Tuesday, August 25, 2009

ಬಿಡು ಬಿಡು ಕೋಪವಾ...

ಮೂಗ ತುದಿಯಲ್ಲಿ ಕೋಪ ತೊಟ್ಟ ಸುಂದರಾಂಗೀ,
ಮೊನ್ನೆ ಊರಿಗೆ ಬರುವ ದಾರಿ ಮಧ್ಯೆ ರಸ್ತೆ ತಿರುವಿನಲ್ಲಿ ಎಂದಿನಂತೆ ಕಾತರದಿಂದ ಕಾಯುತ್ತಿದ್ದ ನಿನ್ನ ಎರಡು ಕಣ್ಣುಗಳು ಕಾಣಿಸಲೇ ಇಲ್ಲ. ಊರಿಗೆ ಬರುವುದು ಕೆಲ ಗಂಟೆ ಕಾಲ ತಡವಾಯಿತೆಂದರೆ ಇಂತಹ ಸಿಟ್ಟೇ. ಓ ಪ್ರೇಮಿಯೇ ಇದು ನ್ಯಾಯವೇ?

ನಾನು ಜತೆಯಲಿರಬೇಕು ಎಂದು ಹೊರಟ ಕ್ಷಣದಿಂದಲೇ ಯಾಕೆ ನಿನಗಷ್ಟೊಂದು ಕೋಪ ಬರುತ್ತೆ. ಸಮಯಕ್ಕೆ ಸರಿಯಾಗಿ ಬಂದರೆ ಪ್ರೀತಿಯ ಮಳೆಯನ್ನೇ ಸುರಿಸುತ್ತೀಯಾ. ಆದರೂ ಹುಡುಗೀ ಒಂದಂತೂ ಸತ್ಯ. ನಿನ್ನ ಕೋಪ ಆ ಮೂಗುತಿಯ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುವುದು ಮಾತ್ರ ಸುಳ್ಳಲ್ಲ. ಮತ್ತೂ ಕೋಪ ಬಂತಾ?

ನಿನ್ನ ಮನಸು ನನ್ನ ಹೃದಯದಲ್ಲಿ ಬಂಧಿಯಾಗಿ ಸರಿ ಸುಮಾರು ೪ ವರ್ಷ. ರಾತ್ರಿ ಕೆಲಸ ಮುಗಿಸಿ ಬಂದು ಸುಮ್ಮನೇ ಕುಳಿತಾಗ ನಿನ್ನ ಜತೆ ಕಳೆದ ನೆನಪುಗಳ ಸರಣಿ ಬಿಚ್ಚಿಕೊಳ್ಳುತ್ತದೆ.

ಅಂದು ನೀನು ಆಕಾಶ ನೀಲಿ ಬಣ್ಣದ ಸೀರೆ ಉಟ್ಟುಕೊಂಡು ಬಂದು ಆಗ ತಾನೇ ಕಾಲೇಜು ಮೆಟ್ಟಿಲೇರಿ ಬರುತ್ತಿದ್ದೆ. ಎಡದಿಂದ ನಾನು, ಬಲಭಾಗದಿಂದ ನೀನು. ಮೊದಲ ಮಹಡಿಗೆ ಇಳಿಯಬೇಕೆನ್ನುವ ಭರದ ನಡುವೆ ಕಣ್ಣು ಕಣ್ಣುಗಳು ಕಲೆತವು. ಹೃದಯಗಳಲಿ ಭಾವ ಸ್ಪರ್ಷ. ನಿನ್ನ ವದನದಲ್ಲಿ ನಾಚಿಕೆ. ತುಟಿಯಂಚಲ್ಲಿ ಕಿರುನಗೆ. ನೀನು ಸುಮ್ಮನಿದ್ದರೂ ಕೈಯಲ್ಲಿದ್ದ ಬಳೆ, ಕಾಲಲ್ಲಿದ್ದ ಗೆಜ್ಜೆ ಹಿನ್ನೆಲೆ ನಾದವನ್ನು ಜೋಡಿಸಿದ್ದವು. ನನ್ನವಳಾಗುವೆಯಾ ಎಂದು ಕೇಳಿದರೆ ನೀನೇ ನನ್ನವನು ಎಂದು ಓಡಿ ಹೋಗಿದ್ದೆ.

ಆಗಲೂ ನಿನ್ನಲ್ಲಿ ಪ್ರೀತಿ ತುಂಬಿದ ಕೋಪವಿತ್ತು. ಅಂದಿಗೂ, ಇಂದಿಗೂ ಎಂದೂ ಬದಲಾಗಿಲ್ಲ. ಯಾವುದೋ ಕಾರಣಕ್ಕೆ ಸ್ವಲ್ಪ ವಿಳಂಬವಾಗಿದ್ದಕ್ಕೆ ಈ ರೀತಿ ಕೋಪಿಸಿ ನಿನ್ನ ಸೌಂದರ್ಯ ವೃದ್ಧಿಸಬೇಕೇ.

ಅದ್ಯಾವುದೂ ಇಲ್ಲದೆಯೇ ನೀನು ನನ್ನವಳಾಗಬೇಕು. ನಾಳೆ ಮತ್ತೆ ಬರ್ತಾ ಇದ್ದೀನಿ ನಿನ್ನೂರಿಗೆ ಸಿರ್ಫ್ ನಿನ್ನ ನೋಡಲು. ಎಂದಿನಂತೆ ಕಾತರದ ಕಣ್ಣು, ಸ್ವಲ್ಪ ಕೋಪ, ಮತ್ತೊಂದಿಷ್ಟು ನಗುವಿನೊಂದಿಗೆ ನೀನು ಹತ್ತಿರಬರಬೇಕು. ಮತ್ತೇನೂ ಹೇಳುವುದಿಲ್ಲ.
ನಿನ್ನವನು

Tuesday, August 18, 2009

ಕತ್ತಂಚಿನ ಮಚ್ಚೆಗೆ ಮುತ್ತಿಟ್ಟವನು ನೀನಾ?

ನಿನ್ನೆ ರಾತ್ರಿ ಕನಸಲ್ಲಿ ಬಂದು ಕಾಡಿದವನು ನೀನೇನಾ? ಕತ್ತಿನ ಅಂಚಿನಲ್ಲಿರುವ ಮಚ್ಚೆಗೆ ಮುತ್ತು ನೀಡಿದವನು ನೀನೇನಾ? ಒಂದೂ ತಿಳಿಯುತ್ತಿಲ್ಲ ದೊರೆಯೇ. ಕನಸಾದರೂ ಮನಕೆ ಮುದ ನೀಡಿ ಮಧುರ ಭಾವಗಳನ್ನೆಬ್ಬಿಸಿದ್ದು ಮಾತ್ರ ಸುಳ್ಳಲ್ಲ.

ಎಂದಿನಂತೆ ಮೊನ್ನೆ ರಾತ್ರಿ ನಿನಗೆ ಗುಡ್ ನೈಟ್ ಹೇಳಿ ಮಲಗಿದ್ದೆ ನೋಡು. ಅದ್ಯಾವುದೋ ಅಪೂರ್ವ ಗಳಿಗೇಲಿ ನೀನು ನನ್ನ ಕನಸಿನರಮನೆಗೆ ಬಂದಿಳಿದಿದ್ದೆ. ಅದೆಲ್ಲಿಂದಲೋ ಹುಚ್ಚು ಧೈರ್ಯ ಬಂದಿತ್ತು. ನಾನು ನಿನ್ನ ತೆಕ್ಕೆ ಸೇರಿದ್ದ ಸಂಭ್ರಮದಲ್ಲಿ ನಿನ್ನ ಕೈಬೆರಳುಗಳಲ್ಲಿ ತುಂಟತನ ಲಾಸ್ಯವಾಡಲಾರಂಭಿಸಿತ್ತು.

ಕ್ಷಣ ಮಾತ್ರದಲ್ಲಿ ನಾನು ಬೆದರು ಗೊಂಬೆ. ಕಾಲ್ಬೆರಳು ಅದಾಗಲೇ ನೆಲದ ಜತೆ ಚಕ್ಕಂದವಾಡಲಾರಂಭಿಸಿತ್ತು. ಹಾಗೆ ನಿದ್ದೆಗಣ್ಣಲ್ಲೇ ನಾನು ನಿನ್ನ ಜತೆ ಮಾತಿಗೆ ತೊಡಗಿದ್ದೆ ನೋಡು. ಏನೋ ಕೇಳಬೇಕೆನ್ನುವಷ್ಟರಲ್ಲಿ ಅಮ್ಮ ಬಂದು ಎಚ್ಚರಿಸಿದಳು ನೋಡು. ಆಗಲೇ ಗೊತ್ತಾಗಿದ್ದು ಕಂಡಿದ್ದೆಲ್ಲವೂ ಕನಸು.

ಅವಳಾಗಲೇ ಏನೇ ಇನ್ನೂ ಶ್ರಾವಣ ಮುಗಿದಿಲ್ಲ. ಆಗಲೇ ಕನಸಿನರಮನೆ ಕಟ್ತಾ ಇದ್ದೀಯಾ. ನಿನ್ನ ರಾಜಕುಮಾರ ಬಂದು ನಿನ್ನ ಕೈ ಹಿಡಿಯಲು ಇನ್ನೂ ಸುಮಾರು ದಿನಗಳಿವೆ ಅಂದ್ಬಿಟ್ಳು ನೋಡು. ಯಾಕೋ ದುಃಖ ತಡೆಯಲಾಗಲಿಲ್ಲ ಕಣೋ. ಅಮ್ಮನಿಗೆ ಗೊತ್ತಾಗದಂತೆ ಕಣ್ಣಂಚಲ್ಲಿ ಬಂದು ಸೇರಿದ್ದ ಕಣ್ಣೀರ ಬಿಂದುವನ್ನು ಕೈಗೊತ್ತಿಕೊಂಡೆ. ಅದ್ಯಾಕೋ ಮತ್ತೆ ಮನದಲ್ಲಿ ನೆನಪುಗಳ ಸರಮಾಲೆ.

ನೀನು ಕದ್ದಾಲಿಸಿದ ಕೈ ಬಳೆಗಳ ಸದ್ದು, ನೀನೇ ಕೈಯಾರೆ ಕಾಲಿಗೆ ತೊಡಿಸಿದ ಗೆಜ್ಜೆ. ಕಳೆದ ವಾರವಷ್ಟೇ ಮೂಗೇರಿಸಿಕೊಂಡ ಮೂಗುತಿ. ಬರ್ತ್‌ಡೇ ಗಿಫ್ಟ್ ಡೈಮಂಡ್ ರಿಂಗ್. ಎಲ್ಲವನ್ನೂ ನೋಡುತ್ತಾ ನಾನು ಕಳೆದುಹೋಗುತ್ತೇನೆ. ದೂರದಲ್ಲೆಲ್ಲೋ ಆಗಸದಲ್ಲಿ ಹಕ್ಕಿಗಳ ಹಿಂಡು ಹಾರಾಡುತಿದ್ದರೆ ಮನದಲ್ಲಿ ನನಗೂ ಗರಿ ಬಿಚ್ಚುವಾಸೆ. ಆದರೆ ಜತೆಯಲಿ ನೀನಿರಬೇಕು ಎನ್ನುವುದು ಮಾತ್ರ ಮರೆಯದಿರು.

ನಾಡಿದ್ದು ಚೌತಿ ಸಂಭ್ರಮ. ಊರಿಗೆ ಏನಾದರೂ ಬರೋದಿದೆಯಾ ದೊರೆಯೇ? ನೀ ಬರುವೆ ಎಂಬ ನಿರೀಕ್ಷೆಯಲ್ಲಿ...
ನಿನ್ನವಳು

Thursday, August 13, 2009

ಕೃಷ್ಣನ ಕೊಳಲಿನ ಪ್ರೇಮದಾ ಕರೆ...

ಕಾದಿರುವಳೋ ಕೃಷ್ಣ ರಾಧೆ,
ಕಾದಿರುವಳೋ ಕೃಷ್ಣ ರಾಧೆ
ಬೃಂದಾವನದ ನಂದನವನದಲ್ಲಿ,
ಬೃಂದಾವನದ ನಂದನವನದಲ್ಲಿ
ಕಾದಿರುವಳೋ ಕೃಷ್ಣ ರಾಧೆ

ನಾಳೆ ಕೃಷ್ಣಾಷ್ಟಮಿ ಸಂಭ್ರಮ. ನಿನಗಿದೆಲ್ಲಾ ಗೊತ್ತಾ ಎಂಬ ಅಸಂಬದ್ಧ ಪ್ರಲಾಪ ಬೇಡ. ಜೀನ್ಸ್ ಪ್ಯಾಂಟ್, ಅದರ ಮೇಲೊಂದು ಟೀಶರ್ಟ್, ಕಣ್ಣಿಗೊಂದು ಸನ್‌ಗ್ಲಾಸ್ ಹಾಕಿದ್ದಾಳೆ ಎಂದಾಕ್ಷಣ ಹುಡುಗಿ ಮಾಡರ್ನ್, ಅವಳಿಗೇನೂ ಗೊತ್ತಿರೋಲ್ಲ ಅಂತಲ್ಲ ಗುಡ್ಡೂ. ಹಾಗಂತ ಒಂದು ಅಲಿಖಿತ ಶಾಸನ ಇದ್ದಿದ್ದರೆ ನನ್ನ ನಿನ್ನ ಮೊದಲ ಭೇಟಿ ಕೃಷ್ಣ ಮಂದಿರದಲ್ಲಿ ಆದ ದಿನವೇ ನಾ ನಿನ್ನವಳಾಗುತ್ತಿರಲಿಲ್ಲ.

ಕಳೆದ ವರ್ಷ ಮನೆಯವರನ್ನು ಬಿಟ್ಟು ಆಚರಿಸಿದ ಮೊದಲ ಅಷ್ಟಮಿ. ಪ್ರತಿ ವರ್ಷವೂ ಕೃಷ್ಣಾಷ್ಟಮಿಗೆ ದೇವರ ದರ್ಶನ ಕಡ್ಡಾಯ. ಆದರೆ ಅಪ್ಪ ಅಮ್ಮನನ್ನ ದೂರ ಬಿಟ್ಟು ಈ ಕಾಲೇಜಿಗೆ ಸೇರಿಯಾಗಿತ್ತು. ದೇವರ ದರ್ಶನ ಮಾಡಲೇಬೇಕೆಂದು ನಿನ್ನೂರ ಮಂದಿರಕ್ಕೆ ಬಂದಿದ್ದೆ ನೋಡು.

ದೇವರಿಗೆ ಪ್ರಾರ್ಥಿಸಿ ಕೈ ಜೋಡಿಸಿ ಇನ್ನೇನು ಆರತಿಯನ್ನು ಕಣ್ಣಿಗೊತ್ತಿಕೊಳ್ಳಬೇಕು ಎಂಬಷ್ಟರಲ್ಲಿ ಎಲ್ಲರ ನಡುವಿನಿಂದ ಎರಡು ಕಣ್ಣುಗಳು ನನ್ನನ್ನು ಹಿಂಬಾಲಿಸುತ್ತಿವೆ ಅಂತ ಗೊತ್ತಾಗಿತ್ತು. ಆಗಲೇ ಹೃದಯದಲ್ಲಿ ಡವ ಡವ. ಆದರೆ ಮನ ಕೃಷ್ಣನಿದ್ದಾನೆ ನಿನ್ನ ಜತೆ ಅಂದಿತ್ತು.

ನನ್ನ ರಾಧೆ ನೀನಾಗುವೆಯಾ ಎಂದು ದೂರದಿಂದ ಕೇಳಿದಂತಾಯ್ತು. ನಾನು ಸುಮ್ಮನೆ ತಲೆಯಾಡಿಸಿದೆ. ನಿನ್ನೆಗೆ ರಾಧೆಯ ಗೆದ್ದ ಸಂಭ್ರಮ. ನಾನು ಹೊರಡಬೇಕೆಂದರೂ ಹೊರಡಲಾಗದಷ್ಟು ಆಪ್ತವಾಗಿದ್ದೆ ನೀನು. ನಿನ್ನ ಸಾಮೀಪ್ಯ, ಸಾಂಗತ್ಯವೇ ನವಿರು ಅನುಭವ ನೀಡಲಾರಂಭಿಸಿತ್ತು. ಮನದಲ್ಲಿ ಏನೋ ಕಂಪನ.

ಕೃಷ್ಣಾಷ್ಟಮಿಗೆ ಈ ಬಾರಿ ಮನೆಯಲ್ಲಿದ್ದೇನೆ. ಮನೆಯಲ್ಲಿದ್ದರೆ ಅಷ್ಟಮಿಗೆ ಮದರಂಗಿ ಹಾಕುವುದೇ ಸಂಭ್ರಮ. ಹಾಗೆ ಕೈಯಲ್ಲಿ ಚಿತ್ತಾರ ಮೂಡುತ್ತಿರಬೇಕಾದರೆ ಮನದಲ್ಲಿ ಮತ್ತೆ ನಿನ್ನದೇ ಸವಿ ನೆನಪು. ಈ ಬಾರಿ ಮದರಂಗಿ ರಂಗೇರಬೇಕಾದರೆ ನೀನು ಕಣ್ಣ ಮುಂದಿರಬೇಕು, ಪ್ಲೀಸ್!
ನಿನ್ನ ಕೃಷ್ಣಪ್ರಿಯೆ

Friday, August 7, 2009

ಹೇಳದೆ ಉಳಿದ ಅಚ್ಚರಿ

ಶ್ರಾವಣದ ಕನಸು ಕಂಡವಳಿಗೆ...
ಈ ಬಾರಿ ನಿನ್ನ ಕನಸು ಕೈಗೂಡದೇ ಇರಲು ಬಿಡುವುದೇ ಇಲ್ಲ! ಇಷ್ಟು ವರ್ಷದ ಪ್ರೀತಿ ಪಕ್ವವಾಗುವ ಅಪೂರ್ವ ಕಾಲವಿದು. ಹಾಗೆಂದೇ ನಾನು ಈ ಶ್ರಾವಣವನ್ನು ಸ್ವಾಗತಿಸಿದ್ದೆ. ಒಂದು ಅಚ್ಚರಿ ಇರಲಿ ಎಂದು ನಿನ್ನ ಮುಂದೆ ಹೇಳಿಲ್ಲ ಎನ್ನುವುದು ಬಿಟ್ಟರೆ ಕೆಲ ತಿಂಗಳ ಹಿಂದಿನಿಂದಲೇ ನನ್ನ ನಿನ್ನ ಮನೆಯವರು ತಯಾರಿ ಆರಂಭಿಸಿದ್ದರು. ಎಲ್ಲಿ ನಿನ್ಮುಂದೆ ಬಾಯಿ ಬಿಡ್ತಾರೋ ಅಂತ ನಿನ್ನ ಅಮ್ಮನಲ್ಲಿ ಕಾಡಿ, ತಂಗಿಯನ್ನು ಗೋಗರೆದಿದ್ದೆ!

ಈ ಪತ್ರ ಓದಿ ಅವರಲ್ಲೇನಾದರೂ ಕೇಳಿದೆಯೋ ಅವರು ಬಿದ್ದು ಬಿದ್ದು ನಗುತ್ತಾರೆ. ಆ ಹೊತ್ತಿಗೆ ನನ್ನ ಈ ಸ್ವೀಟ್ ಹಾರ್ಟ್ ಮುಖದಲ್ಲಿ ಕೋಪ ಕಾಣಿಸುತ್ತೆ. ಆದರೆ ಮನದ ಮೂಲೆಯಲ್ಲೆಲ್ಲೋ ಮಧುರ ಸುಂದರ ಗಾನ ಟಿಸಿಲೊಡೆದಿರುತ್ತೆ. ಮತ್ತೆ ನಿನ್ನ ಮನೇಲಿ ಸಂಭ್ರಮ ಹೇಗಿದೆ. ನನ್ನೂರಲ್ಲಿ ಲಗ್ನ ಪತ್ರಿಕೆ ಹರಿದಾಡದ ಜಾಗಗಳಿಲ್ಲ. ಬಾಲ್ಯದಿಂದಲೂ ನನ್ನೆಡೆಗಿನ ಕುತೂಹಲದಿಂದ ಯಾರವಳು ನಿನ್ನ ಹೃದಯದರಸಿ, ಅವಳ ವದನಾರವಿಂದವನ್ನು ನಾವು ನೋಡಿ ಸಂಭ್ರಮಿಸುವ ಕಾಲವಿದು ಎನ್ನುತ್ತಾ ಸಂಭ್ರಮಿಸುತ್ತಿದ್ದಾರೆ.

ಮೊನ್ನೆ ಕಾಲೇಜಿಗೆ ಹೋಗಿದ್ದೆ. ನಮ್ಮ ಪ್ರೀತಿಯ ಮೇಡಂ ಏನಪ್ಪಾ ಇನ್ನೂ ಲವ್ ಮಾಡ್ತಾನೇ ಇರಬೇಕು ಅಂತಿದೀರಾ, ಅಲ್ಲಾ ಈ ವರ್ಷಾನಾದ್ರೂ ಸಿಹಿಯೂಟ ಹಾಕಿಸಿ ಜೀವನದಲ್ಲಿ ಸೆಟ್ಲ್ ಆಗ್ತೀರಾ ಎಂದು ಕೇಳಿದ್ರು. ಹಾಗೇ ಗಂಭೀರವಾಗಿ ಎರಡು ನಿಮಿಷ ಕುಳಿತೆ. ಅವರ ಕಣ್ಣಲ್ಲಿ ಆತಂಕ. ಸುಮ್ಮನೆ ಇನ್ವಿ ಟೇಷನ್ ತೆಗೆದು ಅವರ ಮುಂದಿಟ್ಟೆ. ಆ ಪುಟ್ಟ ಕವರ್ ಮೇಲಿದ್ದ ‘ಶ್ರವಣ್ ವೆಡ್ಸ್ ಶ್ರಾವಣಿ’ ನೋಡಿದ್ದೇ ಅವರ ಮೊಗದಲ್ಲಿ ಮಂದಹಾಸ. ಇಂತಹ ಪುಟ್ಟ ಪುಟ್ಟ ಸಂಭ್ರಮ ಜೀವನದಲ್ಲಿ ಅದೆಷ್ಟೋ ಅಲ್ವೇನೆ?
ನಿನ್ನ ಶ್ರಾವಣದ ಹುಡುಗ