Tuesday, April 28, 2009

ಬಂಗಾರದೊಡವೆ ಬೇಕು.. ಅದ.. ನೀ ತಂದುಕೊಡಬೇಕು..

ಬಂಗಾರೂ,
ಐ ಲವ್ ಯೂ ಸೋ ಮಚ್. ಈ ಸಂಭ್ರಮದಲ್ಲಿ ನೀನು ಏನು ಕೇಳುವಿಯೋ ಅದನ್ನು ಕೊಡಲು ನಾನು ಸೈ. ಯಾಕೆಂದು ಕೇಳ ಬೇಡ. ಕೊನೆಗೂ ಅಕ್ಷಯ ತೃತೀಯದ ದಿನವೇ ಬೆರಳಿಗೆ ಉಂಗುರ, ಕೊರಳಿಗೆ ಸರ ತೆಗಸಿಕೊಟ್ಟೆಯಲ್ಲಾ ಸಾಕು ಕಣೋ.

ನಾನು ಚಿನ್ನದ ಬೇಡಿಕೆಯಿಟ್ಟಾಗ ಎಷ್ಟು ಹೆದರಿದ್ದೆ ಗೊತ್ತಾ. ನೀನು ಕೋಪಿಸಿದರೆ ರಮಿಸೋದು ಹೇಗೆಂದು ಯೋಚಿಸುತ್ತಾ ನಿನ್ನ ಮುಂದೆ ಬೇಡಿಕೆಯಿಟ್ಟಿದ್ದೆ. ನಿಂಗೊತ್ತಾ ಹುಡುಗಾ ಹೀಗೆ ಅಕ್ಷಯ ತೃತೀಯಾ ದಿನ ಬಂಗಾರ ಖರೀದಿಸಿ ನಾನೀಗ ಅಕ್ಷರಶಃ ‘ಚಿನ್ನದ ಹುಡುಗಿ’ಯೇ ಆಗಿಬಿಟ್ಟಿದ್ದೇನೆ.

ಕಳೆದ ಬಾರಿಯ ಸಂಭ್ರಮಕ್ಕೆ ಕಿವಿಯಲ್ಲಿ ಎರಡು ಆಭರಣ ಸಾಲದು ಎಂಬಂತೆ ಮತ್ತೆ ಎರಡು ತೂತು ತೆಗೆಸಿ ಆಭರಣ ಹಾಕಿಸಿದ್ದೆ ಗೊತ್ತಾ. ಅಮ್ಮ ಬೈದಳು, ಆದರೆ ಅವಳಿಗೆ ಎಲ್ಲಿ ಗೊತ್ತಾಗುತ್ತೆ ನನ್ನ ಚಿನ್ನದ ಪ್ರೇಮ.

ಅದಕ್ಕಿಂತ ಹಿಂದಿನ ವರ್ಷ ಅಮ್ಮನಿಗೆ ಗೊತ್ತಾಗದೆ ಎರಡು ಕಾಲುಂಗುರ ಖರೀದಿಸಿ ಅದನ್ನು ಧರಿಸಿ ಅಮ್ಮನ ಮುಂದೆ ಹೋಗಿ ವಯ್ಯಾರದಿಂದ ಹೇಗಿದೆಯಮ್ಮಾ ಎಂದು ಕೇಳಿದಾಗ, ಮದುವೆಗೆ ಮುಂಚೆ ಕಾಲುಂಗುರ ತೊಟ್ಟಿದ್ದಕ್ಕೆ ಅಮ್ಮ ಲಕ್ಷ ನಾಮಾರ್ಚನೆ ಮಾಡಿ ಬಾಯಿ ಮುಚ್ಚಿಸಿದ್ದಳು.

ಬಾಲ್ಯದಿಂದಲೂ ನನಗೆ ಚಿನ್ನದ ಮೇಲೆ ವಿಪರೀತ ಪ್ರೀತಿ. ಹುಟ್ಟಿ ವರ್ಷ ಕಳೆಯುವುದರೊಳಗಾಗಿ ಅಜ್ಜ ಸೊಂಟಕ್ಕೆ ಚಿನ್ನದ ಉಡಿದಾರ ತೊಡಿಸಿದ್ದ. ಎರಡನೇ ವರ್ಷಕ್ಕೆ ಅಪ್ಪ ಕೊರಳಿಗೆ ಹಾರ ಕರುಣಿಸಿದ್ದ. ಪ್ರತಿ ವರ್ಷದ ಸಂಭ್ರಮದಲ್ಲಿ ಅಪ್ಪ ಅಮ್ಮ ಇಬ್ಬರೂ ಸೇರಿ ನೀಡುತ್ತಿದ್ದ ಆಭರಣಗಳು ಇಂದಿಗೂ ಅಲಮಾರಿಯಲ್ಲಿ ಭದ್ರ.

ನನಗೊತ್ತು ಎಲ್ಲರೂ ನನ್ನ ಮೇಲೆ ತೋರುವ ಪ್ರೀತಿ ಕಂಡು ನಿನ್ನಲ್ಲಿ ಅಸೂಯೆ ಮೂಡುತ್ತೆ. ಅದಕ್ಕೇ ಕಳೆದ ವಾರದಿಂದಲೇ ನಿನ್ನ ಬೆನ್ನಿಗೆ ದುಂಬಾಲು ಬಿದ್ದಿದ್ದು ನೀನೇನಾದರೂ ಕರುಣಿಸು ದೊರೆಯೇ ಎಂದು.

ಹೃದಯದ ದೊರೆಯೇ ಇನ್ನೇನೂ ನಿನ್ನಲ್ಲಿ ಕೇಳಲ್ಲ, ಯಾವ ಆಭರಣವೂ ಬೇಡ. ನಿನಗೆ ನಿರಾಭರಣವೇ ಸುಂದರ ಎನಿಸುವುದಾದರೆ ಅದೇ ಸಾಕು. ಇನ್ನು ಕಾಡುವುದಿಲ್ಲ, ಬೇಡುವುದೂ ಇಲ್ಲ. ಆದರೆ ಕೊನೆಗೊಂದು ಆಸೆ ಇನ್ನೂ ಉಳಿದಿದೆ. ಸಿಕ್ಕಾಗ ಹೇಳುತ್ತೇನೆ.. ಬರುತ್ತೀಯಾ?

ನಿನ್ನ ಬಂಗಾರಿ

Tuesday, April 21, 2009

ಅಗಣಿತ ತಾರೆಗಳ ನಡುವೆ ನಿನ್ನ ಹೆಸರಿನ ನಕ್ಷತ್ರ ಹುಡುಕಾಡಿದೆ..

ಬೆಳದಿಂಗಳ ಬಾಲೆ,
ಮೊನ್ನೆ ಸುರಿದ ಮಳೆಯ ಹನಿ ನೆನಪುಗಳ ಕಲರವ ಹೊಮ್ಮಿಸಿತು ನೋಡು. ಮೊದಲ ಮಳೆಯ ಹನಿ ಧರೆತಾಕಿದಾಗ ಹೊರಹೊಮ್ಮುವ ಕಂಪಿನಂತೆ. ಆ ಸುಗಂಧ ಎಲ್ಲಾ ಮಳೆಯಲ್ಲೂ ನಮ್ಮನ್ನು ಕಾಡುವುದಿಲ್ಲ . ಹಾಗಂತ ನಿನ್ನ ನೆನಪು ಎಲ್ಲಾ ದಿನಗಳಲ್ಲೂ ಕಾಡುವುದಿಲ್ಲ ಎಂದಲ್ಲ.

ಆದರೆ ಕೆಲವೊಮ್ಮೆ ಭಾವನೆಗಳ ಸಮ್ಮಿಳಿತದಲ್ಲಿ ವಿನಾಕಾರಣ ಹೆಚ್ಚು ಹೆಚ್ಚು ಕಾಡುತ್ತೀಯ. ಮೊನ್ನೆ ರಾತ್ರಿ ಬೇಸಗೆಯ ಧಗೆ ತಾಳಲಾರದೆ ಮನೆಯ ಟೆರೇಸ್ ಮೇಲೆ ಮಲಗಿದ್ದೆ. ಅಲ್ಲಿ ಇರುವ ಅಗಣಿತ ತಾರಾಗಣಗಳ ನಡುವೆ ನಿನ್ನ ಹೆಸರಿನ ನಕ್ಷತ್ರವನ್ನು ನಕ್ಷತ್ರಿಕನಂತೆ ಹುಡುಕಾಡತೊಡಗಿದೆ. ಅದು ಎಲ್ಲರಿಗೂ ಕಾಣಸಿಗುವುದಿಲ್ಲ. ಅದಕ್ಕೊಂದು ಸಣ್ಣ ಸೂಕ್ಷ್ಮತೆ ಬೇಕು ನೋಡು. ಹಾಗೆ ಇರಬೇಕಾದರೆ ದೂರದಲ್ಲೆಲ್ಲೋ ಕಾಣಿಸಿತು ಮಿಂಚ ಬೆಳಕು. ಅದು ಮಾಯವಾಗಿ ಈ ಕಡೆ ಹೊರಳಿ ನೋಡುತ್ತೀನಿ ನನ್ನ ಚುಕ್ಕಿ ನಕ್ಷತ್ರ ನಭದಲ್ಲಿ ನಗುತ್ತಿದ್ದಾಳೆ.

ಆ ನಗುವಿನಲೆಯ ಮಂದಸ್ಮಿತವ ನೆನಪಿಸಿಕೊಂಡು ನಿದ್ದೆಯಲ್ಲಿ ಮುಳುಗಿ ಹೋದವನಿಗೆ ಎಚ್ಚರವಾದದ್ದು ತಡರಾತ್ರಿಯಲ್ಲಿ ಮೊದಲ ಮಳೆ ಹನಿ ತಾಕಿದಾಗ. ಅದೆಲ್ಲಿಂದ ಬಂತೋ, ಮಳೆಯ ಸುಳಿವೇ ಇರಲಿಲ್ಲ. ಹಾಗೆ ಮೊದಲ ಹನಿ ಬಿದ್ದ ಐದು ನಿಮಿಷದಲ್ಲಿ ವಾತಾವರಣದಲ್ಲಿ ತಂಪೇರಿತ್ತು ನೋಡು. ಮನದಲ್ಯಾಕೋ ನೀ ನೀನೀಗ ಜತೆಗಿದ್ದರೆ ಎಂಬ ಕಲ್ಪನೆ ದಟ್ಟವಾಗಿ ಕಾಡಲು ಆರಂಭಿಸಿತ್ತು. ಅಂದು ನಿನ್ನೂರಲ್ಲೂ ಮಳೆಯಾಗಿತ್ತು. ಅದನ್ನು ತಿಳಿಸೋಣವೆಂದು ನೀನು ಸಂಭ್ರಮದಿಂದ ಫೋನಾಯಿಸಿದ್ದೆ. ಆ ಮಳೆಯ ನಡುವೆ ಹೊಳೆಯುವ ಮಿಂಚು ಬೆಳಕಂತೆ ಮನದಲ್ಲಿ ಭಾವನೆಗಳ ಸುರಿಮಳೆ.

ಮತ್ತೆ ನಾವು ಏನೆಲ್ಲಾ ಮಾತನಾಡಿದೆವು, ಒಂದೇ ಎರಡೇ. ಆ ಮಾತಿನ ಓಘಕ್ಕೆ ಸಮಯ ಕಳೆದ ಪರಿವೆಯೇ ಇರಲಿಲ್ಲ. ಹಾಗೆ ಮಾತನಾಡಿ ಫೋನ್ ಇರಿಸಬೇಕಾದರೆ ಹೊರಗೆ ಬೆಳಕು ಚೆಲ್ಲಿತ್ತು. ಮುಂಜಾನೆ ಸೂರ್‍ಯ ಇನ್ನೇನು ಮೂಡು ದಿಕ್ಕಿನಲ್ಲಿ ನಭ ಕೆಂಪಾಗಿಸಲು ಕ್ಷಣಗಳು ಮಾತ್ರ ಬಾಕಿ. ಹುಡುಗೀ ಪ್ರೀತಿ ಎಂದರೆ ಹೀಗೂ ಕಾಡುತ್ತಾ?
ಮಿಂಚು ಬೆಳಕಲ್ಲಿ ನಿನ್ನ ಕಂಡವ

Tuesday, April 14, 2009

ಅಂದಿದ್ದೆ, ‘ನಾನು ನಿನ್ನ ಸಂಗಾತಿ’ ಮರೆತಿಲ್ಲ ತಾನೆ ಆ ಸಂಗತಿ..?

ಮುದ್ದು ಹುಡುಗೀ,
ನಿನ್ನ ಅಹಂಕಾರ ಜಾಸ್ತಿ ಆಯಿತು. ಆದ್ರೂ ನೀನು ಒಳ್ಳೆಯವಳು. ಮೊನ್ನೆ ಮೊನ್ನೆ ಪರೀಕ್ಷೆ ಎಂದು ಫೋನ್ ಎತ್ತಿ ಮಾತನಾಡಲಿಲ್ಲ ಅಲ್ವಾ, ಅದ್ಕೇ ನಿಂಗೆ ಅಹಂಕಾರ ಎಂಬ ಪಟ್ಟ ಕಟ್ಟಿದ್ದು.

ಮೈ ತೇರೇ ಪ್ಯಾರ್ ಮೇ ದೀವಾನಾ ಹೋ ಗಯಾ
ದಿಲ್‌ರುಬಾ ಯೆ ಬತಾ ಕ್ಯಾ ಕರೂಂ ತೆರೇ ಸಿವಾ

ನಿನ್ನ ಪ್ರೀತಿಯಲ್ಲಿ ಹುಚ್ಚು ಹಿಡಿದಿರುವಾಗ ನೀನಿಲ್ಲದೇ ಹೋದರೆ ಹೇಗಿರಲಿ ಹೇಳು. ಪ್ರೀತಿಯೆಂದರೆ ಏನೆಂದೇ ತಿಳಿಯದವನಿಗೆ ಪ್ರೀತಿಯ ಅನುಭೂತಿ ಕೊಟ್ಟವಳು ನೀನು. ಅದುವರೆಗೆ ಯಾರೂ ನಿನ್ನಷ್ಟು ಕಕ್ಕುಲತೆಯಿಂದ ಮಾತನಾಡಿದವರಿಲ್ಲ. ಅನಾರೋಗ್ಯದಿಂದ ಮುದುಡಿಹೋದ ಬಾಲ್ಯದಲ್ಲಿ ನನ್ನ ಪಾಲಿಗೆ ಗೆಳೆಯರಿರಲಿಲ್ಲ, ಗೆಳತಿಯರಂತೂ ದೂರದ ಮಾತು. ಅಮ್ಮನೇ ನನ್ನ ಬಾಳ ಬೆಳಕಾಗಿದ್ದವಳು. ಹಾಗೆ ಸುಮಾರು 16 ಕ್ಕೂ ಹೆಚ್ಚು ವರ್ಷ ಕಳೆದೆ ನೋಡು. ಅಲ್ಲಿಗೆ ಏಕಾಂಗಿತನ ಅಭ್ಯಾಸವಾಗಿತ್ತು.

ಹಾಗೆ ಯಾವುದೇ ಓಘವಿಲ್ಲದ ಬಾಳಲ್ಲಿ ಬೆಳಕು ತಂದವಳು ನೀನು. ಜೀವನದಲ್ಲಿ ಏಕಾಂಗಿಯಲ್ಲ ನಾನಿದ್ದೀನಿ ‘ಸಂಗಾತಿ’ ಎಂದವಳು ನೀನು. ನನ್ನ ಕೈ ಹಿಡಿದು ಅದರಲ್ಲಿರುವ ರೇಖೆಗಳನ್ನು ನೋಡಿ ಇದರಲ್ಲೊಂದು ಅದೃಷ್ಟರೇಖೆ ನಾನು ಎಂದೆಯಲ್ಲಾ ಆಗ ಹೊಮ್ಮಿತ್ತು ನೋಡು ಪ್ರೀತಿ. ಏಕಾಂಗಿತನ ಮಾಯವಾಗಿ ಸಂಗಾತಿಯ ಒಲವೂ ಸಿಕ್ಕಿದಾಗ ಮನಸು ರೆಕ್ಕೆ ಬಿಚ್ಚಿ ಹಾರಿತ್ತು.

ಆಗ ತಾನೇ ಎಲೆ ಉದುರಿ ಬೋಳಾದ ಮರದಲ್ಲಿ ಚಿಗುರೊಂದು ಕಾಣಿಸಿದಂತೆ, ದಟ್ಟ ಕಾನನದ ನಡುವೆ ಕತ್ತಲಾವರಿಸುತ್ತಿದ್ದಂತೆಯೇ ಕಪ್ಪಡರಿದ ಆಕಾಶದಲ್ಲಿ ಕಂಡ ಅಸಂಖ್ಯ ತಾರೆಗಳ ನಡುವೆ ಮಿಂಚುವ ನಕ್ಷತ್ರದಂತೆ ನಿನ್ನಲ್ಲೇನೋ ಕಂಡೆ. ಅದು ಪ್ರೀತಿಯ ಇಲ್ಲ ಮೋಹವಾ?

ಮಾತಿನ ಮಲ್ಲಿ(ಳ್ಳಿ) ಅಂದು ನೀನು ನಿನ್ನ ಮುಂಗೈಯನ್ನು ತೆಗೆದು ನನ್ನ ಅಂಗೈಯಲ್ಲಿ ಒತ್ತಿ ಬಿಟ್ಟು ಕಣ್ಣಿಟ್ಟು ನೋಡಿದೆಯಲ್ಲಾ ಆಗ ಕಂಡಿತ್ತು ಕಣ್ಣಲ್ಲಿ ಮಿಂಚ ಸೆಳಕು. ಅಂದಿನಿಂದಲೇ ನೀ ಎನ್ನ ಇನಿಯೆಯಾಗಿದ್ದೆ. ನಿಜ ಹೇಳಲಾ, ಜೀವನದ ಈ ಚಿಕ್ಕ ಚಿಕ್ಕ ಸಂತೋಷಗಳನ್ನು ನೀ ನೀಡದೇ ಹೋಗಿದ್ದರೆ ನಾನಿಂದು ಹೀಗಿರುತ್ತಿದ್ದೆನಾ? ನೆವರ್, ಅದ್ಕೆ ಐ ಲವ್ ಯೂ ಮರೀ.
ನಿನ್ನ ಪ್ರೀತಿಯ ಹುಡುಗ

Wednesday, April 8, 2009

ಪತ್ರದ ಕಡೆಯ ಸಾಲುಗಳನ್ನು ಓದದೇ ಬಿಟ್ಟಿದ್ದಿದ್ದರೆ..

ಠೋರ ಹೃದಯಿಯೇ ಕೊನೆಗೂ ನನ್ನ ಮನ ನೋಯಿಸಬೇಕು ಎಂಬ ನಿನ್ನಾಸೆ ಈಡೇರಿತಲ್ಲಾ ಈಗ ಖುಷಿಯಾಯಿತಾ?
ಮೊನ್ನೆ ನೀ ಬರೆದ ಪತ್ರ ಓದುತ್ತಿದ್ದಂತೆ ಕಣ್ಣಲ್ಲಿ ನೀರು, ಹೃದಯದಲ್ಲಿ ನೋವಿನ ಕನಲಿಕೆ ಆರಂಭವಾಗಿತ್ತು.

ಅಷ್ಟಕ್ಕೂ ಮನ ನೋಯಿಸಬೇಕೆಂದು ಇದ್ದರೆ ಅದನ್ನು ಮುಖತಃ ಕುಳಿತು ಮಾಡು, ಆಗ ಹೃದಯ ಇಷ್ಟು ತೀವ್ರವಾಗಿ ಘಾಸಿಗೊಳ್ಳುವುದಿಲ್ಲ ಕಣೋ. ಅದು ಬಿಟ್ಟು ಇಂಥಾ ಚೇಷ್ಟೆಗಳನ್ನೆಲ್ಲಾ ಮಾಡಿದರೆ ಸಹಿಸಲು ಆಗುವುದಿಲ್ಲ.

ಏಪ್ರಿಲ್ ಫೂಲ್ ಹೆಸರಲ್ಲಿ ಇಂಥ ಪತ್ರ ಬರೆದು ನೀನು ಸಖತ್ ಮಜಾ ತೆಗೆದುಕೊಂಡೆ ಅಲ್ವಾ. ಆದರೆ ನೀನೇ ಪ್ರಾಣ ಎನ್ನುವ ಈ ಪುಟ್ಟ ಹೃದಯಕ್ಕೆ ಎಷ್ಟು ದಿಗಿಲಾಗಿತ್ತು ಗೊತ್ತಾ? ಪತ್ರದ ಕೊನೆಯ ಸಾಲು ಓದದೇ ಇದ್ದಿದ್ದರೆ ನಿನ್ನಾಣೆ ನಾ....

ಬೇಡ ಬಿಡು, ಈಗ ಅದರ ನೆನಪುಗಳ್ಯಾಕೆ. ಮತ್ತೆ ಹ್ಯಾಗಿದೀಯಾ? ಇನ್ನೊಂದು ಪರೀಕ್ಷೆ ಮುಗಿದರೆ ಆಯ್ತು. ಮತ್ತೆರಡು ತಿಂಗಳು ಓದಿನ ಜಂಜಾಟಗಳಿರಲ್ಲ. ಮತ್ತೆ ಏನಿದ್ದರೂ ನಿನ್ನ ನೆನಪುಗಳ ಜತೆ ಪಯಣ. ಅಲ್ಲಿ ನೀ ಮುಡಿಸಿದ ಮೊಳ ಉದ್ದದ ಜಾಜಿ ಮಲ್ಲಿಗೆ. ಅದರ ನಡುವೆ ಒಂದು ಚೆಂಗುಲಾಬಿ, ಮೂಗಲ್ಲಿ ಹೊಳೆಯುವ ಮೂಗುತಿ. ಇದನ್ನೆಲ್ಲಾ ನೋಡಿ ನೀ ಕೇಳಬೇಕು ಏನೇ ವಯ್ಯಾರದ ಗೊಂಬೆ ಮರೀ ಅಂತ.

ಆ ಕ್ಷಣದ ನಿರೀಕ್ಷೆಯಲ್ಲಿ ನಾನಿರ್ತೀನಿ. ನಾಡಿದ್ದು ಶುಕ್ರವಾರ ಪರೀಕ್ಷೆ ಮುಗಿಯುತ್ತೆ. ಈಗ ಪರೀಕ್ಷೆನೆಪದಲ್ಲಿ ಫೋನ್ ಮಾಡದೇ ಕುಳಿತಿದ್ದೀಯಲ್ಲಾ. ಅದನ್ನು ಬಡ್ಡಿ ಸಮೇತ ಪರೀಕ್ಷೆ ಮುಗಿದ ನಂತರ ತೀರಿಸಬೇಕು. ಅಲ್ಲಿ ಹಗಲು ರಾತ್ರಿಯ ಪರಿವೆಯೇ ನಮ್ಮ ಪಾಲಿಗೆ ಇರುವುದಿಲ್ಲ.

ಅಂದ ಹಾಗೆ ಮುಂದಿನ ತಿಂಗಳು ನಿನ್ನ ಊರಿಗೆ ಬರುತ್ತಾ ಇದ್ದೀನಿ. ಸದ್ಯಕ್ಕೆ ನೀನು ಸಂಭ್ರಮಪಟ್ಟುಕೊಳ್ಳಲು ಇಷ್ಟು ಸಾಕು. ಮೂರ್ಖಳನ್ನು ಮಾಡಿದ ಮೂರ್ಖ ಹುಡುಗನ ಪ್ರೀತಿಯಲ್ಲಿರುವ..

ನಿನ್ನ ಕನಸು ಕಾಣುವ ಹುಡುಗಿ