Thursday, July 10, 2008

ನಮ್ಮ ಪ್ರೀತಿ ಕಂಡು ಎಲ್ರಿಗೂ ಅಸೂಯೆ ನಮ್ ಪ್ರೀತಿ ಇರೋದೆ ಹಾಗೆ..

ಮುದ್ದು ಮನದನ್ನೆಗೆ,

ಕಾಲೇಜು ಆರಂಭದ ದಿನ ನಿನ್ನ ಪ್ರೀತಿಯಿಂದ ಎದಿರುಗೊಳ್ಳಬೇಕು. ನನ್ನ ಮುದ್ದು ಹುಡುಗಿಗೆ ಆಕೆ ಮರೆಯಲಾರದ ಸ್ವಾಗತ ನೀಡಬೇಕು ಎಂದು ಕಾಲೇಜಿಗೆ ಎಂದಿಗಿಂತ ಮೊದಲು ಬಂದವನಿಗೆ ಕಾದಿದ್ದು ನಿರಾಶೆ. ನಾನು ಬರೋದಿಕ್ಕೆ ಮೊದಲು ನೀನೇ ಬಂದು ಸ್ವಾಗತಿಸುತ್ತೀಯಾ ಎಂದು ಊಹಿಸಿರಲಿಲ್ಲ.

ಆದರೆ ನೀನು ನಿನ್ನ ಪ್ರೀತಿಸುವ ಈ ಹೃದಯಕ್ಕಾಗಿ, ಎರಡು ತಿಂಗಳ ಕಾಲ ನಿನ್ನ ಅಗಲಿಕೆಯಿಂದ ಯಾವತ್ತು ಬರುತ್ತೀಯಾ ಎಂದು ಕಾದು ಕುಳಿತ ಚಾತಕಪಕ್ಷಿಗೆ ಸಮಾಧಾನ ನೀಡಲು ಬಂದಂತೆ ತೋರಲಿಲ್ಲ. ಅದಕ್ಕಿಂತಲೂ ಹೆಚ್ಚಿನ ಪ್ರೇಮದ ಉತ್ಕಟತೆಯಿತ್ತು. ಗೆಳತೀ ಪ್ರೇಮ ಎಂದರೆ ಈ ಪರಿ ಕಾಡುತ್ತೆ ಎಂದು ನನಗೆ ನಿಜವಾಗಿ ಅರ್ಥವಾದದ್ದು ನಿನ್ನ ಬಿಟ್ಟು ಉಳಿದ ಈ ಎರಡು ತಿಂಗಳಿನಲ್ಲೇ...

ಪ್ರತಿ ನಿತ್ಯ ನೆನಪುಗಳು ಕಾಡುತ್ತಿದ್ದವು, ನಿನ್ನ ಕಣ್ಣಿನ ಸೆಳೆತ, ತೀಡಿದ ಹುಬ್ಬು, ಸಿಟ್ಟಲ್ಲಿ ಕಾಣಿಸುವ ರೌದ್ರಭಾವ ಇವೆಲ್ಲ ಇಲ್ಲದಿರೆ ಈ ಜೀವನ ಇಷ್ಟೇನಾ ಎಂದೆನಿಸಲು ಆರಂಭವಾಗಿದ್ದು ಆಗಲೇ. ಅದಕ್ಕೇ ಮೊನ್ನೆ ಮೊದಲ ದಿನ ನಿನಗಾಗಿ ಹಾಡಿದ್ದು,

ಹೊಸ ಬಾಳಿಗೆ ನೀ ಜತೆಯಾದೆ,
ಹೊಸ ಆನಂದ ನೀನಿಂದು
ತಂದೆ

ಜತೆಯಲ್ಲಿದ್ದರೆ ಅಲ್ಲಿ ನೋವು ಯಾತನೆಗಳಿಗೆ ಜಾಗವೇ ಇಲ್ಲ. ಎಂದೋ ಕೇಳಿದ ಹಳೆಯ ಹಾಡುಗಳನ್ನು ನಿನ್ನ ಜತೆ ಕುಳಿತು ಕೇಳುವುದೆಂದರೆ ಅದಕ್ಕಿಂತ ಉತ್ತಮ ವಿಷಯ ಬೇರೆ ಇಲ್ಲ.
ಎಲ್ಲರೂ ಕಾಫಿ ಕ್ಲಬ್ ಅಂತ ಹೊರಟರೆ, ನಾವು ಹೋಗುವುದು ನಮ್ಮೂರ ಬೆಟ್ಟದ ತುದಿಗೆ. ಇದೇ ಅಲ್ಲವೇ ನಮ್ಮನ್ನು ಎಲ್ಲರಿಂದ ಭಿನ್ನವಾಗಿಸಿದ್ದು. ಎಲ್ಲರಿಗೂ ನಮ್ಮ ಪ್ರೀತಿಯ ಬಗ್ಗೆ ಅಸೂಯೆ. ನಾವು ಪ್ರೀತಿಸುವುದೇ ಹಾಗೆ. ಪ್ರೀತಿಯನ್ನು ಕದ್ದು ಮುಚ್ಚಿ ಮಾಡುವುದಿಲ್ಲ. ಯಾರ ಹೆದರಿಕೆಯೂ ಇಲ್ಲ. ನೀನು ಜತೆಯಲ್ಲಿದ್ದರೆ ಬೇರೆ ಯಾರ ಹಂಗೂ ಇಲ್ಲ.

ನಗುವ ನಯನ, ಮಧುರ ಮೌನ
ಮಿಡಿವಾ ಹೃದಯಾ ಇರೆ ಮಾತೇಕೆ?
ಹೊಸ ಭಾಷೆಯಿದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ?

ಅದಿರಲಿ, ಮುಂದಿನ ಪ್ರವಾಸವೆಲ್ಲಿಗೆ ಹೋಗೋಣ..
ನಿನ್ನ ಕಾಡುವ ಹುಡುಗ.

No comments: