Tuesday, January 27, 2009

ಗ್ರಹಣವೆಂದು ಅಮ್ಮನ ಅಲಿಖಿತ ಶಾಸನ ಅವಳಿಗೇನು ಗೊತ್ತು ನನ್ನ ಮನ ವೇದನೆ...

ಮುಂ‘ಗೋಪಿ’
ಐ ಹೇಟ್ ಯೂ, ಹೇಟ್ ಯೂ. ನಿಜವಾಗ್ಲೂ ನಿನ್ನ ಜತೆ ಠೂ. ಎಷ್ಟು ಕೋಪ ಬರುತ್ತೆ ಗೊತ್ತಾ? ಬೆಳಗ್ಗೆ ಫೋನ್ ಮಾಡಿದರೆ ಕೆಲಸದ ಬ್ಯುಸಿ. ರಾತ್ರಿ ಬಂದು ಮಲಗಿದರೆ ನೀನು ಕುಂಭಕರ್ಣ ವಂಶಜ. ಫೋನ್ ಮಾಡಿದ್ರೂ ಎಚ್ಚರವಾಗಲ್ಲ ನಿನಗೆ. ನಿನಗೇನು ಗೊತ್ತು ನನ್ನ ಪಾಡು. ಅದಕ್ಕೆ ಒಂದೇ ಒಂದು ಸಾರಿ ಬಂದು ಹೋಗು ಈ ಹೃದಯದರಸಿಯ ಮನೆಗೆ, ಪ್ಲೀಸ್.
ಮೊನ್ನೆ ಸೂರ್‍ಯಗ್ರಹಣದ ದಿನ ಮಧ್ಯಾಹ್ನ ನಿನ್ನ ನೋಡಬೇಕೆಂದು ಹೊರಡ್ತಾ ಇದ್ದೆ. ತಲೆ ಬಾಚಿ ಮುಡಿಗೆ ಮಲ್ಲಿಗೆ ಏರಿಸುತ್ತಾ ಇದ್ದೆ. ಅಮ್ಮ ಬಂದು ಗ್ರಹಣ ದೋಷದ ಬಗ್ಗೆ ಹೇಳಲು ಆರಂಭಿಸಿದಳು. ಈ ಹೊತ್ತಲ್ಲಿ ಮನೆ ಹೊರಗೆ ಕಾಲಿಡಬೇಡ ಎಂಬ ಅಲಿಖಿತ ಶಾಸನವನ್ನೂ ಹೊರಡಿಸಿದಳು. ಅವಳಿಗೆ ಎಲ್ಲಿ ಅರ್ಥವಾಗುತ್ತೆ ನಮ್ಮಂತಹ ಪ್ರೇಮಿಗಳ ಪಾಡು. ಅವಳು ಬಂದಿಲ್ಲಾ ಅಂದರೆ ನಾನು ನಿನ್ನ ನಿಜವಾಗಲೂ ಕಾಯಿಸುತ್ತಿರಲಿಲ್ಲ. ಹೇಳದೇ ಬಂದು ಬಿಡುತ್ತಿದ್ದೆ. ಅಂದು ಬಂದಿಲ್ಲ ಎಂದು ಕೋಪ ಯಾಕೆ? ಇನ್ನೇನು ಸಾಹಿತ್ಯ ಸಮ್ಮೇಳನ ಆರಂಭವಾಗುತ್ತದೆ. ನನಗೆ ನೀನು, ನಿನಗೆ ನಾನು ಇಷ್ಟವಾದಂತೆ ಇಬ್ಬರಿಗೂ ಸಾಹಿತ್ಯ ಇಷ್ಟ . ಕಳೆದ ಬಾರಿ ಪ್ರೇಮಿಗಳ ಆದರ್ಶ ಶ್ರೀಕೃಷ್ಣನ ನಾಡಿನಲ್ಲಿ ಸಮ್ಮೇಳನದ ನಡುವೆ ನಮ್ಮಿಬ್ಬರ ಸಂಭ್ರಮವಿತ್ತು. ಈ ಬಾರಿ ಚಿತ್ರದುರ್ಗದ ಕಲ್ಲಿನ ಕೋಟೆಗಳ ನಡುವೆ ಸಮ್ಮೇಳನ. ಅಸಂಖ್ಯ ಗೋಷ್ಠಿಗಳ ನಡುವೆ ಅಲ್ಲಿರುವ ನಾವೂ ಸಂಭ್ರಮಿಸಬೇಕು. ಕವಿಗೋಷ್ಠಿಗಳಲ್ಲಿ ಕೂತು ಮಜಾ ಮಾಡಬೇಕು.
ಅಲ್ಲಿನ ಸಾಹಿತ್ಯದ ಸಂತೆಯಲ್ಲಿ ಎಲ್ಲವನ್ನೂ ನೋಡಿ ಕಣ್ಣು ತುಂಬಿಕೊಳ್ಳೋಣ. ಹಾಗಂತಾ ನೀನು ಅಲ್ಲಿ ಬರುವ ಹುಡುಗಿಯರ ಮೇಲೆ ಕಣ್ಣು ಹಾಕಿದೆಯೋ ಹುಷಾರ್!
ಹಾಂ ಈ ಸಾರಿ ನನಗೆ ಇಷ್ಟವಾದ ಪುಸ್ತಕ ಕೊಡಿಸಬೇಕು. ಆ ಆಸೆಯಿಂದಲೇ ನೀನು ಬರುವ ಬಸ್ಸಿಗಾಗಿ ಕಾಯುತ್ತಾ ಇರ್ತೀನಿ. ನೀನು ಬಂದಿಳಿಯುವುದು ಅಮೃತ ಘಳಿಗೆ!
ನಿನ್ನ ತನು

2 comments:

ತೇಜಸ್ವಿನಿ ಹೆಗಡೆ said...

ಪ್ರೀತಿ ತುಂಬಿದ ಓಲೆ ಚೆನ್ನಾಗಿದೆ. "ಮನ ವೇದನೆ" ಎಂದಾಗಿದೆ.. "ಮನದ ವೇದನೆ" ಇಲ್ಲಾ ’ಮನೋವೇದನೆ" ಆಗಬೇಕು. ದಯವಿಟ್ಟು ಗಮನಿಸಿ. ಬರೆಯುತ್ತಿರಿ. ಬರುತ್ತಿರುವೆ.

ಚಿತ್ರಾ ಸಂತೋಷ್ said...

ಮುಂದಿನ ಓಲೆ ಯಾವಾಗ ಮಾರಾಯ್ರೆ? ಬರೆಯೋಕೆ ಟೈಮ್ ಇಲ್ವಾ? ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಬಂದ್ರಾ? (:)
-ಚಿತ್ರಾ