Tuesday, November 11, 2008

ಬೆಸುಗೆ..ಜೀವನವೆಲ್ಲಾ ಸುಂದರ ಬೆಸುಗೆ.. ನೀನಿದ್ದರೆ ಮಾತ್ರ ನನ್ನ ಜೊತೆಗೆ...

ಸ್ವೀಟ್ ಹಾರ್ಟ್,
ಈ ಬಂಧನಾ ಜನುಮ ಜನುಮದ ಅನುಬಂಧನ..
ನಮ್ಮ ಪ್ರೀತಿಯ ಬಗೆಗೆ ಹೇಳಲು ಇದಕ್ಕಿಂತ ಬೇರೆ ಸಾಲುಗಳು ಬೇಕಾ. ಎಲ್ಲೋ ಒಂದು ಕಡೆ ಇದ್ದವಳು ತೆಕ್ಕೆಗೆ ಬಂದು ಬಿದ್ದಾಗ ನಿನಗೆ ೨೨ ವರ್ಷ ಕಳೆದು ೨೮ ದಿನವಾಗಿತ್ತು. ಆಗಿನ್ನೂ ನಿನ್ನಲ್ಲಿ ಹುಡುಗಿಯರ ವಯೋಸಹಜ ನಾಚಿಕೆ ಮಾಸಿರಲಿಲ್ಲ.

ಆದರೆ, ಅಂದು ಆರಂಭವಾದ ಪ್ರೀತಿಯ ತುಂತುರು ಹನಿ ಇಂದು ಬೆಳೆದು ಹೆಮ್ಮರವಾದಾಗ ಅದರ ನೆನಪುಗಳು ಸುಂದರ ರಮಣೀಯ. ಪ್ರೀತಿಯ ಆರಂಭದಲ್ಲಿ ಕೋಪ ಬಂದರೆ ನಿನ್ನದು ರೌದ್ರ ಭಾವ. ಆದರೆ ದಿನಕಳೆದಂತೆ ನೀನು ರೌದ್ರಭಾವ ಮಾಯವಾಗಿ ಶಾಂತ ಸ್ವರೂಪಿಯಾದೆ. ಪ್ರೀತಿಯನ್ನು ಮೊಗೆದು ಕೊಡಲಾರಂಭಿಸಿದೆ.
ಪ್ರೀತಿಯ ಸೆಲೆಯಲ್ಲಿ ಮಿಂದ ನಾವು ಭೇಟಿಯಾಗದ ಜಾಗಗಳಿಲ್ಲ. ಹೋಗದ ಪ್ರವಾಸಿ ತಾಣಗಳಿಲ್ಲ. ಪೋಷಕರು ಯಾವುದೇ ರೀತಿಯ ಲಕ್ಷ್ಮಣ ರೇಖೆಯನ್ನೂ ಹಾಕಿರಲಿಲ್ಲ. ನೀವು ನಿಮ್ಮ ದಾರಿ. ಪರಿಶುದ್ಧ ಪ್ರೇಮವಿರಲಿ, ವಂಚನೆ ಎಂಬ ಪದ ನಿಮ್ಮ ನಡುವೆ ಬಾರದಿರಲಿ ಎಂದು ನಮ್ಮ ಪ್ರೀತಿಗೆ ತಥಾಸ್ತು ಎಂದವರು ಹೆತ್ತವರು.
ನೀನೂ ಅಷ್ಟೇ ನಿನ್ನ ಹುಚ್ಚಾಟಗಳನ್ನು ಬಿಟ್ಟಿಲ್ಲ. ಇಂದಿಗೂ ಅದೇ ನಿನ್ನ ತುಂಟತನ ಉಳಿಸಿಕೊಂಡು ಬಂದಿದ್ದೀಯಾ. ಹುಡುಗಿಯರು ಪ್ರೀತಿಯ ಓಘಕ್ಕೆ ಬಿದ್ದ ನಂತರ ಬದಲಾಗುತ್ತಾರಂತೆ. ಆದರೆ ನಿನ್ನಲ್ಲಿ ಬದಲಾವಣೆ ಕಂಡಿಲ್ಲ.
ಬಹುಶಃ ಇದೇ ಒಂದು ಕಾರಣ ನಮ್ಮ ಬೆಸುಗೆಗೆ ನಂದಾದೀಪದಂತಹ ಬೆಳಕು ನೀಡಿರಬೇಕು. ಇಂದಿಗೂ ನಿನ್ನನ್ನು ಅದೇ ಕಾರಣಕ್ಕಾಗಿ ಹಟಕ್ಕೆ ಬಿದ್ದು ಪ್ರೀತಿಸುತ್ತಿದ್ದೇನೆ. ಇದೇ ಕಾರಣಕ್ಕೆ ನಿನಗೆ ನಾನು ಮತ್ತೂ ಇಷ್ಟವಾಗುತ್ತೇನೆ!!!

ಎಂದೆಂದಿಗೂ ನಿನ್ನವ.

Tuesday, October 21, 2008

ಮನದ ತುಂಬ ನಿನ್ನ ಪ್ರೀತಿ ಬೆಳಕು ಅದು ಸದಾ ಉರಿಯಲು ಜತೆಗೆ ನೀನಿರಬೇಕು...

ಮುದ್ದು ಮರಿ
ಹಬ್ಬಗಳ ಹಿಂದೆ ಹಬ್ಬಗಳ ಸಾಲು.
ಮನೆಯಲ್ಲಿ ಎಲ್ಲರೂ ದೀಪಾವಳಿಯ ಸಿದ್ಧತೆಯಲ್ಲಿದ್ದರೆ ಮನದಲ್ಲಿ ಬಾಳ ಬೆಳಕಿನ ಚಿತ್ತಾರ. ಮನೆಯಲ್ಲಿ ಎಲ್ಲರೂ ಹಣತೆಯ ಬೆಳಗುವ ಸಂಭ್ರಮದಲ್ಲಿದ್ದರೆ ನನ್ನಲ್ಲಿ ನಿನ್ನ ಮನ ಬೆಳಗುವ ಸಂಭ್ರಮ.
ಅಷ್ಟಕ್ಕೂ ಈ ಭಾಗ್ಯ ಯಾರಿಗುಂಟು ಹೇಳು. ದೀಪಾವಳಿಗೆ ಮುನ್ನಾ ದಿನದ ಭಾನುವಾರ ನಮ್ಮ ಮದುವೆಗೆ ಮುನ್ನುಡಿ. ಆ ದಿನ ನೀನು ರೇಷ್ಮೆ ಸೀರೆಯನುಟ್ಟು ಕೊರಳಲಿ ಒಂದೆಳೆ ಸರ ಧರಿಸಿ ಉಂಗುರ ಧಾರಣೆಗೆ ಬೆರಳೊಡ್ಡುವಾಗ ನಿನ್ನ ಕೆನ್ನೆಯಲ್ಲಿ ಸದಾಕಾಲ ಕಾಡುವ ಆ ಮೋಹಕ ಗುಳಿ ಮೂಡಬೇಕು. ಅಲ್ಲಿಗೆ ಇಷ್ಟು ವರ್ಷಗಳ ಕಾಲ ಕದ್ದು ಮುಚ್ಚಿ ಮಾಡಿದ ಪ್ರೀತಿಗೆ, ಕಟ್ಟಿಕೊಂಡಿದ್ದ ಸಾವಿರ ಸಾವಿರ ಕನಸುಗಳಿಗೆ ಸಾರ್ಥಕತೆಯ ಧನ್ಯತೆಯ ಕ್ಷಣ. ಪ್ರೀತಿ ಕೊನೆ ತನಕ ಉಳಿಯೋದಿಲ್ಲ ಎಂಬ ಆತಂಕ ಇಟ್ಟುಕೊಂಡೇ ಪ್ರೀತಿಸಿ ಒಂದಾಗುತ್ತಿರುವವರು ನಾವು. ಅಷ್ಟಕ್ಕೂ ನಾವು ಮಾಡಿಕೊಂಡ ಜಗಳವೆಷ್ಟೋ, ಹುಸಿ ಮುನಿಸುಗಳೆಷ್ಟೋ ಅಲ್ವಾ?
ಕೆಲವರು ನಿನ್ನನ್ನು ಎಷ್ಟು ಪ್ರೀತಿಸ್ತೀಯಾ ಎಂದು ಹಂಗಿಸಿದರು. ಅವರೆಲ್ಲರಿಗೂ ಕೊಡುವ ಉತ್ತರವೊಂದೇ.
ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೆ
ಉಳಿಯಲಾರೆನೂ

ಇನ್ನು ವಿನಾಕಾರಣ ಜಗಳ ತೆಗೆಯುವ ಮಾತಿಲ್ಲ. ಇನ್ನೇನಿದ್ದರೂ ಸಂಭ್ರಮ. ಮದುವೆ ಬಗ್ಗೆ ಚಿಂತೆ ಬಿಡು. ಅದೇ ನಿದ್ದರೂ ಹಿರಿಯರ ನಿರ್ಧಾರ. ಇಷ್ಟು ದಿನ ಕಾದವರಿಗೆ ಇನ್ನೂ ಕೆಲವು ದಿನಗಳ ಕಾಲ ವಿರಹ ತಾಳುವ ಶಕ್ತಿ ಬೇಡವೇ! ದೀಪಾವಳಿ ದಿನ ರಾತ್ರಿ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಪೂಜೆ ಸಲ್ಲಿಸಿ ಆ ದೀಪದಿಂದ ಹಣತೆಗೆ ಬೆಳಗಿ ಮನೆಯ ಮುಂದೆ ಸಾಲಾಗಿ ಜೋಡಿಸಿಟ್ಟಿರುವ ಹಣತೆಗಳಿಗೆ ದೀಪ ಹಚ್ಚುವಾಗ ನಿನ್ನ ಬೆರಳಲ್ಲಿ ನಾ ಹಾಕಿದ ವಜ್ರದ ಉಂಗುರ ಮಿಂಚುತ್ತಾ ಇರುತ್ತೆ. ಅಷ್ಟರ ಮಟ್ಟಿಗೆ ನಾನು ಧನ್ಯ.

ದೀಪದ ಬೆಳಕಲ್ಲಿ ನಿನ್ನ ಕಂಡವ

Tuesday, September 23, 2008

ನಿನ್ನ ಪ್ರೀತಿಯಲ್ಲಿ ನಾನು ನನ್ನನ್ನೇ ಪ್ರೀತಿಸಿದೆ ನಿರಾಶೆ ಒಗೆದು ಪ್ರೀತಿ ತುಂಬಿ ಬದುಕಿದೆ..

ಮುದ್ದು ಹುಡುಗಾ,
ನಿನ್ನ ಫೋನ್ ಕಾಲ್ ಅಂತೂ ನನ್ನ ಪಾಲಿನ ಕನಸಿನ ಮಾತು. ಆದರೆ ಈ ಹಿಂದೆ ವಾರಕ್ಕೆರಡು ಪತ್ರ ಆದರೂ ಬರೀತಾ ಇದ್ದೆ. ನಾನು ಅದಕ್ಕಾಗಿಯೇ ಹಟ ಹಿಡಿದು ಕಾಯ್ತಾ ಇದ್ದೆ.

ಆದ್ರೆ ಕಳೆದ ಒಂದು ತಿಂಗಳಿನಿಂದ ನೀನೂ ಕೈಕೊಟ್ಟೆ. ಪ್ರತಿನಿತ್ಯ ಮನೆಗೆ ಪೋಸ್ಟ್ ಬರುವಾಗ ಅದರಲ್ಲಿ ಒಂದು ಪತ್ರದ ಮೇಲೆ ನೀನು ಬರೆದ ನನ್ನ ಮುದ್ದಾದ ಹೆಸರು ಇರುತ್ತದೆ ಎಂದು ಕಾಯುತ್ತಿದ್ದವಳಿಗೆ ಪ್ರತಿನಿತ್ಯ ನಿರಾಸೆ.

ಕೆಲ ವರ್ಷಗಳ ಹಿಂದೆ ಎಲ್ಲೋ ಒಂದು ಕಡೆ ಕಳೆದು ಹೋಗುತ್ತಿದ್ದವಳನ್ನು ಮರುಭೂಮಿಯಲ್ಲಿ ಸಿಗುವ ಓಯಸಿಸ್ ರೀತಿ ಬಂದು ಆವರಿಸಿಬಿಟ್ಟವನು. ಆದರೆ, ನೀನು ಬಂದು ಹೋದ ಮೇಲೆ ಎಷ್ಟು ಬದಲಾವಣೆ. ಮೊದಲೆಲ್ಲಾ ನನ್ನ ಬಗೆಗೇ ನನಗೆ ಒಂದು ತಿರಸ್ಕಾರದ ಭಾವ ಇತ್ತು. ಯಾಕೋ ಬದುಕಿನಲ್ಲಿ ನಾನು ಅದೃಷ್ಟಹೀನಳು ಅಂದುಕೊಳ್ಳುತ್ತಾ ದಿನಗಳನ್ನು ಕಳೆಯುತ್ತಿದ್ದೆ.

ಹೀಗೆ ನಿತ್ಯ ಎಲ್ಲವನ್ನೂ ಕಳೆದು ಕೊಳ್ಳುತ್ತಿದ್ದವಳಿಗೆ ಅಚಾನಕ್ ಆಗಿ ನೀ ಸಿಕ್ಕಿದೆ. ಬಹುಶಃ ಅಂತಹ ಒಂದು ಸುಸಂದರ್ಭದಲ್ಲಿ ನನ್ನ ಕಷ್ಟಗಳನ್ನು ಹೇಳಿಕೊಳ್ಳಲು ನೀನು ಸಿಗದೇ ಹೋಗಿದ್ದರೆ ಇಂದು ಏನಾಗುತ್ತಿತ್ತೋ?

ಆದರೆ ನಿನ್ನ ಪ್ರೀತಿ ಲಭಿಸುತ್ತಿದ್ದಂತೆ ನಾನು ನನ್ನನ್ನೇ ಪ್ರೀತಿಸಿದೆ. ಆಮೇಲೆ ನನ್ನವರು ಅಂತ ನಾನು ಯಾರನ್ನು ಇಷ್ಟು ವರ್ಷ ದ್ವೇಷಿಸುತ್ತಿದ್ದೆನೋ ಎಲ್ಲರೂ ಬೇಕು.

ನಾನು ಎಂಬುದರ ಬದಲಾಗಿ ನಾವು ಎನ್ನುವುದೂ ಬೇಕು ಎಂದು ಮನಸು, ಹೃದಯ ಎರಡೂ ಹೇಳಲಾರಂಭಿಸಿತ್ತು. ಆದರೆ, ಹೃದಯದ ಪಿಸುಮಾತುಗಳನ್ನು ನಿನ್ನಲ್ಲಿ ಹೇಳಿಕೊಳ್ಳಲು ಏನೋ ಒಂದು ಮುಜುಗರ.

ಆದರೆ ಅವುಗಳನ್ನೆಲ್ಲಾ ಅರ್ಥೈಸಿದವನಂತೆ ನೀನು ಜತೆಗಾರನಾದೆ. ಮತ್ತೆ ಏನೆಲ್ಲಾ ನಡೆಯಿತು ಅದು ನಿನಗೆ ಗೊತ್ತೇ ಇದೆ. ಇಷ್ಟೆಲ್ಲಾ ಆದ ಮೇಲೂ ನಿನ್ನ ಹುಸಿ ಮುನಿಸೇಕೆ. ಸುಮ್ಮನೆ ಪತ್ರ ಬರಿ. ಮತ್ತೆ ಮುಂದಿನ ದೀಪಾವಳಿಗೆ ನಮ್ಮ ಮದುವೆ ನಿಶ್ಚಿತಾರ್ಥವಂತೂ ಇದ್ದೇ ಇದೆಯಾಲ್ಲಾ...!!!
ನಿನ್ನ ಮುದ್ದಿನ ಹುಡುಗಿ

Wednesday, July 23, 2008

ಹನಿ ಹನಿ ಮಳೆ ಬಿದ್ದಾಗ್ಲೆಲ್ಲಾ ಚಿಗುರುತ್ತೆ ನಮ್ಮ ಪ್ರೀತಿ..

ಕೊನೆಗೂ ಮಳೆಗಾಲ ಆರಂಭವಾಗಿದೆ ನೋಡು. ಈ ಮಳೆಗಾಲವೇ ಹೀಗೆ, ಎಂದೋ ಬಂದು ಹೋಗುತ್ತೆ. ನೀನು ನನ್ನ ಕಾಯಿಸಿದಂತೆ. ಆದರೆ ಗೆಳತೀ, ಆ ಮಳೆ ನಿಂತು ಹೋದ ಮೇಲೆ ಬೀಳುವ ಹನಿಯನ್ನು ನೋಡುತ್ತಾ ನಾನು ನಿನ್ನಲ್ಲೇ ಕಳೆದು ಹೋಗುತ್ತೇನೆ. ಆದರೆ ಮೊನ್ನೆ ಮಳೆ ಬಂದು ಹೋದರೂ ನಿನ್ನ ಫೋನ್ ಕಾಲ್ ಇಲ್ಲ, ಮೊಬೈಲ್ ರಿಂಗಣಿಸಲೂ ಇಲ್ಲ. ಯಾಕೆ ಹೇಳಲಾರೆಯಾ? ಮೊದಲೆಲ್ಲಾ ಮಳೆ ಬಂದರೆ ಫೋನ್ ಮಾಡದೇ ಇದ್ದ ದಿನಗಳೇ ಇರಲಿಲ್ಲ.

ಮಳೆಗಾಲಕ್ಕೂ ನಮ್ಮ ಪ್ರೀತಿಗೂ ಅವಿನಾಭಾವ ಸಂಬಂಧ. ನಮ್ಮ ಪ್ರೀತಿ ಹುಟ್ಟಿದ್ದು ಇಂಥದೇ ಒಂದು ಮಳೆಗಾಲದ ಮುಸ್ಸಂಜೆ ಹೊತ್ತಿನಲ್ಲಿ. ಅಂದು ನೀನು ಕಾಲೇಜು ಮುಗಿಸಿ ಮನೆಗೆ ಹೊರಟಿದ್ದೆ. ನಡುವೆ ಸುರಿದಿತ್ತು ಬಿರುಸಾದ ಮಳೆ. ಹಿಂದಿನಿಂದ ನಾನೂ ಮನೆಗೆ ಹೊರಟಿದ್ದೆ. ಆದರೆ ಮಳೆಯ ರಭಸಕ್ಕೆ ಬೆದರಿ ನಾವು ಮನೆಯ ದಾರಿಯಲ್ಲಿರುವ ಆ ಮರದ ಕೆಳಗೆ ನಿಂತು ಮಳೆ, ಅದರ ಅಬ್ಬರ, ತಂಗಾಳಿ, ನಡುವೆ ಮೂಡುವ ಮಿಂಚು, ಬೆನ್ನ ಹಿಂದೆಯೇ ಬರುವ ಸಿಡಿಲಿನ ಅಬ್ಬರಗಳ ಬಗ್ಗೆ ಇಬ್ಬರೂ ಮನಸಾರೆ ಮಾತನಾಡಿದ್ದೆವು. ಸೂರ್ಯ ಪಡುವಣದಲ್ಲಿ ಮುಳುಗಲಾರಂಭಿಸಿದ್ದ. ಆತನಿಂದ ಹೊರಟ ಕೆಂಬಣ್ಣದ ರಶ್ಮಿ ನಿನ್ನ ಮುಖವನ್ನು ಸೋಕಿ ಅದ್ಭುತ ಚಿತ್ರಣವನ್ನು ಸೃಷ್ಟಿಸಿತ್ತು. ಅದನ್ನು ಅಂದು ನನ್ನ ಹೃದಯದಲ್ಲಿ ಸೆರೆ ಹಿಡಿದು ಅದಕ್ಕೊಂದು ಸುಂದರ ರೂಪ ಕೊಟ್ಟಿದ್ದೆ. ಮುಂದಿನ ಮಳೆಯ ವೇಳೆಗೆ ನಾನು ನಿನ್ನ ಹೃದಯದರಸನಾಗಿದ್ದೆ. ಒಂದೇ ಕೊಡೆಯ ಅಡಿಯಲ್ಲಿ ನಿಂತು ಇಬ್ಬರೂ ಹೆಗಲಿಗೆ ಹೆಗಲು ತಾಕಿಸಿ ನಡೆಯುತ್ತಾ ಸಾಗಿದ್ದೆವು.

ಆದರೆ ೬ ತಿಂಗಳ ಹಿಂದೆ ನೀನು ಕೆಲಸಕ್ಕೆಂದು ಹೊರಟು ನಿಂತವಳು ಯಾಕೋ ಎಲ್ಲವನ್ನೂ ಮರೆತ ಹಾಗಿದೆ. ಅದಕ್ಕೆ ಮಳೆ ಆರಂಭವಾದ ಈ ದಿನದಲ್ಲಿ ನಿನಗೆ ಮತ್ತೆ ಎಲ್ಲವನ್ನೂ ನೆನಪಿಸುತ್ತಿದ್ದೇನೆ. ಏನಕ್ಕೂ ಪತ್ರ ಲಭಿಸಿದ ತಕ್ಷಣ ಫೋನ್ ಮಾಡು.

ಮಳೆಯಲ್ಲಿ ಜತೆ ಇದ್ದವ

Thursday, July 10, 2008

ನಮ್ಮ ಪ್ರೀತಿ ಕಂಡು ಎಲ್ರಿಗೂ ಅಸೂಯೆ ನಮ್ ಪ್ರೀತಿ ಇರೋದೆ ಹಾಗೆ..

ಮುದ್ದು ಮನದನ್ನೆಗೆ,

ಕಾಲೇಜು ಆರಂಭದ ದಿನ ನಿನ್ನ ಪ್ರೀತಿಯಿಂದ ಎದಿರುಗೊಳ್ಳಬೇಕು. ನನ್ನ ಮುದ್ದು ಹುಡುಗಿಗೆ ಆಕೆ ಮರೆಯಲಾರದ ಸ್ವಾಗತ ನೀಡಬೇಕು ಎಂದು ಕಾಲೇಜಿಗೆ ಎಂದಿಗಿಂತ ಮೊದಲು ಬಂದವನಿಗೆ ಕಾದಿದ್ದು ನಿರಾಶೆ. ನಾನು ಬರೋದಿಕ್ಕೆ ಮೊದಲು ನೀನೇ ಬಂದು ಸ್ವಾಗತಿಸುತ್ತೀಯಾ ಎಂದು ಊಹಿಸಿರಲಿಲ್ಲ.

ಆದರೆ ನೀನು ನಿನ್ನ ಪ್ರೀತಿಸುವ ಈ ಹೃದಯಕ್ಕಾಗಿ, ಎರಡು ತಿಂಗಳ ಕಾಲ ನಿನ್ನ ಅಗಲಿಕೆಯಿಂದ ಯಾವತ್ತು ಬರುತ್ತೀಯಾ ಎಂದು ಕಾದು ಕುಳಿತ ಚಾತಕಪಕ್ಷಿಗೆ ಸಮಾಧಾನ ನೀಡಲು ಬಂದಂತೆ ತೋರಲಿಲ್ಲ. ಅದಕ್ಕಿಂತಲೂ ಹೆಚ್ಚಿನ ಪ್ರೇಮದ ಉತ್ಕಟತೆಯಿತ್ತು. ಗೆಳತೀ ಪ್ರೇಮ ಎಂದರೆ ಈ ಪರಿ ಕಾಡುತ್ತೆ ಎಂದು ನನಗೆ ನಿಜವಾಗಿ ಅರ್ಥವಾದದ್ದು ನಿನ್ನ ಬಿಟ್ಟು ಉಳಿದ ಈ ಎರಡು ತಿಂಗಳಿನಲ್ಲೇ...

ಪ್ರತಿ ನಿತ್ಯ ನೆನಪುಗಳು ಕಾಡುತ್ತಿದ್ದವು, ನಿನ್ನ ಕಣ್ಣಿನ ಸೆಳೆತ, ತೀಡಿದ ಹುಬ್ಬು, ಸಿಟ್ಟಲ್ಲಿ ಕಾಣಿಸುವ ರೌದ್ರಭಾವ ಇವೆಲ್ಲ ಇಲ್ಲದಿರೆ ಈ ಜೀವನ ಇಷ್ಟೇನಾ ಎಂದೆನಿಸಲು ಆರಂಭವಾಗಿದ್ದು ಆಗಲೇ. ಅದಕ್ಕೇ ಮೊನ್ನೆ ಮೊದಲ ದಿನ ನಿನಗಾಗಿ ಹಾಡಿದ್ದು,

ಹೊಸ ಬಾಳಿಗೆ ನೀ ಜತೆಯಾದೆ,
ಹೊಸ ಆನಂದ ನೀನಿಂದು
ತಂದೆ

ಜತೆಯಲ್ಲಿದ್ದರೆ ಅಲ್ಲಿ ನೋವು ಯಾತನೆಗಳಿಗೆ ಜಾಗವೇ ಇಲ್ಲ. ಎಂದೋ ಕೇಳಿದ ಹಳೆಯ ಹಾಡುಗಳನ್ನು ನಿನ್ನ ಜತೆ ಕುಳಿತು ಕೇಳುವುದೆಂದರೆ ಅದಕ್ಕಿಂತ ಉತ್ತಮ ವಿಷಯ ಬೇರೆ ಇಲ್ಲ.
ಎಲ್ಲರೂ ಕಾಫಿ ಕ್ಲಬ್ ಅಂತ ಹೊರಟರೆ, ನಾವು ಹೋಗುವುದು ನಮ್ಮೂರ ಬೆಟ್ಟದ ತುದಿಗೆ. ಇದೇ ಅಲ್ಲವೇ ನಮ್ಮನ್ನು ಎಲ್ಲರಿಂದ ಭಿನ್ನವಾಗಿಸಿದ್ದು. ಎಲ್ಲರಿಗೂ ನಮ್ಮ ಪ್ರೀತಿಯ ಬಗ್ಗೆ ಅಸೂಯೆ. ನಾವು ಪ್ರೀತಿಸುವುದೇ ಹಾಗೆ. ಪ್ರೀತಿಯನ್ನು ಕದ್ದು ಮುಚ್ಚಿ ಮಾಡುವುದಿಲ್ಲ. ಯಾರ ಹೆದರಿಕೆಯೂ ಇಲ್ಲ. ನೀನು ಜತೆಯಲ್ಲಿದ್ದರೆ ಬೇರೆ ಯಾರ ಹಂಗೂ ಇಲ್ಲ.

ನಗುವ ನಯನ, ಮಧುರ ಮೌನ
ಮಿಡಿವಾ ಹೃದಯಾ ಇರೆ ಮಾತೇಕೆ?
ಹೊಸ ಭಾಷೆಯಿದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ?

ಅದಿರಲಿ, ಮುಂದಿನ ಪ್ರವಾಸವೆಲ್ಲಿಗೆ ಹೋಗೋಣ..
ನಿನ್ನ ಕಾಡುವ ಹುಡುಗ.

Wednesday, June 25, 2008

ದೇವಸ್ಥಾನಕ್ಕೆಂದು ಸುಳ್ಳು ಹೇಳಿ ಬಂದೆ.. ನೀನು...‘ನೀನೇ ನನ್ನ ದೇವತೆ ’ ಅಂದೆ..!


ಮೈ ತುಜ್‌ಸೇ ಮಿಲ್‌ನೇ ಆಯೀ,
ಮಂದಿರ್ ಜಾನೇ ಕೇ ಬಹಾನೇ
ಬಾಬುಲ್ ಸೇ ಜೂಠ್ ಬೋಲೀ,
ಸಖಿಯೋಂ ಸೇ ಜೂಠ್ ಬೋಲೀ
ಮೈ ಬನ್‌ಗಯೀ ಬಿಲ್‌ಕುಲ್ ಬೋಲೀ

ಹೇಗಾದ್ರೂ ಮಾಡಿ ನಿನ್ನ ಭೇಟಿ ಮಾಡಬೇಕು ಎಂದು ಹೊರಟವಳು ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ, ಆಪ್ತ ಸಖಿಯರಲ್ಲಿ ಸುಳ್ಳು ಹೇಳಿ ಬಂದೆ. ಯಾಕೋ ಗೊತ್ತಿಲ್ಲ ನಿನ್ನನ್ನು ಕಾಣಬೇಕೆಂದರೆ ಮನದಲ್ಲಿ ತಲ್ಲಣ, ಕಂಪನ. ಹೃದಯದಲ್ಲಿ ಕಲರವ, ಮತ್ತೆ ಕೆಲವೊಮ್ಮೆ ರೋಮಾಂಚನ. ಒಟ್ಟಿನಲ್ಲಿ ನಿನ್ನನ್ನು ನೋಡುವಾಗ ನಾನು ನಾನಾಗಿರುವುದಿಲ್ಲ ಎನ್ನುವುದು ಮಾತ್ರ ನಿಜ. ನಿನ್ನ ಕಂಡು ತೋಳು ಸೇರುವ ತನಕ ಮನದಲ್ಲಿ ಏನೇನೋ ಆಸೆಗಳ ರಂಗಿನಾಟ.

ಡಿಗ್ರಿಯಲ್ಲಿ ಜತೆಗಿದ್ದ ಆಪ್ತ ಸಖಿಯರೆಲ್ಲಾ ಇಂದು ಬೇರೆ ಬೇರೆ ಕಾಲೇಜುಗಳಿಗೆ ಸೇರಿದ್ದಾರೆ. ಈಗ ಸಖಿಯರಿಲ್ಲದ ನಾನು ಏಕಾಂಗಿ. ಹಿಂದೆಲ್ಲಾ ಆದರೆ ಅವರೆಲ್ಲರೂ ನಿನ್ನ ಹೆಸರು ಹೇಳಿ ತಮಾಷೆ ಮಾಡಿದ್ದೇನು. ಆದರೆ ಈಗ ಏಕಾಂಗಿತನವನ್ನು ಮರೆಮಾಚಲು ನೆನಪಿನಂಗಳದ ಮೊರೆ ಹೋಗುತ್ತೇನೆ.

ಇಂದಿಗೂ ನೆನಪಿದೆ. ಅಂದು ನಾನು ದೇವರ ದರ್ಶನಕ್ಕಾಗಿ ನಿನ್ನೂರಿನ ದೇವಸ್ಥಾನಕ್ಕೆ ಬಂದಿದ್ದೆ. ಆದರೆ ದೇವಸ್ಥಾನದಲ್ಲಿ ದೇವರಿಗೆ ಕೈಮುಗಿದು ಬೇಡುತ್ತಿರುವಾಗ ನನ್ನ ಮುಂಭಾಗದಲ್ಲಿ ನೀನು ನನ್ನ ಮುಖಾರವಿಂದವನ್ನೇ ನೋಡುತ್ತಿದ್ದೆ. ಆಗ ಪ್ರಾರಂಭವಾಗಿತ್ತು ಪ್ರೇಮಪೂಜೆ. ಅಂದು ನಿನ್ನ ತುಂಟತನದಿಂದಾಗಿ ನಿನ್ನ ಮೇಲೆ ಅಸಾಧ್ಯ ಸಿಟ್ಟು ಬಂದಿತ್ತು.

ಆದರೆ ಅಂದು ಅಮ್ಮನಲ್ಲಿ ನಿಜ ಹೇಳಿ ದೇವಸ್ಥಾನಕ್ಕೆ ಬಂದಿದ್ದೆ. ಆದರೆ ಇಂದು ಅದೇ ನೆಪವೊಡ್ಡಿ ನಿನ್ನ ಭೇಟಿಗಾಗಿ ಆಗಮಿಸುತ್ತಿದ್ದೇನೆ.
ಅಷ್ಟಕ್ಕೂ ನಿನ್ನಲ್ಲಿ ನನಗೆ ಇಷ್ಟವಾಗಿದ್ದೇನು ಎಂದು ಕೇಳಿದರೆ ಅದಕ್ಕೆ ಉತ್ತರ ನೀಡಲು ಅಸಾಧ್ಯ. ನೀನು ಇಷ್ಟವಾಗದೇ ಇರಲು ಅಲ್ಲಿ ನನಗೆ ಕಾರಣಗಳೇ ಇರಲಿಲ್ಲ. ಎಲ್ಲೋ ಕಳೆದು ಹೋಗಲಿದ್ದವಳನ್ನು ಎತ್ತಿ ಇಂದು ಈ ಸ್ಥಿತಿಗೆ ತಲುಪಿಸಿದ್ದೀಯ. ಮುಂದಿನ ವಾರ ದೇವಸ್ಥಾನಕ್ಕೆ ಬರ್ತೀನಿ. ನೀನು ಬರ್ತೀಯಾ ತಾನೇ?


ನಿನ್ನವಳು