಸು ಹಗುರಾಗುತ್ತೆ. ಆದರೆ ಕೃಷ್ಣ ರಾಧೆಯರ ಪ್ರೀತಿ ಪರ್ಯಾವಸಾನ ಹೇಗೆ ಹೇಳಲಿ ನಾನು. ಕತೆ ಕೇಳುತ್ತಾ ಅವಳು ನಿದ್ದೆ ಹೋಗಿರುತ್ತಾಳೆ. ಆದರೆ ಮನಸ್ಸಲ್ಲಿ ಅದೇ ರಾಧಾಕೃಷ್ಣರ ವಿಫಲ ಪ್ರೇಮದ ಕತೆ ಕಣ್ಣಮುಂದೆ ಹಾದು ಹೋಗುತ್ತೆ. ನೀವು ಕೊಟ್ಟ ಪ್ರೀತಿಯನ್ನು ನೆನೆಯುತ್ತಾ ಆ ಜೋಡಿಯ ಅಗಲಿಕೆಯನ್ನು ಯೋಚಿಸಬೇಕಾದರೆ ದುಃಖ ಉಮ್ಮಳಿಸಿ ಬರುತ್ತದೆ. ಕಣ್ಣಂಚಲ್ಲಿ ನೀರು.
ಮರುದಿನ ರಾತ್ರಿಯಾಗುವ ವೇಳೆಗೆ ಮತ್ತೆ ನನ್ನ ಕೇಳುತ್ತಾಳೆ. ನಾನು ಅದೇ ಸುಂದರ ದಿನಗಳನ್ನು ಹೇಳುತ್ತಾ ಸಾಗುತ್ತೇನೆ. ಆದರೂ ಮನಸ್ಸಲ್ಲಿ ನೋವು ಕಾಡುತ್ತಾ ಇರುತ್ತೆ.

ಹಾಗೆ ಕಣ್ಣೀರು ತಲೆದಿಂಬನ್ನು ಒದ್ದೆ ಮಾಡಿದಾಗಲೂ ನಾನು ನೀವು ಕಟ್ಟುವ ಆ ಮಾಂಗಲ್ಯಸೂತ್ರದಲ್ಲಿ ಬಂಧಿಯಾಗುವ ಕನಸು ಕಾಣುತ್ತೇನೆ. ಹೇಳಿ ಕೇಳಿ ನನ್ನದು ಹುಚ್ಚು ಮನಸು. ಎಲ್ಲಾ ನನ್ನದೇ ಆಯಿತು. ನಿಮ್ಮ ವಿಶೇಷ ಏನಾದ್ರೂ ಇದ್ದರೆ ಹೇಳಿ.

ನಿಮ್ಮವಳು

Wednesday, July 15, 2009

ಮಳೆ ಹನಿ ಮೈ ಸೋಕಿದರೆ ಏನೋ ಪುಳಕ!

ಸ್ವೀಟ್ ಹಾರ್ಟ್,
ಮಳೆ ಬಂದರೆ ಮಾತ್ರ ನಿನಗೆ ನಾನು ನೆನಪಾಗ್ತೀನಿ ಅಲ್ವಾ? ಅದ್ಕೇ ನಿನ್ ಜತೆ ಠೂ. ಮಾತೂ ಬೇಡ, ನಿನ್ನ ಮುತ್ತೂ ಬೇಡ.
ಚಿತ್ತ ಚೋರಾ ಕೋಪ ಬಂತಾ? ಇಲ್ಲಿ ಮಳೆ ನಿಂತಿದೆ. ಆದರೆ ನೆನಪುಗಳ ಮೆರವಣಿಗೆ ನಿಂತಿಲ್ಲ. ಸೂರ್ಯ ನೆತ್ತಿಗೇರುತ್ತಿದ್ದಂತೆ ದಟ್ಟ ಮೋಡ ಆವರಿಸುತ್ತದೆ. ಬೀಸುವ ಜೋರಾದ ಗಾಳಿ ಮೋಡವನ್ನು ತನ್ನ ಸಂಗಾತಿಯನ್ನಾಗಿಸಿ ಕೊಂಡೊಯ್ಯುತ್ತವೆ.

ಆದರೆ ನಿನ್ನ ಸುಳಿವೇ ಇರುವುದಿಲ್ಲ. ಗಾಳಿ ಮೋಡದ ಬೆಸುಗೆಯನ್ನು ಕಂಡು ನಾನು ಇಲ್ಲಿ ಒಬ್ಬಂಟಿಯಾಗಿ ಕುಳಿತು ನಾವಿಬ್ಬರೂ ಒಂದುಗೂಡುವ ಕ್ಷಣವನ್ನು ಕನಸು ಕಾಣಲಾರಂಭಿಸುತ್ತೇನೆ.

ಹಾಗೆ ಮೋಡ ಗಾಳಿ ಜತೆ ಸೇರಿ ಹೋಗುವಾಗ ಸುರಿಯುವ ಮಳೆ ಹನಿಯ ಮೈ ಸೋಕಿದಾಕ್ಷಣ ಏನೋ ಪುಳಕ! ಆದರೆ, ಮಳೆ ಹನಿಯನ್ನಾದರೂ ನಂಬಬಹುದು, ನಿನ್ನನ್ನಲ್ಲ. ನೀನು ಬಂದೇ ಬರುತೀಯಾ ಎಂದು ನಾ ಕಾದು ಕುಳಿತ ದಿನವೆಲ್ಲಾ ನನಗೆ ಇದುವರೆಗೆ ಸಿಕ್ಕಿದ್ದು ಬರೀ ವಿರಹ ವೇದನೆ.

ಅದಕ್ಕೇ ಈ ಬಾರಿ ಒಂದು ಭಿನ್ನಹ. ಇಲ್ಲ ಎನ್ನಬೇಡ. ಮುಂದಿನ ಮಳೆ ಆವರಿಸಿಕೊಳ್ಳುವ ಮುನ್ನ ಒಂದು ಬಾರಿ ಬಂದು ಹೋಗು ಪ್ಲೀಸ್.

ನಾವಿಬ್ಬರೂ ಜತೆಯಲ್ಲಿ ಸಾಗುವುದನ್ನು ಕಂಡು ಎಲ್ಲರೂ ಅಸೂಯೆಪಟ್ಟುಕೊಳ್ಳಬೇಕು. ಹಾಗೆ ನಾವು ಹೋಗಿ ಸೇರುವ ಜಾಗೆಯಲ್ಲಿ ನೀನು ನನ್ನ ಕೆಣಕಬೇಕು, ಪ್ರೀತಿಸಬೇಕು, ಮುದ್ದಿಸಬೇಕು, ನನ್ನ ಕೆನ್ನೆ ರಂಗೇರಿಸಬೇಕು. ನೀನಿಷ್ಟೆಲ್ಲಾ ಮಾಡುತ್ತಿರಬೇಕಾದರೆ ಇನ್ಯಾವತ್ತೂ ಇಂತಹ ಕ್ಷಣಗಳು ಮರುಕಳಿಸಿ ಬರಲಾರವೇನೋ ಎಂಬಂತೆ ನಾನು ನಿನ್ನ ಎದೆಗೂಡಿನೊಳಗೆ ಹುದುಗಿಕೊಳ್ಳಬೇಕು.ಭೋರ್ಗರೆವ ಮಳೆಯಲ್ಲಿ ನಿನ್ನ ಜತೆ ಕಾಲ ಕಳೆಯುವ ಕನಸು ಎನ್ನದು, ದಯಪಾಲಿಸುವ ಸರದಿ ನಿನ್ನದು.

ನಿನ್ನ ಮುದ್ದಿನ ಮಳೆ ಹುಡುಗಿ