Wednesday, August 15, 2007

ಪ್ರೀತಿಸುವ ಮನಸ್ಸನ್ನು ಸತಾಯಿಸೋದ್ರಲ್ಲೂ ಒಂದು ರೀತಿಯ ಖುಷಿ ಇದೆ..!!

ಮುದ್ದುಮರೀ,

ಸಾರಿ, ಸಾರಿ, ಸಾರಿ ಕಣೇ. ನಾನು ಬರುವುದು ಎರಡು ದಿನ ತಡವಾಯ್ತು ಅಂತ ಅಷ್ಟು ಸಿಟ್ಟು ಮಾಡ್ಕೊಂಡು ಬಿಡೋದಾ? ನಿನ್ನನ್ನು ನೋಡುವ ಸಂಭ್ರಮದಲ್ಲಿ ಕೈಯಲ್ಲಿ ಕೆಂಗುಲಾಬಿ ಹಿಡಿದುಕೊಂಡು ಬಂದರೆ ನಿನ್ನ ಕೋಣೆಯಲ್ಲಿ ಮುಖವುಬ್ಬಿಸಿ ಕುಳಿತುಕೊಂಡಿದ್ದರೆ ನಿನ್ನ ಪ್ರೀತಿಸುವ ಈ ಪುಟ್ಟ ಹೃದಯಕ್ಕೆ ಹೇಗಾಗಬೇಡ ಹೇಳು.

ನಾನು ಊರಿಗೆ ಬರುತ್ತಿದ್ದಂತೆ ನಿನ್ನಮ್ಮ ಫೋನ್ ಮಾಡಿದ್ಳು. ನೀನು ನಂಗೋಸ್ಕರ ಭಾರೀ ನಿರೀಕ್ಷೆಯಿಂದ ಕಾಯ್ತಾ ಇದ್ದೀಯಂತ ಹೇಳಿ ನಿನ್ನ ಸತಾಯಿಸ್ಬೇಡ, ಸಿಟ್ಟು ಮಾಡಿದ್ರೆ ಭಾರೀ ಡೇಂಜರ್ ಅಂತಾನೂ ಹೇಳಿದ್ಳು. ಆದರೆ ಪ್ರೀತಿಗೆ ಬಿದ್ದ ಮನಸ್ಸು ಸತಾಯಿಸಿದ್ರೇ ಒಂದು ಥ್ರಿಲ್ ಅಂತ ಎರಡು ವಾರ ಬಿಟ್ಟು ಹೋಗೋಣ ಎಂದು ನಾನೇ ಪ್ಲಾನ್ ಹಾಕಿದೆ.

ನನಗೊತ್ತು ಕಣೇ ಪ್ರೀತೀಲಿ ನೀನು ತುಂಬಾ ಪೊಸೆಸಿವ್ ಅಂತ. ಮನವೊಲಿಸಿದರೂ ಕರಗದ ಕಟು ಹೃದಯಿ ನೀನು. ಆದರೆ ಹೇಗೋ ನನ್ನ ಪ್ರೀತಿಗೆ ಬಿದ್ದಿದ್ದೆ. ನಿನ್ನ ಕೋಪಾನ ತಣಿಸೋಕೆ ತಪ್ಪಾಯ್ತು ಮುದ್ದುಮರೀ, ಬಂಗಾರೀ ಅಂತಾ ಕೇಳ್ದೆ ಎಂದೂ ಒಲಿದುಕೊಂಡವಳಲ್ಲ ನೀನು.

ಮೊನ್ನೆ ನಿನ್ನ ಕೆನ್ನೆಯ ಜತೆ ಲಾಸ್ಯವಾಡುತ್ತಿದ್ದ ಮುಂಗುರುಳು, ಅದನ್ನು ದೂರ ಮಾಡಲು ಕೆನ್ನೆಯ ಮೇಲೆ ನಾಟ್ಯವಾಡುವ ಬೆರಳು, ನಗುವಾಗಲೂ ಕೋಪದಲ್ಲೂ ಗುಳಿಬೀಳುವ ಕೆನ್ನೆ ಇದನ್ನೆಲ್ಲಾ ನೋಡ್ತಿದ್ದಂತೆ ಇನ್ನು ನಿನ್ನ ಸತಾಯಿಸಬಾರದು ಅಂದ್ಕೊಂಡಿದ್ದೀನಿ.

ಮರೀ, ಇನ್ನೊಂದು ಆರು ತಿಂಗಳು, ಮತ್ತೆ ಹೇಗೂ ಜಂಟಿ ಜೀವನ ಆರಂಭ. ಆಗ ಇದಕ್ಕಿಂತಲೂ ಹೆಚ್ಚಿನ ಸಿಟ್ಟು ಬೇಕು. ಅದಿಲ್ಲಾಂದ್ರೆ ನೀನು ತುಂಬಾ ಬೋರಿಂಗ್ ಕಣೇ. ಸಿಟ್ಟಿಗಿಂತಲೂ ಹೆಚ್ಚಾಗಿ ಕೋಪದಲ್ಲಿ ಕೆನ್ನೆಯಲ್ಲಿ ಬೀಳುವ ಗುಳಿಗಳು ಅದೇ ಪ್ಲಸ್ ಪಾಯಿಂಟ್.

ಇನ್ನು ಆರು ತಿಂಗಳು. ಮತ್ತೆ ನೀನೇ ಇರ್‍ತೀಯಲ್ಲಾ ನನ್ನ ಜೀವದಾಸರೆಯಾಗಿ. ಅದುವರೆಗೆ ಕಾಯ್ತಾ ಇರು.

ನಿನ್ನ ಸಖ

ನಿನ್ನಿಂದ ಎಲ್ಲಾ ಬದಲಾಗಿದೆ...

ಅರಗಿಣಿ,

ಎಲ್ಲಿ ಮರೆಯಾಗಿ ಹೋದೆ. ಪ್ರತಿದಿನ ಕಾಲೇಜಿಗೆ ಬರುತ್ತಾ ಕ್ಲಾಸಿಗೆ ಕಾಲಿರಿಸುವ ಮುನ್ನವೇ ಹಾಯ್ ಎನ್ನುವ ನೀನು ಕಳೆದ ವಾರದಿಂದ ಪತ್ತೇನೇ ಇಲ್ಲ. ಎಲ್ಲಿದ್ದೀಯಾ?

ಹತ್ತಿರ ಇರುವಷ್ಟು ದಿನ ನಿರ್ಲಕ್ಷ್ಯದಿಂದ ಕಾಣುವ ವಸ್ತು ನಮ್ಮಿಂದ ದೂರಾದಾಗ ಅದಕ್ಕಾಗಿ ಚಡಪಡಿಸುತ್ತದೆ ಮನಸು. ನನ್ನ ಪರಿಸ್ಥಿತಿ ಹಾಗೇ ಆಗಿದೆ.

ನೀನು ಪರಿಚಯವಾದ ಕೆಲವೇ ದಿನಗಳಲ್ಲಿ ಜೀವನದ ಶಿಸ್ತಿನ ಸಿಪಾಯಿ ಆಗಿದ್ದೀನಿ. ಅದಕ್ಕೆ ನೀನೇ ಕಾರಣ. ಆಗ ಕೇವಲ ಗೆಳತಿಯಾಗಿ ಈ ಮಾತುಗಳನ್ನು ಹೇಳುತ್ತಿದ್ದೀ ಅಂದುಕೊಂಡಿದ್ದೆ. ಅದಕ್ಕೆ ಪ್ರೀತಿಯ ರೂಪವಿದೆ ಎಂದು ತಿಳಿಯಲೂ ತಿಂಗಳುಗಳ ಕಾಲ ಕಷ್ಟ ಪಟ್ಟ ಶತಪೆದ್ದ ನಾನು!

ಪ್ರತಿದಿನ ಅದೇ ಮಣ್ಣಿನ ರಸ್ತೆಯಲ್ಲಿ ನಡೆಯುತ್ತಾ ಕೈಗೆ ಕೈಗೆ ಸೇರಿಸಿ ನಮ್ಮ ಕನಸುಗಳನ್ನು ಕಟ್ಟಿ ಭವಿತವ್ಯದ ಬಗ್ಗೆ ಗರಿಬಿಚ್ಚಿದವರು ನಾವು. ಎಷ್ಟು ಸುಂದರ ದಿನಗಳವು. ಪ್ರತಿದಿನ ಅದೇ ಹಾದಿಯಲ್ಲಿ ತೆರಳಿದ ಕಾರಣ ಎಲ್ಲರಿಗೂ ಪರಿಚಯದವರು ನಾವು. ನಮ್ಮನ್ನು ದೂರದಿಂದ ನೋಡಿಯೇ ಪಿಸುಗುಟ್ಟುವವರು ಹಲವರು. ಈಗ ಕೆಲವು ದಿನಗಳಿಂದ ನೀನು ಜತೆಗಿಲ್ಲ ಎನ್ನುವ ನೋವಿನ ಜತೆಗೆ ಹೊರಗಿನವರ ಗುಸುಗುಸು ಬೇರೆ.

ಈ ಒಂದು ವರ್ಷದಲ್ಲಿ ನಿನ್ನಿಂದಾಗಿ ಎಷ್ಟೊಂದು ಬದಲಾವಣೆ. ಎಲ್ಲದರ ಮೇಲೆ ನಂಬಿಕೆಯನ್ನೇ ಕಳೆದುಕೊಂಡ ನನ್ನಲ್ಲಿ ನಂಬಿಕೆ ಬೀಜವನ್ನು ಬಿತ್ತಿ ಪ್ರೀತಿಯ ಅಮೃತಸಿಂಚನ ಮಾಡಿದವಳು ನೀನು. ನಿನ್ನ ನಡೆ ನುಡಿ, ಮುನಿಸು, ತುಂಟತನ ಎಲ್ಲವನ್ನೂ ಒಂದು ವಾರದಿಂದ ಮಿಸ್ ಮಾಡ್ಕೊಳ್ತಾ ಇದ್ದೀನಿ ಕಣೇ ಯಾವಾಗ ಬರ್‍ತೀಯಾ ಮತ್ತೆ ಕಾಲೇಜಿಗೆ.

ನಿನಗಾಗಿ ಕಾಯ್ತಾ ಇರುವ,
ಮನಸು.

ಮನವ ತೋಯಿಸಿದ ಮಳೆ ಹನಿಗಳು... ಕರೆದೊಯ್ದವು ಕನಸಿನ ಲೋಕಕ್ಕೆ..

ಆಗಂತುಕಾ,
ಏಕೋ ಏನೋ ನನ್ನಲ್ಲಿ ಹೊಸ ಭಾವವು ಮೂಡುತಿದೆ.

ಹೌದು ಕಣೋ ನಿನ್ನನ್ನು ಕಂಡ ಆ ಕ್ಷಣದಿಂದ ಮನದಲ್ಲಿ ಯಾಕೋ ಭಾವನೆಗಳ ತೊಳಲಾಟ. ಸಂಗೀತದ ಸಪ್ತ ಸ್ವರಗಳಂತೆ ನನ್ನಲ್ಲಿ ಸುಪ್ತವಾಗಿದ್ದ ಭಾವನೆಗಳನ್ನುಕೆಣಕಿ ಮರೆಯಾದ ಆಗಂತುಕ ನೀನ್ಯಾರು?

ಅಂದು ಕಾಲೇಜು ಮುಗಿಸಿ ಶಾಪಿಂಗ್‌ಗೆ ಅಂತ ಮಳೆಯಲ್ಲಿ ನೆನೆಯುತ್ತಾ ಬಂದು ಮೊದಲ ಮಹಡಿಯತ್ತ ನಡೆಯುತ್ತಿದ್ದಂತೆ ಮುಂದಿನಿಂದ ತಲೆಯ ಕ್ರಾಪ್ ಸರಿಪಡಿಸುತ್ತಾ ಜೀನ್ಸ್ ಧರಿಸಿ ಬಂದವನು ನೀನು. ಅದುವರೆಗೆ ಯಾವ ಹುಡುಗರನ್ನು ಕಂಡರೂ ವಿಚಲಿತಗೊಳ್ಳದ ಮನಸ್ಸು ಯಾಕೋ ನಿನ್ನೆಡೆಗೆ ಸೆಳೆಯಲಾರಂಭಿಸಿತು.

ಪ್ರೀತಿ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ನಾನು ಅಂದಿನಿಂದ ಯಾಕೋ ಬದಲಾಗುತ್ತಿದ್ದೇನೆ. ಅದು ಮಳೆಯಲ್ಲಿ ನೆನೆದ ಪ್ರಭಾವಾನಾ? ಇಲ್ಲಾ, ನಿನ್ನಡೆಗಿನ ಸೆಳೆತಾನಾ ? ಗೊತ್ತಾಗಿಲ್ಲ. ಅಂದು ಶಾಪಿಂಗ್ ಮುಗಿಸಿ ಅಲ್ಲೆಲ್ಲಾ ನಿನ್ನ ಹುಡುಕಾಡಿದೆ. ಆದರೆ ಎಲ್ಲೂ ನಿನ್ನ ಕಾಣಲಿಲ್ಲ. ಎಲ್ಲೋ ಮರೆಯಾಗಿ ಹೋದೆ ನೀನು.

ಇತ್ತ ಮನೆಗೆ ಬಂದರೂ ನಿನ್ನ ಆ ಮುಗ್ಧ ಮುಖವೇ ಮನವನ್ನು ಆವರಿಸಿಬಿಟ್ಟಿತ್ತು. ಪ್ರತಿದಿನ ರಾತ್ರಿ ಮಲಗಲು ಕಣ್ಣು ಮುಚ್ಚುತ್ತಿದ್ದಂತೆ ನೀನು ಮುಗುಳ್ನಗುತ್ತಾ ಬಂದು ನನ್ನ ಅದ್ಯಾವುದೋ ಸುಂದರ ಲೋಕಕ್ಕೆ ಕರೆದೊಯ್ಯುವ ಬಣ್ಣ ಬಣ್ಣದ ಕನಸುಗಳು. ಆ ಲೋಕದಲ್ಲಿ ಸುಮಧುರವಾಗಿ ವಿಹರಿಸುವ ನಾವು. ಹೀಗೇ ಏನೇನೋ. ಒಂದಲ್ಲಾ ಒಂದು ದಿನ ನೀನು ಸಿಕ್ಕೇ ಸಿಕ್ತೀಯಾ ಅಂತ ಗೊತ್ತು. ಆದರೆ ಎಷ್ಟು ದಿನಾಂತ ಈ ಕಾಯುವಿಕೆ. ಆದರೂ ನಿನಗಾಗಿರುವ ಕಾಯುವಿಕೆಯೇ ಮಧುರ ಅನುಭೂತಿಯನ್ನು ನೀಡುತ್ತಿದೆ.

ಅಂದಿನಿಂದ ಪ್ರತಿನಿತ್ಯ ಕಾಲೇಜಿಗೆ ತೆರಳುವಾಗಲೂ ಕಂಗಳು ನಿನ್ನ ಭೇಟಿಗಾಗಿ ಕಾತಾರಿಸ್ತಾ ಇವೆ. ಎಲ್ಲಾದರೂ ನೀನು ಕಾಣಿಸ್ತೀಯಾ ಎಂದು ಕಾಲೇಜಿಗೆ ಬರುವಾಗ ಕಣ್ಣು ನಿನ್ನನ್ನು ಅರಸುತ್ತಾ ಇವೆ. ನೀನು ಸಿಗ್ತೀಯಾ ಅಂತಾ ಕಾಯುತ್ತಿರುವ.

ಮಂದಸ್ಮಿತಾ

ಕಡಲ ತಡಿಯ ಕನಸು ಬೇಗ ನನಸಾದ ಹಾಗೆ ಕನಸೊಂದು ಕಂಡೆ!


ಸುಶೀ
ಅಬ್ಬಾ ಅಂತೂ ಈ ಮಳೆಗಾಲದಲ್ಲೇ ಊರಿಗೆ ಬಂದ್ಯಲ್ಲಾ. ಧರೆಗೆ ಮಳೆ ತಂಪೆರೆದಂತೆ ಮನದ ದುಗುಡ ದೂರಮಾಡಲು ಊರಿಗೆ ಬಂದ ನೀನೇ ಗ್ರೇಟ್ ಕಣೋ. ಯಾಕೋ ಮೊನ್ನೆ ಮಳೆಯ ಆರ್ಭಟ, ಕಡಲಿನ ಕೊರೆತ, ಮನೆಯನ್ನು ಸುತ್ತುವರಿದ ನೀರನ್ನು ನೋಡುತ್ತಿದ್ದಂತೆ ಹೃದಯದಲ್ಲಿ ಏನೋ ತುಡಿತ. ಮಳೆಯ ಆಗಮನಕ್ಕೆ ಮುನ್ನ ಕವಿಯುವ ಕಾರ್ಮೋಡಗಳೆಂದರೆ ನನಗೀಗಲೂ ತುಂಬಾ ಭಯ ಕಣೋ. ಬಾಲ್ಯದಿಂದಲೂ ಹಾಗೇನೇ. ಕಾರ್ಮೋಡದ ಛಾಯೆಗಳಂತೆಯೇ ನನ್ನ ಮನಸಿಗೂ ಭವಿತವ್ಯದ ಕನಸುಗಳು ಕಾಡಲಾರಂಭಿಸುತ್ತವೆ. ಜತೆಗೆ ಒಂದಿಷ್ಟು ಭಯ, ತುಸು ನಾಚಿಕೆ ಎಲ್ಲವೂ ತನ್ನಿಂತಾನೇ ಸೃಷ್ಟಿಯಾಗಿ ಕಣ್ಣ ಮುಂದೆ ನಿನ್ನ ರೂಪ ಸೃಷ್ಟಿಯಾಗುತ್ತದೆ.

ಯಾಕೋ ಕಾಣೆ ಮನಸು ಮೊದಲಿನಿಂದಲೂ ಈ ಮಳೆಯ ಹಾಗೆ, ಒಂದು ಸಲ ಹನಿ ಹನಿಯಾಗಿ ಬಂದರೆ, ಇನ್ನೊಂದು ಸಲ ಧೋ... ಎಂಬ ಭೋರ್ಗರೆತದೊಂದಿಗೆ ನಿನ್ನ ನೆನಪುಗಳನ್ನು ತಂದು ಕೊಡುತ್ತದೆ.

ಮೊನ್ನೆ ಅತ್ತೆ ಮನೆ ಪಕ್ಕದ ಬೀಚಿಗೆ ಹೋಗಿದ್ದೆ. ಕಡಲಿನ ಅಲೆ, ಶಾಂತ ಸಮುದ್ರದ ರೌದ್ರಾವತಾರ ನೋಡುತ್ತಿದ್ದಂತೆ ಮನದೊಳಗೆ ಸುಖ್ ದುಃಖ್ ಕೇ ಜುಗಲ್‌ಬಂದಿ ಶುರು. ಕಡಲ ತಡಿಯ ಮರಳಿನಲ್ಲಿ ನಿನ್ನ ಹೆಸರು ಬರೆಯುತ್ತಿದ್ದಂತೆ ಅದನ್ನು ಮಾಸಲು ಬರುವ ಅಲೆ ನೋಡುವಾಗಲೂ ನಿನ್ನದೇ ಚಿಂತೆ. ನೀನೂ ನನ್ನನ್ನು ಬರಸೆಳೆದು ಅಪ್ಪಿಕೊಳ್ಳಲು ಬಂದಂತೆ ಕನಸುಗಳು ಕಾಡ್ತಾ ಇವೆ. ಮೊನ್ನೆ ನೀನು ಬಂದ ವಿಷಯ ತಿಳಿಯುತ್ತಿದ್ದಂತೆ ಕಡಲ ತಡಿಯಲಿ ಕಂಡ ಕನಸು ಬೇಗ ನನಸಾಗ್ತಾ ಇದೆಯೇನೋ ಎಂಬ ಸಂಭ್ರಮ.

ಹೆಚ್ಚು ದಿನ ಕಾಯಿಸಬೇಡ. ಕಾಲೇಜಿನಲ್ಲಿ ಪಾಠ ಕೇಳ್ತಾ ಇದ್ದರೂ ಅಲ್ಲಿನ ಪುಸ್ತಕಗಳಲ್ಲಿ ನೋಟ್‌ಬುಕ್‌ಗಳಲ್ಲಿ ಬಂದು ಕಾಡ್ತಾ ಇದೀಯಾ. ಇನ್ನು ಈ ರೀತಿ ಬೇಡ, ಮನೆಗೆ ಬಂದು ಹಿರಿಯರಲ್ಲಿ ಮಾತನಾಡಿ ನಮ್ಮ ಸಂಬಂಧವನ್ನು ಗಟ್ಟಿಗೊಳಿಸೋಕೆ ಬೇಗನೆ ಬಾ.

ಈ ಮಳೆಗಾಲಕ್ಕೂ ಮುನ್ನ ಮದುವೆ ಬಗ್ಗೆ ಮಾತನಾಡದಿರೆ ನಾವಿಬ್ಬರೂ ನಂಬಿದ ಉಡುಪಿ ಕೃಷ್ಣನ ಮೇಲಾಣೆ!

ನಿನ್ನ ಚೈತೂ.

Monday, August 6, 2007

ಇಂದೇ ಕೊನೆ, ನಾಳೆಯಿಂದ ನೆನಪಿನ ಹಾದಿಯಲಿ ಒಂಟಿ ಪಯಣ ಕಣೇ

ಮುದ್ದೂ,

ಹೌದು ಕಣೇ ಇಂದೇ ಕೊನೆ, ನಾಳೆಯಿಂದ ನೀ ನೀಡಿದ ನೆನಪುಗಳೊಂದಿಗೆ ಹೊಸಹಾದಿಯಲ್ಲಿ ಒಂಟಿ ಪಯಣ ಮಾಡೋನು ನಾನು. ಕೊಟ್ಟ ಮಾತಿಗೆ ತಪ್ಪ ಬಾರದು ಎನ್ನುವಂತೆ ನಿನಗೋಸ್ಕರ ದೂರಾಗ್ತಾ ಇದ್ದೇನೆ. ಅದ್ಕೇ ಹೇಳಿದ್ದು ಇಂದೇ ಕೊನೆ. ಇದುವರೆಗೆ ನಿನ್ನೊಡನೆ ಕಳೆದ ಪ್ರೇಮಮಯ ಸನ್ನಿವೇಶಗಳನ್ನು ಧೇನಿಸುತ್ತಾ ಪ್ರೀತಿಯನ್ನು ಮೌನ ರಾಗದಿ ಆರಾಧಿಸಬೇಕಾದ ಅನಿವಾರ್ಯತೆ. ಪರವಾಗಿಲ್ಲ ನಿನ್ನ ಸುಖವೇ ಮುಖ್ಯ ಎಂದುಕೊಂಡಿರುವವನಿಗೆ ಅದು ಕಷ್ಟವಾಗಲಾರದು. ಗೆಳತೀ ಇಲ್ಲಿಗೆ ಮುಗಿಯಲಿ.

ಇನ್ನು ಭರವಸೆಗಳ ಬೇಡುವುದಿಲ್ಲ, ನಿನ್ನ ಮೊಬೈಲಿಗೆ ನನ್ನಿಂದ ದೂರು ದುಮ್ಮಾನಗಳ ಹರಿವೂ ಇರಲ್ಲ. ಆದರೂ ದೂರಾಗುವ ಈ ಸಮಯದಲ್ಲೂ ಪ್ರೀತಿ ಆರಂಭಗೊಂಡಾಗ ಇದ್ದ ಅದೇ ತುಡಿತ ಇಂದಿಗೂ ಇದೆ.
ನೆನಪಿದೆಯಾ ಆ ಯುಗಾದಿಯ ದಿನದಂದು ನಿನ್ನ ಮನೆ ದೇವರ ಕೋಣೆಯಲಿ ನಿನ್ನ ಪ್ರೇಮ ಭಿಕ್ಷೆ ಬೇಡಿ ಪ್ರೀತಿಗಾಗಿ ಕಾದು ಕೂತವನು ನಾನು. ಅಂದು ತಿಂದ ಬೇವು ಬೆಲ್ಲದ ಸವಿಯಿಂದ ಮೊದಲುಗೊಂಡು ಅಂದಿನಿಂದ ಪ್ರತಿ ಕಷ್ಟ ಸುಖದಲ್ಲೂ ಜತೆಯಾಗಿ ನನಗಾಗಿ ಕಣ್ಣೀರು ಹಾಕಿದವಳು ನೀನು. ಆ ಪ್ರೀತಿಯನ್ನು ಇಂದೇ ಕೊನೆಗೊಳಿಸಬೇಕು ಅಂದ್ರೆ ಸಾಧ್ಯವಾಗುತ್ತಾ?

ನನ್ನ ಕಿವಿ ಹಿಂಡುವ ತುಂಟತನ, ಮುದ್ದಿಸಿದ ಅದೇ ನಿನ್ನ ನೆನಪುಗಳೇ ಸಾಲದೇ ಈ ಜೀವನದ ಸಾರ್ಥಕತೆಗೆ. ಆದರೂ ಆ ಪ್ರೀತೀಲಿ ಇಂಚಿಂಚಾಗಿ ನನ್ನ ಕಾಡಿದವಳು ನೀನು. ಆದರೆ ಈ ನೋವಿನೆಡೆಯಲ್ಲೂ ಸಿಕ್ಕಿದ ಆ ಅಮೃತದಂತಹ ಆ ಸುಂದರ ಸಂತಸ ದಿನಗಳಿವೆಯಲ್ಲವೇ ಅದನ್ನು ಮರೆಯಲು ಸಾಧ್ಯವೇ?.

ಇಂದು ನಿನ್ನಿಂದ ದೂರವಾಗ್ತಾ ಇರುವಾಗಲೂ ನಿನ್ನ ನೆನಪಿನಂಗಳದ ಮುದ್ದಾದ ಹಾಡು ಬರ್‍ತಾ ಇದೆ.
ಮೇರೇ ನೈನಾ ಸಾವನ್ ಭಾದೋ,
ಫಿರ್ ಭೀ ಮೇರಾ ಮನ್ ಪ್ಯಾಸಾ....

ಸಾಕು ಕಣೇ, ಮನದಲಿ ದುಗುಡ, ಕಣ್ಣಲಿ ಕಂಬನಿ ತುಂಬಿರೆ ಬರೆಯುವ ಕೈಯೂ ಮುಂದೆ ಸಾಗ್ತಾ ಇಲ್ಲ.
ಈ ಕೊನೇ ದಿನದಲ್ಲೂ ನಿನಗಾಗಿ ಮಿಡಿಯುತ್ತಿರುವ,

ನಿನ್ನವ.

ನನ್ನ ನೆನಪಾಗುವುದಕ್ಕೆ ಮಳೆಯೇ ಬರಬೇಕೆ...?

ಪ್ರಥೂ,

ಮೊದಲ ಮಳೆಯಲ್ಲಿ ನನ್ನ ನೆನಪುಗಳನ್ನು ಕಾಡಿದ ನಿನ್ನ ಪತ್ರ ಸಂದೇಶ ಬಂದು ಕೈ ಸೇರಿತು. ನಾನು ಕಾಲೇಜು ಬಿಟ್ಟು ಬರ್ತಿದ್ದಂತೆ ಅಮ್ಮ ಪತ್ರ ಕೈಯಲ್ಲಿ ಹಿಡಿದು ಕಾಯ್ತಾ ಕೂತಿದ್ಳು. ಅದರಲ್ಲಿರುವ ದುಂಡಗಿನ ಅಕ್ಷರಗಳೇ ಅಮ್ಮನಿಗೆ ನಿನ್ನ ನೆನಪಿಸಿತ್ತು. ಅಂತೂ ನನ್ನ ನೆನಪಾಗೋಕೆ ಮಳೆ ಬರಬೇಕಾಯ್ತಲ್ವಾ, ಇರು ನಿಂಗೆ ಮಾಡಿಸ್ತೀನಿ.

ಅಮ್ಮನೂ ನನ್ನ ಎಷ್ಟು ರೇಗಿಸಿದ್ಳು ಗೊತ್ತಾ. ಮಗ್ಳೇ ಯಾಕೋ ಅವ ನಿನ್ನನ್ನು ದೂರ ಮಾಡ್ತಾ ಇದ್ದಾನೆ, ಸ್ವಲ್ಪ ಕೇರ್ ತಗೋ, ಇಲ್ಲಾಂದ್ರೆ ನನ್ನ ಮಗ್ಳನ್ನ ಬಿಟ್ಟು ಇನ್ನೊಬ್ಳನ್ನ ಹಾರಿಸ್ತಾನೆ ಅಷ್ಟೇ ಎಂದು ನನ್ನ ಕಾಲೆಳೀತಾ ಇದ್ದಾಳೆ. ಅಮ್ಮಂಗೆ ನನ್ನ ನಸು ಕೋಪದ ಮುಖ ನೋಡೋ ತವಕ, ನೀನು ನನ್ನ ಅಮ್ಮಂಗೆ ಕಾಲೆಳೆಯೋಕೆ ಸರಿಯಾದ ಜೋಡಿ. ಪತ್ರದಲ್ಲಿ ಅವಳ ಬಗ್ಗೆ ಬರೆದಿದ್ದಕ್ಕೆ ಅಮ್ಮನ ಸಂಭ್ರಮ ನೋಡ್ಬೇಕಿತ್ತು.

ಹಲವು ದಿನಗಳಾಗಿತ್ತು ಅಮ್ಮನ ಮುಖದಲ್ಲಿ ಅಂತಹ ಒಂದು ನೆಮ್ಮದಿ ನೋಡಿ. ನಿನ್ನಿಂದಾಗಿ ಆಕೆ ಸಂಭ್ರಮ ಪಡ್ತಾ ಇದ್ದಾಳಲ್ಲಾ ಅಂತ ಎಷ್ಟು ಸಂತಸಪಟ್ಟೆ ಗೊತ್ತಾ. ಅದಿರ್‍ಲಿ, ಬರ್‍ತೇನೆ ಅಂತ ಮಾತ್ರ ಹೇಳಿದ್ದೀಯಾ ಯಾವಾಗ ಮಳೆಗಾಲ ಮುಗಿಯೋಕೆ ಮುಂಚೇನೇ ಬರ್‍ತೀಯಾ, ಅಲ್ಲಾ ಮುಂದಿನ ಮಳೆ ಆರಂಭವಾಗ್ಬೇಕಾ ನನ್ನ ನೆನಪಾಗೋಕೆ!

ನೀನು ಬರೆದ ಪತ್ರ, ಮಾಡಿದ ತರ್‍ಲೆ ಕೆಲಸಗಳನ್ನು ಮೊನ್ನೆ ಸುಮಾಳಿಗೆ ಹೇಳ್ತಾ ಇದ್ದೆ. ಅವಳೂ ನಮ್ಮ ಪ್ರೀತಿಯನ್ನು ನೋಡಿ ಅಸೂಯೆ ಪಟ್ಟಿದ್ದಾಳೆ. ಅದರಲ್ಲೂ ಅಮ್ಮನ ಮೇಲಿನ ಪ್ರೀತಿ ಕಂಡು ಆಕೆಗೆ ಮಾತು ಹೊರಟೇ ಇಲ್ಲ.

ನಿನ್ನ ಕೆಲಸದ ಒತ್ತಡವನ್ನು ಬದಿಗಿರಿಸಿ ಈ ಮಳೆಗಾಲ ಮುಗಿಯೋ ಮೊದಲು ಸಾಧ್ಯ ಇಲ್ಲಾಂದ್ರೂ ಚಳಿಗಾಲದ ಆರಂಭದ ಹೊತ್ತಿಗೆ ಬಾ. ಬಂದು ಒಂದೇ ವಾರದಲ್ಲಿ ಹೋಗೋದಾದ್ರೆ ಬೇಡ, ಈ ಸಲ ಬಂದು ಮದುವೆ ಪ್ರಸ್ತಾಪದ ಮಾತುಕತೆ ಮುಗಿಸು, ಮತ್ತೆ ಮುಂದಿನ ಬಾರಿ ಬರೋವಾಗ ನನ್ನ ಕ್ಲಾಸೂ ಮುಗಿದಿರುತ್ತೆ. ಯಾವಾಗ ಬರ್ತೀಯಾ ಅನ್ನೋದನ್ನು ತಿಳಿಸಿ ಒಂದು ಪತ್ರ ಬರೀತಿಯಲ್ವಾ?

ಮುದ್ದಿನ ‘ಆಶೂ’

ಏಕೋ.. ಏನೋ ಈ ನನ್ನ ಮನವು ಉಯ್ಯಾಲೆಯಾಗಿದೆ

ಹಾಯ್ ಆಶೂ,

ಕಭೀ ಕಭೀ ಮೇರೇ ದಿಲ್ ಮೇ ಖಯಾಲ್ ಆತಾ ಹೈ

ಹೌದು ಕಣೇ ಇಂದು ನಿನ್ನದೇ ನೆನಪುಗಳು ಕಾಡ್ತಾ ಇವೆ. ಕಾಲೇಜು ಕೊನೆಯ ದಿನ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಆ ದಿನದ ವಿದಾಯದ ಕ್ಷಣದಲ್ಲಿ ನಾನು ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಂತೆ ಎಲ್ಲರಿಗಿಂತ ಹೆಚ್ಚು ತೇವಗೊಂಡಿದ್ದ ಕಂಗಳು ನಿನ್ನವು.

ಹೇಗೆ ಕಳೆದವಲ್ಲಾ ಆ ದಿನಗಳು. ಎಷ್ಟು ಸುಂದರ. ಒಂದಿಷ್ಟು ಮುನಿಸು, ಪ್ರೀತಿ, ಅದರೊಂದಿಗೆ ಸ್ವಲ್ಪ ಹುಸಿಕೋಪ, ನಡುವೆ ತುಂಟ ನಗು. ಕ್ಯಾಂಪಸ್‌ನಲ್ಲಿ ಎಲ್ಲಿ ಹೋದರೂ ನಮ್ಮದೇ ಮಾತು. ಅಷ್ಟರ ಮಟ್ಟಿಗೆ ನಾವು ಫೇಮಸ್ ಆಗಿ ಬಿಟ್ಟಿದ್ದೆವು. ನೆನಪಿದೆಯಾ ನಿನಗೆ ಒಂದು ದಿನ ಕಾಲೇಜಿನ ಫೋಟೋಗ್ರಫಿ ತರಗತಿ ಮುಗಿಸಿ ಹೊರಡುವಾಗ ಮುಸ್ಸಂಜೆಯ ಕಿರಣಗಳು ನಿನ್ನ ಮೊಗವನ್ನು ಮುತ್ತಿಕ್ಕುತ್ತಿದ್ದವು. ಅದನ್ನು ಕಂಡು ಮನದೊಳಗೆ ಏನೋ ಆಹ್ಲಾದ ಕಣೇ. ಯಾಕೋ ಹೃದಯೊದೊಳಗೆ ಆಗಲೇ ಯುಗಳ ಗೀತೆ ಆರಂಭವಾಗಿತ್ತು.

ನಿನ್ನೊಡನೆ ಕಳೆದ ಪ್ರತಿ ಕ್ಷಣವೂ ಇಂದು ನನ್ನ ಪಾಲಿನ ಜೀವಜಲ. ಯಾಕೆ ಗೊತ್ತಾ ಇಲ್ಲಿನ ಈ ಒತ್ತಡದ ಕೆಲಸದ ನಡುವೆಯೂ ಕಂಪ್ಯೂಟರ್ ಪರದೆ ಮುಂದೆ ನಿನ್ನ ನಗುಮೊಗ ತೇಲಿ ಬಂದು ನನ್ನ ಎಚ್ಚರಿಸಿ ನೀನು ತಮಾಷೆ ಮಾಡಿದಂತೆ ಅನುಭವ.

ಯಾಕೋ ನಿನ್ನೆ ಮಳೆ ಬರಲು ಮೋಡಗಳು ಆವರಿಸಿದಂತೆ ಮನಸಲ್ಲಿ ನಿನ್ನ ನೆನಪುಗಳು, ಮಳೆಯ ಹನಿಗಳು ಮೈ ಮೇಲೆ ಬೀಳುತ್ತಿದ್ದಂತೆ ನೀನೇ ಬಂದು ನನ್ನ ಆವರಿಸಿದಂತೆ ಆಗಿಬಿಟ್ಟಿತ್ತು. ಆ ಮಳೆಯಲ್ಲೇ ಅಂದುಕೊಂಡೆ ಕಣೇ ನೀನೂ ನನ್ನ ತುಂಬಾ ಮಿಸ್ ಮಾಡ್ಕೊಳ್ತಿದ್ದೀಯಾ ಅಂತ. ಅದಕ್ಕೇ ಮಳೆಯ ತಂಪಲೂ ನಿದ್ರಾ ದೇವಿ ಶರಣಾಗಲು ಬಿಡದೆ ನಿನ್ನನ್ನೇ ನೆನಪಿಸ್ತಾ ಇದ್ದಳು. ಯಾಕೋ ನನ್ನ ಹೃದಯಾಕಾಶದಲ್ಲಿ ನೀನು ಮಿನುಗುತಾರೆಯಂತೆ ಹೊಳೆಯುತ್ತಾ ಇದ್ದಂತೆ. ಮುಂದಿನ ವಾರಾನೇ ಬರ್‍ತಾ ಇದ್ದೀನಿ ನಿನ್ನ ಅಮ್ಮನಲ್ಲಿ ಹೇಳು. ನಿನ್ನ ಜತೆ ಅವರೂ ಸಂಭ್ರಮಪಟ್ಟುಕೊಳ್ಳಲಿ. ನಿಮ್ಮಿಬ್ಬರನ್ನೂ ಬಿಟ್ಟು ಇಷ್ಟು ಸುದೀರ್ಘಾವಧಿ ನಾನಿರಬಾರದಾಗಿತ್ತು. ಅದಕ್ಕೆ ಕ್ಷಮೆಯಿರಲಿ.

ನಿನ್ನ ಮುದ್ದಿನ ಪ್ರಥಮ್.

ನಿನ್ನ ಕಂಡ ಮೇಲೆ ನನ್ನೇ ನಾ ಮರೆತೆ


ಹಾಯ್ ಹಸಿರು ಸೀರೆಯ ಚೆಲುವೆ,

ಮದುವೆ ಹಾಲ್‌ನಲ್ಲಿ ಚಿಗರೆಯಂತೆ ಕುಣಿದಾಡುತ್ತಿದ್ದ ಚಂದ್ರಮುಖೀ ಇಷ್ಟು ದಿನ ಎಲ್ಲಿ ಕಣ್ಮರೆಯಾಗಿದ್ದೆ. ಮುಗ್ಧ ಮುಖ, ಸ್ನಿಗ್ಧ ಸೌಂದರ್ಯ, ನಗುವಾಗ ಗುಳಿಬೀಳುವ ಕೆನ್ನೆಯಿಂದಾಗಿ ಮೊದಲ ನೋಟದಲ್ಲೇ ನನ್ನ ಜೀವನದಲ್ಲಿ ಪ್ರಥಮ ಬಾರಿ ಕಾಡಿದವಳು ನೀನು.

ನಾನ್ಯಾವತ್ತೂ ಸಭೆ ಸಮಾರಂಭಗಳಿಂದ ಸ್ವಲ್ಪ ದೂರಾನೇ ಇರೋನು. ಆದರೆ ಒಂದು ವಾರ ಮೊದಲು ಊರಿಗೆ ಬಂದಿದ್ದೆ. ಆ ಸಂದರ್ಭದಲ್ಲಿ ತಂಗಿಯ ಒತ್ತಾಯಕ್ಕೆ ಮಣಿದು ಆಕೆಯ ಗೆಳತಿಯ ವಿವಾಹಕ್ಕೆ ಹೊರಟೋನು ನಾನು. ಅಲ್ಲಿಗೆ ಬರುವವರೆಗೂ ನೀರಸವಾಗಿದ್ದ ನನ್ನ ಮುಖ ನಿನ್ನ ಕಂಡೊಡನೆ ಯಾಕೋ ಚೇತೋಹಾರಿ ಅನಿಸಿತು.

ಮದುವೆಗೆ ಒಲ್ಲದ ಮನಸ್ಸಿನಿಂದ ಬಂದರೂ ನನ್ನ ಲವಲವಿಕೆ ಕಂಡು ದಿಗ್ಭ್ರಮೆಗೊಂಡವಳು ನನ್ನ ತಂಗಿ. ಮದುವೆ ಮಂಟಪದ ದ್ವಾರದಲ್ಲಿ ನೀನು ಸಿಂಪಡಿಸುತ್ತಿದ್ದ ಪನ್ನೀರಿನ ಸಿಂಚನದಿಂದ ನನ್ನ ಮೈಯೆಲ್ಲಾ ತಂಪು, ಹೃದಯದಲ್ಲಿ ಕಂಪು.

ಹಾಗೇ ನಿನ್ನದೇ ಯೋಚನೆಯಲ್ಲಿರಲು ಊಟ ಮಾಡುವಾಗ ಏನಣ್ಣಾ, ಹಸಿರು ಸೀರೆಯ ಪನ್ನೀರ ನೀರೆ ಮನಸಿಗೆ ಕಾಡ್ತಾ ಇದ್ದಾಳಾ ಎಂದು ತಂಗಿ ಕೇಳಿದಾಗ ಇಲ್ಲ ಎನ್ನಲು ಸಾಧ್ಯವಾಗಲೇ ಇಲ್ಲ. ಹೌದು ಎಂದು ತಲೆಯಾಡಿಸಿದ್ದೇ ತಡ ಅವಳಿಗೆ ಅತ್ತಿಗೆ ಬರುವ ಸಂಭ್ರಮದ ಕನಸು ಕಾಣಲಾರಂಭಿಸಿದ್ದಾಳೆ. ಅದಕ್ಕಿಂತ ಮೊದಲು ನಿನ್ನ ಎಲ್ಲಾ ವೃತ್ತಾಂತಗಳನ್ನು ಕಲೆಹಾಕುವ ಜವಾಬ್ದಾರಿಯನ್ನು ತನ್ನ ಮೇಲೆಳೆದುಕೊಂಡು ನಿನ್ನ ಸಂಪೂರ್ಣ ವಿವರ ಒಪ್ಪಿಸುವ ಭರವಸೆ ನೀಡಿದ್ದಾಳೆ. ಯಾಕೋ ಅಂದು ಎಷ್ಟೇ ಹೊತ್ತು ಕಳೆದರೂ ನನಗೆ ಮದುವೆ ಹಾಲ್‌ನಿಂದ ಹೊರಡಲು ಇಷ್ಟವಿರಲಿಲ್ಲ. ಆದರೂ ತಂಗಿ ಬಿಡಬೇಕಲ್ಲ. ಅವಳದು ಮತ್ತೊಂದು ಭರವಸೆ, ಅಣ್ಣಾ ಜೀವನ ಪೂರ್ತಿ ನಿನ್ನ ಜತೆ ಬರುವವಳು ಅವಳು. ಈಗಲೇ ಹೀಗಾದ್ರೆ ಹೇಗಣ್ಣಾ ಅಂತ ಕೇಳಿದಾಗ ಅನಿವಾರ್ಯವಾಗಿ ಹೊರಡಲೇ ಬೇಕಾಯಿತು. ಮಾತೇ ಆಡದೆ ನನ್ನ ಹೃದಯದಿ ಇಷ್ಟೆಲ್ಲಾ ಕಲರವ ಎಬ್ಬಿಸಿದವಳು ನೀನು. ಇನ್ನು ನೀನು ಮಾತು ಆರಂಭಿಸಿದರೆ...!!! ಅದು ಮುಂದಿನ ದಿನಗಳಿಗಿರಲಿ. ತಂಗಿ ನಿನ್ನ ಬಗ್ಗೆ ವರದಿ ಒಪ್ಪಿಸುವವರೆಗೆ ಕನಸು ಕಾಣ್ತಾ ಕಾಯ್ತಾ ಇರ್‍ತೀನಿ.

ನಿನ್ನ ತನೂ

Wednesday, July 11, 2007

ನನ್ನ ತಲೆ ಮೇಲೇ ಚಹಾ ಮಾಡ್ತೀನಿ ಅಂದ ಚುರುಕಿನ ಚೆಲುವೆ ನೀನೇ!

ಹಾಯ್ ವೈಶೂ,
ನೀನು ತುಂಬಾ ಸ್ವಾರ್ಥಿ ಕಣೇ, ನಾನಿರುವಲ್ಲಿಗೇ ಬಂದು ನೀನು ನನ್ನ ಭೇಟಿಯಾಗದೇ, ಯಾವುದೇ ಸುಳಿವನ್ನು ನೀಡದೆ ಹೊರಟು ಹೋದೆಯಲ್ಲಾ. ಯಾಕೆ ಕಣೇ ಆ ಥರಾ ಮಾಡ್ದೆ?
ನನ್ನ ಬಾಳಿನಲ್ಲಿ ಪ್ರೀತಿಯ ಲೇಪವನ್ನು ಬೆಸೆದು, ಆ ಪ್ರೀತಿಯ ಹೂವನ್ನು ಹೊಸಕಿ ಹಾಕುವ ವ್ಯರ್ಥ ಪ್ರಯತ್ನವನ್ನು ಯಾಕೆ ಮಾಡ್ತೀಯ?
ನನಗೊತ್ತು ಕಣೇ ನಿನಗೆ ನನ್ನ ಕಾಡೋದೆಂದರೆ ಒಂಥರಾ ಖುಷಿ. ಅದರಲ್ಲೂ ನನ್ನ ಸಿಟ್ಟು ಏರಲು ಯಾವತ್ತೂ 2 ಬಾರಿ ಫುಲ್ ರಿಂಗ್ ಮಾಡದ ಹೊರತು ನೀನು ಇದುವರೆಗೆ ನಿನ್ನ ಮೊಬೈಲ್ ಫೋನ್ ಎತ್ತಿದ್ದಿದೆಯಾ ನೀನೇ ಹೇಳು.
ಕಾಲೇಜು ದಿನಗಳಲ್ಲಿ ನಿನ್ನ ನಾ ಇಷ್ಟಪಟ್ಟಿದ್ದು ಹೇಗೆ ಗೊತ್ತಾ? ನೀವು ನಮ್ಮ ಜೂನಿಯರ್ ಆಗಿ ಬಂದು ನಿಮ್ಮ ಜತೆ ವಾದ ಮಾಡುವಾಗ ನೀನು ಹೇಳಿದೆಯಲ್ಲಾ ನಾನು ತಲೇ ಮೇಲೆ ಬೇಕಾದರೂ ಟೀ ಮಾಡ್ತೇನೆ, ಬೇಕೂಂದ್ರೆ ಟೀ ಪುಡಿ, ನೀರು, ಸಕ್ಕರೆ ಹಾಲು ತನ್ನಿ ಅಂತ. ಅಂದೇ ಅಂದ್ಕೊಂಡೆ ಹುಡುಗಿ ತುಂಬಾ ಚುರುಕು. ನನಗೆ ಇಷ್ಟವಾದ ಎಲ್ಲಾ ಗುಣಗಳನ್ನು ಬೆಳೆಸಿಕೊಂಡಿದ್ದಾಳೆ ಎಂದು.
ಮತ್ತೆ ಕೆಲವು ದಿನಗಳ ಪರಿಚಯವಾದ ಗೆಳೆತನ ಯಾವತ್ತೋ ಪ್ರೀತಿಗೆ ತಿರುಗಿತ್ತು. ಅದರ ನಂತರ ನಡೆದಿದ್ದು ಪ್ರೀತಿಯ ಇತಿಹಾಸ. ನಾನು ಪದವಿ ಮುಗಿಸಿ ಹೊರಟಾಗ ನಿನ್ನ ಕಣ್ಣ ತುಂಬಾ ಮುಂಗಾರು ಮಳೆ ಥರಾ ಜಲಲ ಅಮೃತಧಾರೆ. ಅವತ್ತೇ ಹೇಳಿದ್ದೆ ಅಷ್ಟು ಅಟ್ಯಾಚ್‌ಮೆಂಟ್ ಇಟ್ಕೋಬೇಡ ಅಂತ. ಆಗ ಪ್ರೀತಿ ಅಮರ ಕಾವ್ಯವನ್ನು ವರ್ಣಿಸಿದ ನಿನ್ನನ್ನು ಮರೆಯಲು ಸಾಧ್ಯವೇ ಪ್ರಿಯೆ.
ಹಾಗೆ ಮೊನ್ನೆ ಏಪ್ರಿಲ್‌ನಲ್ಲಿ ನಿನ್ನ ಕೋರ್ಸ್ ಮುಗಿಸಿ, ಮೇ ಮೊದಲ ವಾರದಲ್ಲಿ ನಿನ್ನ ಕೆಲಸದ ಸಂದರ್ಶನಕ್ಕಾಗಿ ಬೆಂಗಳೂರಿಗೆ ಯಾವುದೇ ಮುನ್ಸೂಚನೆಯಿಲ್ಲದೆ ಬಂದು ವಾಪಸ್ ಹೋಗುತ್ತಿರುವಾಗ ಫೋನ್ ಮಾಡಿದಾಗ ನೀನು ಹೇಳಿದ್ದೇನು. ಅಣ್ಣ ಜತೆಗಿದ್ದ ಅದಕ್ಕೆ ನಂಗೆ ತುಂಬಾ ಭಯ. ಜತೆಗೆ ಎಲ್ಲರತ್ರ ಈ ವಿಷಯ ಹೇಳ್ಕೊಂಡು ಬರೋದಿಕ್ಕೆ ನಂಗೆ ಇಷ್ಟವಿಲ್ಲ ಎಂದಲ್ಲವೇ. ಈ ಗುಣಗಳಿಂದಾಗಿಯೇ ಅಲ್ಲವೇ ನೀನು ನನ್ನ ಹೃದಯದರಸಿಯಾಗಿದ್ದು. ಇಲ್ಲಾಂದ್ರೆ ಇಂದು ನೀನ್ಯಾರೋ ನಾನ್ಯಾರೋ ಆಗಿರ್‍ತಿದ್ವಿ. ಅಲ್ವಾ? ಮುಂದಿನ ವಾರ ಬೆಂಗಳೂರಿಗೆ ಬರ್‍ತಾ ಇದ್ದೀ ಅಲ್ವಾ. ಅದ್ಕೇ ಇರಬೇಕು ಹೃದಯ ಕೂಗುತಿದೆ ಅನಿಸುತಿದೆ ಯಾಕೋ ಇಂದು, ನೀನೇನೇ...... ಉಳಿದದ್ದು ನೀನು ಬಂದ ನಂತರ ಹೇಳ್ತೀನಿ. ಹೆಚ್ಚೆಂದರೆ ಇನ್ನು ೩ ದಿನ ಮತ್ತೆ ನನ್ನ ನಿನ್ನ ಜಂಟಿ ಪಯಣ. ಅದಕ್ಕಿಂತ ಮೊದಲು ನನ್ನ ಮನೆಯಲ್ಲಿ ನಮ್ಮ ಪ್ರೀತಿ ವಿಷಯ ಹೇಳಿ ಅವರನ್ನು ನಿನ್ನ ಮನೆಗೆ ಕಳಿಸಿರ್‍ತೀನಿ. ಅದುವರೆಗೆ ಕಾಯ್ತಾ ಇರು.

ನಿನ್ನೊಲವಿನ,
ದುನಿಯಾದ ಇನಿಯ

Friday, July 6, 2007

ಪ್ರೀತಿಯೆಂಬ ದೋಣಿಯಲ್ಲಿ.......



ಪ್ರೀತಿ. ಅದೊಂದು ಮಧುರ ಅನುಭೂತಿ.

ಇಲ್ಲಿ ನಾವು ಹೇಳೋದು ನಾನು ಮತ್ತು ಆಕೆ ಪ್ರೀತಿಯನ್ನು ಕಂಡು ಕೊಂಡ ಬಗೆ. ಸದಾಕಾಲ ಮನವನ್ನು ಕಾಡುತ್ತಿರುವ ಆಕೆಯನ್ನು ಕನವರಿಸುತ್ತಾ ನನ್ನ ನೆನಪಿನಲ್ಲಿ ಕಾಲ ಕಳೆಯುವ ಆಕೆಯ ಮುಗ್ಧ ಸೌಂದರ್ಯವನ್ನು ನೆನೆಯುತ್ತಾ ಇದ್ದಂತೆ ಅದ್ಯಾವ ಲೋಕದಲ್ಲೋ ತೇಲಿ ಹೋದ ಅನುಭವ.

ನಾವಿಬ್ಬರೂ ಪ್ರತಿ ಕಷ್ಟ ಸುಖದಲ್ಲಿ ಭಾಗಿಗಳಾಗಿದ್ದೇವೆ. ಒಂದರ್ಥದಲ್ಲಿ ನಮ್ಮಿಬ್ಬರದೂ ಪರ್ಫೆಕ್ಟ್ ಅಂಡರ್‌ಸ್ಟ್ಯಾಂಡಿಂಗ್. ಇಲ್ಲಿ ನಾವು ಹೊಡೆದಾಡಿದ್ದೇವೆ, ಸಂತಸ ಪಟ್ಟಿದ್ದೇವೆ, ನಮ್ಮ ಈ ಬಾಂಧವ್ಯ ಗಟ್ಟಿಗೊಳ್ಳಲು ಕಾರಣವಾಗಿರುವುದೇ ಈ ತೆರನಾದ ಪುಟ್ಟ ಪುಟ್ಟ ವಿಷಯಗಳು.

ಯಾವುದೋ ಒಂದು ಅದ್ಭುತ ಸುಖದ ಬೆನ್ನು ಬಿದ್ದು ನಾವು ಹೊರಟವರಲ್ಲ. ಇದ್ದುದರಲ್ಲೇ ತೃಪ್ತಿ ಪಟ್ಟುಕೊಂಡು ನಾವಿರೋದೇ ಹೀಗೆ ಉಳಿದವರು ಏನೇ ಹೇಳಲಿ ವಿ ಡೋಂಟ್ ಕೇರ್ ಎಂದು ಬದುಕಿದವರು ನಾವಿಬ್ಬರು. ಆಕೆಯಿಲ್ಲದ ನಾನು, ನಾನಿಲ್ಲದ ಆಕೆಯನ್ನು ಊಹಿಸಲೂ ಅಸಾಧ್ಯ ಎಂಬ ಮಟ್ಟಿಗೆ ನಿರಂತರವಾಗಿ ಸಾಗಿದೆ ನಮ್ಮ ಪ್ರೀತಿ. ಭಾವನೆಗಳನ್ನು ಹಂಚಿಕೊಳ್ಳಬೇಕೆಂದಾಗ ನಾವು ಹಲವು ಪತ್ರಗಳನ್ನು ಬರೆದೆವು. ಆಕೆ ತನ್ನ ಶಬ್ದಗಳ ಮೂಲಕ ನನಗೆ ದನಿಯಾದಳು. ಎಲ್ಲೋ ಒಂದೆಡೆ ಸುಪ್ತವಾಗಿದ್ದ ನನ್ನ ಕವಿ ಹೃದಯವನ್ನು ಬಡಿದೆಬ್ಬಿಸಿ ನನ್ನ ಬಾಳಿಗೆ ನಿರಂತರವಾಗಿ ಸ್ಫೂರ್ತಿಯಾಗಿದ್ದವಳು ಆಕೆ. ಆ ನಿರಾಭರಣ ಸುಂದರಿಯ ಬಗ್ಗೆ ಎಷ್ಟು ಬೇಕಾದರೂ ಬರೆದೇನು!

ಪ್ರಸ್ತುತ ಇಲ್ಲಿ ನಾವಿಬ್ಬರೂ ನಮ್ಮನ್ನು ಮೆಚ್ಚಿ ಬರೆದ ಓಲೆಗಳನ್ನು ಪೋಣಿಸಿದ್ದೇವೆ. ಈ ಓಲೆಗಳಲ್ಲಿನ ಅಕ್ಷರ ಮಾಲೆಗಳು ನಿಮಗೆ ಇಷ್ಟವಾದೀತು ಎಂಬ ಭಾವನೆಯೊಂದಿಗೆ ನಮ್ಮಿಬ್ಬರ ಪತ್ರಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದೇವೆ. ಇಷ್ಟವಾದೀತು ಎಂಬ ಭಾವನೆಯೊಂದಿಗೆ ಓದುಗನಾದ ನಿಮ್ಮ ಕೈಗಿಡುತ್ತಿದ್ದೇವೆ. ಸ್ವೀಕರಿಸಿ ನಮ್ಮ ಮಧುರ ಅನುಭೂತಿಯಲ್ಲಿ ನೀವೂ ಪಾಲ್ಗೊಳ್ಳಿ.


ಇಂತಿ ನಿಮ್ಮ,
ಮಿನುಗುತಾರೆ.