Wednesday, July 23, 2008

ಹನಿ ಹನಿ ಮಳೆ ಬಿದ್ದಾಗ್ಲೆಲ್ಲಾ ಚಿಗುರುತ್ತೆ ನಮ್ಮ ಪ್ರೀತಿ..

ಕೊನೆಗೂ ಮಳೆಗಾಲ ಆರಂಭವಾಗಿದೆ ನೋಡು. ಈ ಮಳೆಗಾಲವೇ ಹೀಗೆ, ಎಂದೋ ಬಂದು ಹೋಗುತ್ತೆ. ನೀನು ನನ್ನ ಕಾಯಿಸಿದಂತೆ. ಆದರೆ ಗೆಳತೀ, ಆ ಮಳೆ ನಿಂತು ಹೋದ ಮೇಲೆ ಬೀಳುವ ಹನಿಯನ್ನು ನೋಡುತ್ತಾ ನಾನು ನಿನ್ನಲ್ಲೇ ಕಳೆದು ಹೋಗುತ್ತೇನೆ. ಆದರೆ ಮೊನ್ನೆ ಮಳೆ ಬಂದು ಹೋದರೂ ನಿನ್ನ ಫೋನ್ ಕಾಲ್ ಇಲ್ಲ, ಮೊಬೈಲ್ ರಿಂಗಣಿಸಲೂ ಇಲ್ಲ. ಯಾಕೆ ಹೇಳಲಾರೆಯಾ? ಮೊದಲೆಲ್ಲಾ ಮಳೆ ಬಂದರೆ ಫೋನ್ ಮಾಡದೇ ಇದ್ದ ದಿನಗಳೇ ಇರಲಿಲ್ಲ.

ಮಳೆಗಾಲಕ್ಕೂ ನಮ್ಮ ಪ್ರೀತಿಗೂ ಅವಿನಾಭಾವ ಸಂಬಂಧ. ನಮ್ಮ ಪ್ರೀತಿ ಹುಟ್ಟಿದ್ದು ಇಂಥದೇ ಒಂದು ಮಳೆಗಾಲದ ಮುಸ್ಸಂಜೆ ಹೊತ್ತಿನಲ್ಲಿ. ಅಂದು ನೀನು ಕಾಲೇಜು ಮುಗಿಸಿ ಮನೆಗೆ ಹೊರಟಿದ್ದೆ. ನಡುವೆ ಸುರಿದಿತ್ತು ಬಿರುಸಾದ ಮಳೆ. ಹಿಂದಿನಿಂದ ನಾನೂ ಮನೆಗೆ ಹೊರಟಿದ್ದೆ. ಆದರೆ ಮಳೆಯ ರಭಸಕ್ಕೆ ಬೆದರಿ ನಾವು ಮನೆಯ ದಾರಿಯಲ್ಲಿರುವ ಆ ಮರದ ಕೆಳಗೆ ನಿಂತು ಮಳೆ, ಅದರ ಅಬ್ಬರ, ತಂಗಾಳಿ, ನಡುವೆ ಮೂಡುವ ಮಿಂಚು, ಬೆನ್ನ ಹಿಂದೆಯೇ ಬರುವ ಸಿಡಿಲಿನ ಅಬ್ಬರಗಳ ಬಗ್ಗೆ ಇಬ್ಬರೂ ಮನಸಾರೆ ಮಾತನಾಡಿದ್ದೆವು. ಸೂರ್ಯ ಪಡುವಣದಲ್ಲಿ ಮುಳುಗಲಾರಂಭಿಸಿದ್ದ. ಆತನಿಂದ ಹೊರಟ ಕೆಂಬಣ್ಣದ ರಶ್ಮಿ ನಿನ್ನ ಮುಖವನ್ನು ಸೋಕಿ ಅದ್ಭುತ ಚಿತ್ರಣವನ್ನು ಸೃಷ್ಟಿಸಿತ್ತು. ಅದನ್ನು ಅಂದು ನನ್ನ ಹೃದಯದಲ್ಲಿ ಸೆರೆ ಹಿಡಿದು ಅದಕ್ಕೊಂದು ಸುಂದರ ರೂಪ ಕೊಟ್ಟಿದ್ದೆ. ಮುಂದಿನ ಮಳೆಯ ವೇಳೆಗೆ ನಾನು ನಿನ್ನ ಹೃದಯದರಸನಾಗಿದ್ದೆ. ಒಂದೇ ಕೊಡೆಯ ಅಡಿಯಲ್ಲಿ ನಿಂತು ಇಬ್ಬರೂ ಹೆಗಲಿಗೆ ಹೆಗಲು ತಾಕಿಸಿ ನಡೆಯುತ್ತಾ ಸಾಗಿದ್ದೆವು.

ಆದರೆ ೬ ತಿಂಗಳ ಹಿಂದೆ ನೀನು ಕೆಲಸಕ್ಕೆಂದು ಹೊರಟು ನಿಂತವಳು ಯಾಕೋ ಎಲ್ಲವನ್ನೂ ಮರೆತ ಹಾಗಿದೆ. ಅದಕ್ಕೆ ಮಳೆ ಆರಂಭವಾದ ಈ ದಿನದಲ್ಲಿ ನಿನಗೆ ಮತ್ತೆ ಎಲ್ಲವನ್ನೂ ನೆನಪಿಸುತ್ತಿದ್ದೇನೆ. ಏನಕ್ಕೂ ಪತ್ರ ಲಭಿಸಿದ ತಕ್ಷಣ ಫೋನ್ ಮಾಡು.

ಮಳೆಯಲ್ಲಿ ಜತೆ ಇದ್ದವ

No comments: