Tuesday, September 23, 2008

ನಿನ್ನ ಪ್ರೀತಿಯಲ್ಲಿ ನಾನು ನನ್ನನ್ನೇ ಪ್ರೀತಿಸಿದೆ ನಿರಾಶೆ ಒಗೆದು ಪ್ರೀತಿ ತುಂಬಿ ಬದುಕಿದೆ..

ಮುದ್ದು ಹುಡುಗಾ,
ನಿನ್ನ ಫೋನ್ ಕಾಲ್ ಅಂತೂ ನನ್ನ ಪಾಲಿನ ಕನಸಿನ ಮಾತು. ಆದರೆ ಈ ಹಿಂದೆ ವಾರಕ್ಕೆರಡು ಪತ್ರ ಆದರೂ ಬರೀತಾ ಇದ್ದೆ. ನಾನು ಅದಕ್ಕಾಗಿಯೇ ಹಟ ಹಿಡಿದು ಕಾಯ್ತಾ ಇದ್ದೆ.

ಆದ್ರೆ ಕಳೆದ ಒಂದು ತಿಂಗಳಿನಿಂದ ನೀನೂ ಕೈಕೊಟ್ಟೆ. ಪ್ರತಿನಿತ್ಯ ಮನೆಗೆ ಪೋಸ್ಟ್ ಬರುವಾಗ ಅದರಲ್ಲಿ ಒಂದು ಪತ್ರದ ಮೇಲೆ ನೀನು ಬರೆದ ನನ್ನ ಮುದ್ದಾದ ಹೆಸರು ಇರುತ್ತದೆ ಎಂದು ಕಾಯುತ್ತಿದ್ದವಳಿಗೆ ಪ್ರತಿನಿತ್ಯ ನಿರಾಸೆ.

ಕೆಲ ವರ್ಷಗಳ ಹಿಂದೆ ಎಲ್ಲೋ ಒಂದು ಕಡೆ ಕಳೆದು ಹೋಗುತ್ತಿದ್ದವಳನ್ನು ಮರುಭೂಮಿಯಲ್ಲಿ ಸಿಗುವ ಓಯಸಿಸ್ ರೀತಿ ಬಂದು ಆವರಿಸಿಬಿಟ್ಟವನು. ಆದರೆ, ನೀನು ಬಂದು ಹೋದ ಮೇಲೆ ಎಷ್ಟು ಬದಲಾವಣೆ. ಮೊದಲೆಲ್ಲಾ ನನ್ನ ಬಗೆಗೇ ನನಗೆ ಒಂದು ತಿರಸ್ಕಾರದ ಭಾವ ಇತ್ತು. ಯಾಕೋ ಬದುಕಿನಲ್ಲಿ ನಾನು ಅದೃಷ್ಟಹೀನಳು ಅಂದುಕೊಳ್ಳುತ್ತಾ ದಿನಗಳನ್ನು ಕಳೆಯುತ್ತಿದ್ದೆ.

ಹೀಗೆ ನಿತ್ಯ ಎಲ್ಲವನ್ನೂ ಕಳೆದು ಕೊಳ್ಳುತ್ತಿದ್ದವಳಿಗೆ ಅಚಾನಕ್ ಆಗಿ ನೀ ಸಿಕ್ಕಿದೆ. ಬಹುಶಃ ಅಂತಹ ಒಂದು ಸುಸಂದರ್ಭದಲ್ಲಿ ನನ್ನ ಕಷ್ಟಗಳನ್ನು ಹೇಳಿಕೊಳ್ಳಲು ನೀನು ಸಿಗದೇ ಹೋಗಿದ್ದರೆ ಇಂದು ಏನಾಗುತ್ತಿತ್ತೋ?

ಆದರೆ ನಿನ್ನ ಪ್ರೀತಿ ಲಭಿಸುತ್ತಿದ್ದಂತೆ ನಾನು ನನ್ನನ್ನೇ ಪ್ರೀತಿಸಿದೆ. ಆಮೇಲೆ ನನ್ನವರು ಅಂತ ನಾನು ಯಾರನ್ನು ಇಷ್ಟು ವರ್ಷ ದ್ವೇಷಿಸುತ್ತಿದ್ದೆನೋ ಎಲ್ಲರೂ ಬೇಕು.

ನಾನು ಎಂಬುದರ ಬದಲಾಗಿ ನಾವು ಎನ್ನುವುದೂ ಬೇಕು ಎಂದು ಮನಸು, ಹೃದಯ ಎರಡೂ ಹೇಳಲಾರಂಭಿಸಿತ್ತು. ಆದರೆ, ಹೃದಯದ ಪಿಸುಮಾತುಗಳನ್ನು ನಿನ್ನಲ್ಲಿ ಹೇಳಿಕೊಳ್ಳಲು ಏನೋ ಒಂದು ಮುಜುಗರ.

ಆದರೆ ಅವುಗಳನ್ನೆಲ್ಲಾ ಅರ್ಥೈಸಿದವನಂತೆ ನೀನು ಜತೆಗಾರನಾದೆ. ಮತ್ತೆ ಏನೆಲ್ಲಾ ನಡೆಯಿತು ಅದು ನಿನಗೆ ಗೊತ್ತೇ ಇದೆ. ಇಷ್ಟೆಲ್ಲಾ ಆದ ಮೇಲೂ ನಿನ್ನ ಹುಸಿ ಮುನಿಸೇಕೆ. ಸುಮ್ಮನೆ ಪತ್ರ ಬರಿ. ಮತ್ತೆ ಮುಂದಿನ ದೀಪಾವಳಿಗೆ ನಮ್ಮ ಮದುವೆ ನಿಶ್ಚಿತಾರ್ಥವಂತೂ ಇದ್ದೇ ಇದೆಯಾಲ್ಲಾ...!!!
ನಿನ್ನ ಮುದ್ದಿನ ಹುಡುಗಿ