Tuesday, May 19, 2009

ಮಳೆ ಬರ್ತಿದೆ.. ನೆನಪಾಗ್ತಿದೆ..

ಮಳೆ ಹುಡುಗೀ,

ನಿನ್ನೂರಲ್ಲಿ ಬಿಸಿಲ ಸಂಭ್ರಮವಾದರೆ ನನಗಿಲ್ಲಿ ಮಳೆಯಲ್ಲಿ ನೆನೆದ ಸಂಭ್ರಮ. ಕಳೆದ ಮೂರು ದಿನಗಳಿಂದ ಇಲ್ಲಿ ಮಳೆಯದೇ ದರ್ಬಾರು. ನೀನಲ್ಲಿ ಬಿಸಿಲ ಬೇಗೆ ತಾಳಲಾರೆ ಎಂದರೆ ನಾನಿಲ್ಲಿ ಕಳೆದ ಮಳೆಯಲ್ಲಿ ನಿನ್ನ ಜತೆ ಕಳೆದ ನೆನಪುಗಳ ಸುಮಧುರ ಭಾವಗಳಲಿ ಬಂಧಿ.

ಮಧ್ಯಾಹ್ನ ಸೂರ್ಯ ನೆತ್ತಿಯಿಂದ ಜಾರಿ ಆ ಕಡೆ ಹೊರಳುತ್ತಿದ್ದಂತೆಯೇ ಅಪರೂಪಕ್ಕೆ ಎಂಬಂತೆ ಕಾಣಿಸುತ್ತದೆ ಕಾಮನಬಿಲ್ಲು. ಆ ಕಾಮನಬಿಲ್ಲಿನಲ್ಲಿ ನಿನ್ನ ಕನಸು ಕಾಣುತ್ತಾ ಕುಳಿತವನಿಗೆ ಎಚ್ಚರವಾಗಿದ್ದು ಮೊದಲ ಮಳೆ ಹನಿ ಮೈ ತಾಕಿದಾಗಲೆ. ಹಾಗೆ ಬೀಳುವ ಮಳೆಗೆ ಅಂಗೈ ಚಾಚಿ ಹನಿಯ ಹಿಡಿಯಲು ಪ್ರಯತ್ನಿಸುತ್ತಿರುವಾಗ ನಾನು ನೀನು ಜತೆಯಲ್ಲಿ ಕುಳಿತು ಬೊಗಸೆಯೊಡ್ಡಿ ಹಿಡಿದ ಮಳೆಯ ಚಿತ್ತಾರ ನೆನಪಾಗಿ ಕಾಡುತ್ತಿದೆ. ಅದೇ ವೇಳೆ ಕಣ್ಣ ಮುಂದೆ ಪರಸ್ಪರ ತಬ್ಬಿಕೊಂಡು ಮಳೆಯಲ್ಲಿ ನೆನೆಯುತ್ತಾ ಹೋಗುವ ಪ್ರಣಯ ಜೋಡಿಯನ್ನು ಕಂಡು ಅಸೂಯೆ.

ಈ ಕಾಲೇಜಿಗೆ ಅದ್ಯಾವ ಲೆಕ್ಕ ಅಂತ ಇಷ್ಟು ಸುದೀರ್ಘ ರಜೆ ಕೊಡುತ್ತಾರೋ. ನೀನಿಲ್ಲದ ಒಂದು ಕ್ಷಣವನ್ನೂ ಬಿಟ್ಟಿರಲಾರದವನು ನಾನು. ಅದರ ನಡುವೆ ಈ ಮಳೆ ಬಂದರೆ ಮನದಲಿ ನೆನಪುಗಳ ಮೆರವಣಿಗೆ. ಈ ಸಂಭ್ರಮದಲ್ಲಿ ನೀನಿಲ್ಲದೆ ನಾನು ಏಕಾಂಗಿ ಎಂದು ನಾನು ಕಣ್ಣೀರಾಗುತ್ತೇನೆ. ಅದ್ಸರಿ ರಜೆ ಎಂದಾಕ್ಷಣ ಪ್ರೀತಿಸಿದ ಹುಡುಗನ ಮರೆತು ಬಿಡೋದಾ? ಎಸ್‌ಎಂಎಸ್, ಫೋನ್ ಕಾಲ್ ಇಲ್ಲ, ನೀ ಪತ್ರ ಬರೆದ ನೆನಪೇ ನನಗಿಲ್ಲ. ಈಗ ಕೇವಲ ನಿನ್ನ ಬಗೆಗಿನ ಕನಸುಗಳು ಮಾತ್ರ. ಇನ್ನೇನು ಎರಡು ವಾರ ಅಷ್ಟರಲ್ಲಿ ಕಾಲೇಜು ಆರಂಭವಾಗುತ್ತೆ. ಕಾಲೇಜು ಆರಂಭದ ಮೊದಲ ದಿನದ ಇಳಿಸಂಜೆ ಬೀಳುವ ಮಳೆ ಹನಿಯ ಹಿಡಿಯಲು ನೀ ಬೊಗಸೆ ಜೋಡಿಸಬೇಕು.

ಆ ಸಂಭ್ರಮದಲ್ಲಿ ನಿನ್ನ ಕೈಜೋಡಿಸಿ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ ನಿನ್ನ ನಗುವ ನಯನಗಳಲ್ಲಿ ಮಳೆ ಹನಿಯ ಕಾಣಬೇಕು. ಹಾಗೇ ಕಣ್ಣಿಟ್ಟು ನೋಡುವ ವೇಳೆಯಲ್ಲಿ ಫಳ್ಳನೆ ಒಂದು ಮಿಂಚು ಹೊಳೆದಿರುತ್ತೆ. ಅದಕ್ಕೆ ಬೆದರಿ ನೀ ಚಿಗರೆಯಂತೆ ನನ್ನ ತೋಳು ಸೇರಿರ್ತೀಯಾ ಅಲ್ವೇನೇ?

ಮಳೆ ಪ್ರೀತಿಯ ಹುಡುಗ

Tuesday, May 12, 2009

ಮನೆಗೆ ಬರಲು ಹೇಳು ನಿನ್ನಿನಿಯನ..!!

ನನ್ನ ಹುಡುಗಾ,
ರಿಸಲ್ಟ್ ಬಂತು, ಫರ್ಸ್ಟ್ ಕ್ಲಾಸ್ ಪಾಸು. ಆದರೆ ಆ ಸಂಭ್ರಮದಲ್ಲಿ ನೀನು ಮಾತ್ರ ಪಾಲ್ಗೊಂಡಿಲ್ಲ ಎನ್ನುವ ದುಗುಡ ಇನ್ನೂ ದೂರ ಹೋಗಿಲ್ಲ. ಪಾಸಾಗಿದ್ದಕ್ಕೆ ಕಂಗ್ರಾಟ್ಸ್ ಎಂದು ಎಸ್‌ಎಂಎಸ್ ಕಳುಹಿಸಿದರೆ ನಿನ್ನ ಜವಾಬ್ದಾರಿ ಮುಗಿಯುವುದಿಲ್ಲ ಗೆಳೆಯಾ. ಪ್ರೀತಿಸುವ ಹುಡುಗಿ ಎಲ್ಲಾ ಸಂಭ್ರಮದಲ್ಲೂ ಇನಿಯನ ಸಾಂಗತ್ಯ ಬಯಸುತ್ತಾಳೆ ಎನ್ನುವುದು ನೆನಪಿರಲಿ!

ಅಪ್ಪ ಅಮ್ಮನ ಜತೆ ಈ ಸಂಭ್ರಮವನ್ನು ಹಂಚಿಕೊಂಡರೂ ನಿನ್ನ ಜತೆ ಇದ್ದ ಭಾವಗಳು ಗರಿಗೆದರುವುದಿಲ್ಲ. ನೀನು ಜತೆಗಿದ್ದಿದ್ದರೆ ಅಪ್ಪ ಅಮ್ಮನಿಗೂ ಸಂತಸ ಇರುತ್ತಿತ್ತು. ನಾನು ನೀನು ಪ್ರೇಮ ಜೋಡಿ ಎಂದು ನಿನ್ನ ಪ್ರೀತಿಸಲಾರಂಭಿಸಿದ ಮೊದಲ ದಿನವೇ ಅಪ್ಪ ಅಮ್ಮನಲ್ಲಿ ಹೇಳಿದ್ದೆ. ಅವರು ನನ್ನ ಕನಸುಗಳನ್ನು ನಿರೀಕ್ಷೆಗಳನ್ನು ನಿರಾಕರಿಸುವುದಿಲ್ಲ ಎಂಬುದು ನನಗೆ ಮೊದಲೇ ತಿಳಿದಿತ್ತು.

ಅವರಿಗೆ ಗೊತ್ತು ಮಗಳ ಇಂದಿನ ಸಂಭ್ರಮಕ್ಕೆ ಇವಳ ಬೆನ್ನ ಹಿಂದೆ ಬಿದ್ದ ಹುಡುಗನೇ ಕಾರಣ. ಓದಿನಲ್ಲಿ ಸದಾ ಹಿಂದಿರುತ್ತಿದ್ದ ಈಕೆ ಈತನ ಸಾಥ್ ಸಿಕ್ಕಿದ ನಂತರ ಬದಲಾಗಿದ್ದಾಳೆ. ಅನುಸರಣೆ ಇಲ್ಲದ ಹುಡುಗಿ ಎಂದು ಪ್ರಖ್ಯಾತಳಾದವಳಿಗೆ ಅನುಸರಣೆ ಎಂಬ ಶಬ್ದದ ಅರ್ಥವನ್ನು ಪ್ರೀತಿಯ ರೂಪದಲ್ಲಿ ಕೊಟ್ಟವನು ನೀನು ಎಂದು ಎಂದೋ ತಿಳಿದು ಹೋಗಿತ್ತು.

ಹುಡುಗಾ ನಿನ್ನ ಕಂಗ್ರಾಟ್ಸ್ ಎಂಬ ಮೆಸೇಜ್ ಬಂದ ತಕ್ಷಣ ಅಮ್ಮನಲ್ಲಿ ಹೇಳಿದ್ದೆ, ಅಮ್ಮ ನನ್ನ ಹುಡುಗ ಮೆಸೇಜ್ ಮಾಡಿದ್ದಾನೆ. ಮನೆಗೆ ಬರಲು ಹೇಳು ನಿನ್ನಿನಿಯನ ಎಂದು ಅವಳು ಹೇಳಿದ್ದೇ ತಡ, ನಿನ್ನ ಆಮಂತ್ರಿಸಲು ಫೋನ್ ಎತ್ತಿ ಡಯಲ್ ಮಾಡಿದರೆ ಕೇಳಿದ್ದು ಟೆಲಿಫೋನ್ ಹುಡುಗಿಯ ಔಟ್ ಆಫ್ ಕವರೇಜ್ ಏರಿಯಾ ಎಂಬ ಮಾತು. ಎಂದಿನ ಅವಳ ಕಿವಿಗಿಂಪು ಮಾತು ಅಂದು ಎಷ್ಟು ಕರ್ಕಶವಾಗಿ ಕೇಳಿತ್ತು ಗೊತ್ತಾ.
ಇನ್ನೂ ತಡಮಾಡಬೇಡ. ಶೀಘ್ರವಾಗಿ ಬಾ. ಅಪ್ಪ ಅಮ್ಮ ನಮ್ಮ ಸುಂದರ ಭವಿಷ್ಯಕ್ಕೆ ಮುದ್ರೆ ಹಾಕಿದ್ದಾರೆ. ಬರಬೇಕಾದರೆ ಕೈಯಲ್ಲಿ ಒಂದು ಪುಟ್ಟ ಮಲ್ಲಿಗೆ ದಂಡೆ, ಒಂದು ಚೆಂಗುಲಾಬಿ ಇರಲಿ. ಅದಕ್ಕಿಂತ ಹೆಚ್ಚಿನ ಸಂಭ್ರಮ ನನಗೆಲ್ಲಿಯದು?

ನಿನ್ನ ಹುಡುಗಿ

Wednesday, May 6, 2009

ನೀನೇ ನನ್ನ ಬದುಕು, ನೆನಪಿರಲಿ...

ಪ್ರೀತಿಯ ಹುಡುಗಾ,
ಒಂದು ಪ್ರೇಮ ಪತ್ರ ಈ ಪರಿ ಮನವ ಕಾಡುತ್ತಾ? ಈ ರೀತಿ ಭಾವನೆಗಳ ಭಾಷೆ ನಿನಗೆ ಕಲಿಸಿಕೊಟ್ಟವರು ಯಾರು? ನೀ ಬರೆದ ಪತ್ರಗಳಿಗೆ ಉತ್ತರ ಬರೆಯೋಣ ಎಂದು ಹೊರಟರೆ ನಿನ್ನ ಭಾವಗಳ ಮುಂದೆ ಲೇಖನಿ ಸಾಗುವುದೇ ಇಲ್ಲ!

ಪ್ರತಿನಿತ್ಯ ಎಸ್‌ಎಂಎಸ್, ಮೊಬೈಲ್ ಎಂದು ಒಡನಾಟ ಇದ್ದರೂ ನೀ ಬರೆದ ಪತ್ರಗಳು ಅಷ್ಟರ ಮಟ್ಟಿಗೆ ಆಪ್ತವಾಗುತ್ತವೆ. ಅಲ್ಲಿರುವ ನವಿರು ಭಾವಗಳು ಆಹ್ಲಾದ ನೀಡುತ್ತವೆ.

ಮೊನ್ನೆ ಪರೀಕ್ಷೆ ಮುಗಿಯಿತು ನೋಡು. ಅದು ಕಳೆದ ಎರಡೇ ದಿನದ ನಂತರ ಒಂದು ಮುಂಜಾವದಲಿ ಅಪ್ಪ ಅಮ್ಮನ ಕಿವಿಯಲ್ಲಿ ಏನೋ ಉಸುರುತ್ತಿದ್ದ. ಹೇಳುವ ರೀತಿಯನ್ನು ನೋಡಿಯೇ ಅರ್ಥೈಸಿಕೊಂಡೆ ಇದು ಹೆಣ್ಣು ಹುಟ್ಟಿದವರ ಪಾಡು ಅಂತ.

ಸಂಜೆ ಕಾಫಿ ಕುಡಿದ ತಕ್ಷಣ, ಬಾರೇ ವಾಯುವಿಹಾರಕ್ಕೆ ಹೋಗಿ ಬರೋಣ ಎಂದು ಅಮ್ಮ ಕರೆದಳು ನೋಡು, ಆಗಲೇ ಮನಸ್ಸಿಗೆ ಗಟ್ಟಿಯಾಗಿಬಿಟ್ಟಿತ್ತು ಇದು ಮದುವೆಗೆ ಸಿದ್ಧಳಾಗು ಎನ್ನುವುದರ ಮುನ್ನುಡಿ ಎಂದು.

ಹಾಗೇ ನಡೆಯಬೇಕಾದರೆ ಅಪ್ಪನ ಮಾತನ್ನು ಯಥಾವತ್ತಾಗಿ ಕಿವಿಯಲ್ಲಿ ಉಸುರಿದ್ದಳು. ಹುಡುಗ ದೂರದ ಸಂಬಂಧಿಯ ನೆಂಟನ ಮಗನಂತೆ. ಓಡಾಡಲು ಕಾರು, ಜೀವನಕ್ಕೆ ಐಷಾರಮಿ ಮನೆ, ಕಾಲಿಗೊಬ್ಬ ಕೈಗೊಬ್ಬ ಆಳು... ನಾ ಒಪ್ಪಿದರೆ ಆ ಮನೆಗೆ ಯಜಮಾನತಿಯಂತೆ. ಹೀಗೆ ಅವಳು ಹೇಳುತ್ತಾ ಹೋದಳು, ನಾನು ಸುಮ್ಮನೆ ಎಲ್ಲವನ್ನೂ ಕೇಳುತ್ತಾ ಹೋದೆ.

ಅಮ್ಮನಿಗೆ ನನ್ನ ಮನಸ್ಸು ಅರಿವಾಗಿತ್ತು. ಮಗಳು ಮನಸ್ಸಲ್ಲಿರುವುದನ್ನು ಬಾಯ್ಬಿಡುತ್ತಿಲ್ಲ. ಎಷ್ಟೆಂದರೂ ಹೆತ್ತವ್ವ ಅವಳಿಗೆ ನನ್ನ ಮನದ ದುಗುಡ ಅರ್ಥವಾಗದೇ ಇರುತ್ತಾ. ಅದಕ್ಕೇ ಅವಳು ಕೊನೆಯದಾಗಿ ಮಗಳೇ ಒತ್ತಾಯವಿಲ್ಲ ಎಂದು ಸಾಗಹಾಕಿದಳು.

ಆದರೆ ಗೆಳೆಯಾ, ಅಂದು ರಾತ್ರಿ ನಿದ್ರೆಯೇ ಹತ್ತಲಿಲ್ಲ. ಎಂದೋ ಕಳೆದು ಹೋಗಲಿದ್ದ ಹುಡುಗಿಯ ಆಂತರ್ಯವನ್ನು ಅರಿತು ಭರವಸೆಯ ಬೆಳಕು ನೀಡಿದವ ನೀನು. ಹೃದಯದಲ್ಲಿ ಅಡಗಿದ್ದ ದುಃಖವನ್ನು ಹೇಳಿದಾಗ ಮುದ್ದು ಮಗುವಿನಂತೆ ಸಲಹಿದವನು ನೀನು. ಜೀವನದ ಪ್ರತಿ ಕ್ಷಣದ ಸಂಭ್ರಮಕ್ಕೆ ದಾರಿ ತೋರಿದವನು ನೀನು. ಆದಕ್ಕೇ ಮದುವೆಯಾಗುವುದಾದರೆ ನಿನ್ನನ್ನೇ ಎಂದು ತೀರ್ಮಾನಿಸಿ ಅಮ್ಮನಿಗೆ ಹೇಳಲು ಹೊರಟಿದ್ದೇನೆ. ಅವಳಿಗೆ ಮಗಳ ಮಾತು ಅರ್ಥವಾಗುತ್ತೆ. ಅಪ್ಪ ಒಪ್ಪಿಬಿಟ್ಟರೆ ನಮ್ಮ ಸಂಸಾರ ಆನಂದ ಸಾಗರ!

ನಿನ್ನ ಹುಡುಗಿ